Monday, May 5, 2014

ಮಹಾಸ್ಫೋಟದ ಮೊದಲ ಕಂಪನಗಳ ಮಹತ್ತರ ಶೋಧನೆ

ನಮ್ಮ ವಿಶ್ವ ಹಿಗ್ಗುತ್ತಿದೆಯೇ?
ನಮ್ಮ ವಿಶ್ವ ಅಸ್ತಿತ್ವಕ್ಕೆ ಬಂದಾಗಿನಿಂದ ಸದಾ ಹಿಗ್ಗುತ್ತಿದೆಯೇ? ಅದು ಅಸ್ತಿತ್ವಕ್ಕೆ ಬಂದ ಕ್ಷಣಾರ್ಧದಲ್ಲಿ ಅತಿವೇಗದಿಂದ ಹಿಗ್ಗಿದೆಯೇ? ಅಥವಾ ಜಗತ್ತಿಗೆ ಮೊದಲೂ ಇಲ್ಲ, ಕೊನೆಯೂ ಇಲ್ಲದೆ ಸ್ಥಿರವಾಗಿ ಹೇಗಿದೆಯೋ ಸದಾ ಹಾಗೇ ಇದೆಯೇ? ಇತ್ಯಾದಿ ಪ್ರಶ್ನೆಗಳಿಗೆ ಉತ್ತರ ಕಂಡುಕೊಳ್ಳಲು ಪ್ರಯತ್ನಗಳು ನಡೆಯುತ್ತಿವೆ. ಕಳೆದ ವಾರ ಅಮೇರಿಕಾದ ಹಾರ್ವರ್ಡ್ -ಸ್ಮಿತ್ಸೋನಿಯನ್ ಖಗೋಳಭೌತ ಸಂಸ್ಥೆಯ ವಿಜ್ಞಾನಿಗಳು ಈ ವಿಷಯ ಕುರಿತಂತೆ ಅಧ್ಬುತ ಶೋಧನೆಯೊಂದಕ್ಕೆ ಕಾರಣರಾಗಿದ್ದಾರೆ. 'ವಿಶ್ವ ಹಿನ್ನೆಲೆ ಕಿರಣ' (ಕಾಸ್ಮಿಕ್ ಮೈಕ್ರೋವೇವ್ ಬ್ಯಾಕ್ ಗ್ರೌಂಡ್  ರೇಡಿಯೇಷನ್) ಗಳಲ್ಲಿ ಅಡಕವಾಗಿರುವ 'ಆದಿಸ್ವರೂಪದ' ಗುರುತ್ವಾಕರ್ಷಣ ತರಂಗಗಳು ಇರುವುದನ್ನು ಪತ್ತೆ ಹಚ್ಚಿದ್ದಾರೆ. ಇದು ನಮ್ಮ 'ವಿಶ್ವ ಹಿಗ್ಗುತ್ತಿರುವ (ಕಾಸ್ಮಿಕ್ ಇನ್ ಫ಼್ಲೆಷನ್) ಸಿದ್ದಾಂತ'ಕ್ಕೆ ದೊಡ್ಡ ಪುರಾವೆ ಒದಗಿಸಿದೆ. ಈ ಶೋಧನೆ ಹಿಗ್ಸ್-ಬೋಸಾನ್ ಮೂಲಕಣದ ಆವಿಷ್ಕಾರದಷ್ಟೇ ಮಹತ್ವ ಹೊಂದಿದೆ. ಈ ಆವಿಷ್ಕಾರದಿಂದಾಗಿ 'ಆದಿಸ್ವರೂಪದ' ಗುರುತ್ವಾಕರ್ಷಣ ತರಂಗಗಳ ಉದ್ಭವಕ್ಕೆ ಕಾರಣವಾಗಿರುವ ಪ್ರಕ್ರಿಯೆಗಳನ್ನು ಅರಿಯಲು ಹಾಗೂ ಮಹಾಸ್ಫೋಟ ಸಮಯದಲ್ಲಿ ವಿಶ್ವದ ಹಿಗ್ಗುವಿಕೆಗೆ ಕಾರಣಗಳನ್ನು ತಿಳಿಯಲು ಸಾಧ್ಯವಾಗುತ್ತದೆ.
'ಆದಿಸ್ವರೂಪದ' ಗುರುತ್ವಾಕರ್ಷಣ ತರಂಗಗಳು ಮತ್ತು 'ವಿಶ್ವ ಹಿನ್ನೆಲೆ ಕಿರಣ' ಗಳಿಗೂ ಇರುವ ವ್ಯತ್ಯಾಸ ಏನು?
ಗುರುತ್ವದ ತರಂಗಗಳು ವಿಶ್ವದೆಲ್ಲೆಡೆ ವ್ಯಾಪಿಸಿದ್ದು ಅಲೆಗಳೋಪಾದಿಯಲ್ಲಿ ಶಕ್ತಿಯನ್ನು ಕೊಂಡೊಯ್ಯುತ್ತವೆ. ಇಂಥಹ ತರಂಗಗಳು ಇವೆಯೆಂದು 1916 ರಲ್ಲಿ ಆಲ್ಬರ್ಟ್  ಐನ್ ಸ್ಟೀನ್  ತನ್ನ 'ಸಾಮಾನ್ಯ ಸಾಪೇಕ್ಷ ಸಿದ್ದಾಂತ' ದಲ್ಲಿ ತರ್ಕಿಸಿದ್ದ. ಗುರುತ್ವದ ತರಂಗಗಳು ಇರುವುದು ಪರೋಕ್ಷವಾಗಿ ತಿಳಿದಿದ್ದರೂ ಅವುಗಳನ್ನು ನೇರವಾಗಿ ಪರೀಕ್ಷಿಸುವುದು ಸಾಧ್ಯವಾಗಿರಲಿಲ್ಲ. ಏಕೆಂದರೆ ಅವು ಪದಾರ್ಥವೊಂದರ ಸಣ್ಣಾತಿಸಣ್ಣ ಕಣವಾದ ಪರಮಾಣುವಿಗೆ ಹೋಲಿಸಿದರೆ ಗಾತ್ರದಲ್ಲಿ ದಶಲಕ್ಷ ಪಟ್ಟು ಸಣ್ಣವು. ಉದಾಹರಣೆಗೆ, ಕೆರೆಯೊಂದರ ಮೇಲ್ಭಾಗವನ್ನು ನಾವು ದೂರದಿಂದ ಗಮನಿಸಿದರೆ ಅದು ಪ್ರಶಾಂತವಾಗಿರುವಂತೆ ಕಾಣುತ್ತದೆ. ನಾವು ಅತಿ ಹತ್ತಿರದಿಂದ ನೋಡಿದಾಗ ಮಾತ್ರ ಕೆರೆಯ ನೀರಿನ ಮೇಲ್ಭಾಗದ ಅಲೆಗಳು, ಇತ್ಯಾದಿ ವಿವರಗಳನ್ನು ಗಮನಿಸಲು ಸಾಧ್ಯ.
ನಮ್ಮ ವಿಶ್ವ ಸುಮಾರು 1400 ಕೋಟಿ ವರ್ಷಗಳ ಹಿಂದೆ ಮಹಾಸ್ಫೋಟದ ಮೂಲಕ ಅಸ್ತಿತ್ವಕ್ಕೆ ಬಂದಿದೆ. ಮಹಾಸ್ಫೋಟ ಸಂಭವಿಸಿದಾಕ್ಷಣದ ಸೆಕೆಂಡಿನ ನೂರು ಕೋಟಿ ಭಾಗಗಳಲ್ಲಿ ಮೊದಲ ಭಾಗದಲ್ಲಿ ವಿಶ್ವ ಅತಿ ವೇಗೋತ್ಕರ್ಷದಿಂದ ಹಿಗ್ಗತೊಡಗಿ ನಮ್ಮ ದೂರದರ್ಶಕಗಳಿಗೂ ಕಾಣಸಿಗದಷ್ಟು ವ್ಯಾಪಿಸಿತು, ನಂತರ ನಿಧಾನಗೊಂಡಿತು. ಇದನ್ನು ವಿಶ್ವದ ಹಿಗ್ಗುವಿಕೆ ಎನ್ನುತ್ತಾರೆ. ಈ ಸಂದರ್ಭದಲ್ಲಿ ಉದ್ಭವಿಸಿರುವುದು 'ಆದಿಸ್ವರೂಪದ' ಗುರುತ್ವಾಕರ್ಷಣ ತರಂಗಗಳು'. 
ಇದಾದ 3,80,000 ವರ್ಷಗಳ ನಂತರ, ಪದಾರ್ಥವು ಒಗ್ಗೂಡತೊಡಗಿ ಸ್ಫೋಟದ ಶಕ್ತಿಯು ಎಲ್ಲೆಡೆ ಅಡೆತಡೆಯಿಲ್ಲದೆ ಪಸರಿಸತೊಡಗಿತು. ಈ ಅವಶೇಷ ಶಕ್ತಿಯನ್ನೇ 'ವಿಶ್ವ ಹಿನ್ನೆಲೆ ಕಿರಣ' ಎಂದು ಕರೆಯುವುದು.
ಸಾಮಾನ್ಯ ಸಾಪೇಕ್ಷತೆ ಎಂದರೇನು?
ಗಣಿತದ ವಿಧಾನದ ಮುಖೇನಾ ಗುರುತ್ವ ಶಕ್ತಿಯನ್ನು ಐನ್ ಸ್ಟೀನ್  ವಿವರಿಸಿದ್ದು, ಅದನ್ನು ಸಾಮಾನ್ಯ ಸಾಪೇಕ್ಷ ಸಿದ್ದಾಂತ ಎಂದು ಕರೆದಿದ್ದಾನೆ. ಇದರಲ್ಲಿ 'ಸ್ಥಳ-ಕಾಲ' ಎಂಬ ಎರಡು ಪರಿಕಲ್ಪನೆಗಳು ಮುಖ್ಯ. ಪದಾರ್ಥವೊಂದರಲ್ಲಿ ದ್ರವ್ಯ ಮತ್ತು ಶಕ್ತಿ ಇರುವುದು ನಮಗೆ ತಿಳಿದಿದೆ. ದ್ರವ್ಯ ಮತ್ತು ಶಕ್ತಿ ಇವೆರಡೂ 'ಸ್ಥಳ-ಕಾಲ'ಗಳ ನಿರಂತತೆಯನ್ನು ವಕ್ರಗೊಳಿಸುತ್ತವೆ. ಉದಾಹರಣೆಗೆ, ನೀರು ಅಥವಾ ರಟ್ಟಿನ ಮೇಲೆ ಅತಿಭಾರದ ವಸ್ತುವೊಂದನ್ನು ಇಟ್ಟಾಗ ನೀರು ಅಥವಾ ರಟ್ಟು ವಕ್ರಗೊಳ್ಳುವಂತೆ. ಈ ವಕ್ರತೆಯು ಗುರುತ್ವಾಕರ್ಷಣ ಶಕ್ತಿಯನ್ನು ಉಂಟು ಮಾಡುತ್ತದೆ. ಗುರುತ್ವ ತರಂಗಗಳು 'ಸ್ಥಳ-ಕಾಲ'ಗಳ ನಿರಂತತೆಯಲ್ಲಿರುವ ಸಣ್ಣಾತಿಸಣ್ಣ ಅಲೆಗಳು. ಗುರುತ್ವ ಶಕ್ತಿಯು ಕಾಲದ ಮೇಲೆ ಹೇಗೆ ಪರಿಣಾಮ ಬೀರುತ್ತದೆಂದು ಸಾಪೇಕ್ಷ ಸಿದ್ದಾಂತ ತಿಳಿಸುತ್ತದೆ. ಉದಾಹರಣೆಗೆ, ನಾವೆಲ್ಲಿದ್ದೇವೆಂದು ನಿಖರವಾಗಿ ಹೇಳಲು ಉಪಗ್ರಹ ಭೂಪಟದಲ್ಲಿ ಗುರುತ್ವ ಶಕ್ತಿಯನ್ನು ಲೆಕ್ಕಕ್ಕೆ ತೆಗೆದುಕೊಳ್ಳಬೇಕು.

ಗುರುತ್ವಕರ್ಷಣ ತರಂಗಗಳನ್ನು ಕಂಡುಹಿಡಿದ್ದದ್ದು ಹೇಗೆ?
ಆಕಾಶದ ವಿವಿಧ ಭಾಗಗಳಿಂದ ಬರುತ್ತಿರುವ ಸೂಕ್ಷ್ಮ ಕಿರಣಗಳ ಶೋಧನೆ ನಡೆಸುತ್ತಿದ್ದ ಅಮೇರಿಕಾದ ವಿಜ್ಞಾನಿಗಳು 1964ರಲ್ಲಿ ರೇಡಿಯೋ ದೂರದರ್ಶಕ ಬಳಸಿ 'ವಿಶ್ವ ಹಿನ್ನೆಲೆ ಕಿರಣ'ವನ್ನು ಕಂಡುಹಿಡಿದರು. 'ವಿಶ್ವ ಹಿನ್ನೆಲೆ ಕಿರಣ'ವು ಅತಿಶೀತಲ ತಾಪಮಾನ ಮೈನಸ್ 737 ಡಿಗ್ರಿ ಸೆಲ್ಸಿಯಸ್ ಹೊಂದಿದೆ. ಇವುಗಳನ್ನು ಮತ್ತಷ್ಟು ಶೋಧಿಸಲು 1992 ರಲ್ಲಿ ಕೋಬ್ (ಸಿಒಬಿಇ) ಎಂಬ ಉಪಗ್ರಹವನ್ನು ಬಳಸಲಾಯಿತು. ಇದರಿಂದ ಬೇರೆ ಬೇರೆ ಜಾಗದ ಸಾಂದ್ರತೆಗನುಗುಣವಾಗಿ ಉಷ್ಣಾಂಶದಲ್ಲಿ ವ್ಯತ್ಯಾಸವಿರುವುದು ತಿಳಿಯಿತು. ಇಂದಿನ ನಕ್ಷತ್ರಗಳು ಮತ್ತು ನಕ್ಷತ್ರ ಸಮೂಹಗಳ ರಚನೆಗಳನ್ನು ಈ ವಿಭಿನ್ನ ಸಾಂದ್ರತೆಯು ಬೀಜಾಂಕುರದಂತೆ ಪ್ರತಿನಿಧಿಸುತ್ತದೆ ಎನ್ನಲಾಗುತ್ತದೆ.
ಬೆಳಕು ತರಂಗದಂತೆ ಕೆಲವೊಂದು ದಿಕ್ಕಿನಲ್ಲಿ ಹೊಯ್ದಾಡುತ್ತದೆ. ಇದನ್ನು ಧ್ರುವೀಕರಣ ಎನ್ನುತ್ತಾರೆ. ಆ ಸಂದರ್ಭದಲ್ಲಿ ರೂಪುಗೊಂಡ ಪ್ರತಿ ಪೋಟಾನ್ ಗೆ  ಈ ಧ್ರುವೀಕರಣವಿರುತ್ತದೆ. ಆದರೆ ಗುರುತ್ವವು ಬೆಳಕನ್ನು ಒಳಗೊಂಡಂತೆ ವಿಶ್ವದಲ್ಲಿರುವ ಎಲ್ಲವನ್ನೂ ವಕ್ರಗೊಳಿಸುತ್ತದೆ. 'ವಿಶ್ವ ಹಿನ್ನೆಲೆ ಕಿರಣ'ವು ನಕ್ಷತ್ರಗಳು ಮತ್ತು ನಕ್ಷತ್ರ ಸಮೂಹಗಳ ಅಕ್ಕಪಕ್ಕದಲ್ಲಿ ವಿಶ್ವದ ಮೂಲಕ ಚಲಿಸುವಾಗ ಅಷ್ಟು ದೊಡ್ಡ ಆಕಾಶಕಾಯಗಳ ಗುರುತ್ವಶಕ್ತಿಯಿಂದಾಗಿ ವಕ್ರಗೊಳ್ಳುತ್ತದೆ. ಹೀಗೆ ವಕ್ರಗೊಂಡಾಗ ಬಿ-ವಿಧಾನದ ಧ್ರುವೀಕರಣ ಉಂಟಾಗುತ್ತದೆ. ಕಳೆದ ವಾರ ದಕ್ಷಿಣ ಧ್ರುವದ ಬಳಿ ಬೈಸೆಪ್-2 ಎಂಬ ದೂರದರ್ಶಕವು 'ವಿಶ್ವ ಹಿನ್ನೆಲೆ ಕಿರಣ'ದಲ್ಲಿರುವ ಬಿ-ವಿಧಾನದ ಗುರುತ್ವಕರ್ಷಣ ತರಂಗಗಳನ್ನು ದಾಖಲಿಸಿದೆ.
ವಿಶ್ವದ ವೇಗೋತ್ಕರ್ಷ, ಹಿಗ್ಗುವಿಕೆ, ಇತ್ಯಾದಿ ಎಂದರೇನು?
1929ರಲ್ಲಿ ಹಬಲ್ ಎಂಬ ಪ್ರಖ್ಯಾತ ಖಗೋಳವಿಜ್ಞಾನಿ ಅತಿ ಶಕ್ತಿಶಾಲಿ ದೂರದರ್ಶಕಗಳನ್ನು ಬಳಸಿದ. ಅದರಲ್ಲಿ ದೂರದ ಆಕಾಶಕಾಯಗಳು ದೂರ ದೂರ ಸರಿಯುತ್ತಿರುವುದನ್ನು ಗಮನಿಸಿ ವಿಶ್ವ ವಿಸ್ತಾರವಾಗುತ್ತಿದೆ ಎಂದು ಪ್ರತಿಪಾದಿಸಿದ. 1927ರಲ್ಲಿ ಬೆಲ್ಜಿಯಂ ದೇಶದ ಪಾದ್ರಿ ಮತ್ತು ಖಗೋಳವಿಜ್ಞಾನಿ ಜಾರ್ಜ್ ಲಿಮೈಟ್ರೆ ಮಹಾಸ್ಫೋಟದ ಸಿದ್ದಾಂತವನ್ನು ನೆನ್ನೆಯಿಲ್ಲದ ದಿನ ಎಂದು ಕರೆದ. ಏಕೆಂದರೆ ಮಹಾಸ್ಫೋಟವೆಂಬುದು ಕಾಲ ಮತ್ತು ಸ್ಥಳ ಆರಂಭವಾದ ಕ್ಷಣವಾಗಿತ್ತು.
ಮಹಾಸ್ಫೋಟ ಸಂಭವಿಸಿದಾಗಿನಿಂದ ಸ್ಥಳದ ಉದ್ದಕ್ಕೂ ದ್ರವ್ಯವನ್ನು ಏಕತೆರನಾಗಿ ಕೂರಿಸಲು ವಿಜ್ಞಾನಿಗಳು ಹೆಣಗುತ್ತಿದ್ದರು. ಹೀಗಾಗಿ ಮಹಾಸ್ಫೋಟ ಸಂಭವಿಸಿದ ಸೆಕೆಂಡಿನ ಮೊದಲ ಕ್ಷಣಾರ್ಧದಲ್ಲಿ ವಿಶ್ವ ತೀವ್ರಗತಿಯಲ್ಲಿ ವಿಸ್ತರಣೆ ಅಥವಾ ಹಿಗ್ಗಿದೆ ಎಂದು 1970ರಿಂದೀಚೆಗೆ ಪ್ರತಿಪಾದಿಸತೊಡಗಿದರು. ಆದರೆ ಇದನ್ನು ಖಾತರಿಪಡಿಸಿಕೊಳ್ಳುವುದೇ ಸಮಸ್ಯೆಯಾಗಿತ್ತು. ವಿಶ್ವ ಹಿಗ್ಗಿದ್ದಲ್ಲಿ ಮಾತ್ರವೇ ಆದಿಸ್ವರೂಪದ ಗುರುತ್ವ ತರಂಗಗಳು ರೂಪುಗೊಳ್ಳಲು ಸಾಧ್ಯವಿತ್ತು. ಇದೀಗ ಆದಿಸ್ವರೂಪದ ಗುರುತ್ವ ತರಂಗಗಳನ್ನು ದಾಖಲಿಸಲು ಸಾಧ್ಯವಾಗಿರುವುದರಿಂದ ಮಹಾಸ್ಫೋಟದ ಸೆಕೆಂಡಿನ ಮೊದಲ ಕ್ಷಣಾರ್ಧದಲ್ಲಿ ವಿಶ್ವ ವೇಗದಿಂದ ಹಿಗ್ಗಿದೆ ಎಂದು ಅರ್ಥ.
ಮುಂದಿನ ಸಂಶೋಧನೆಯ ಹಾದಿ ಯಾವ ಕಡೆ?
ಐನ್ ಸ್ಟೀನ್  ಸಾಪೇಕ್ಷ ಸಿದ್ದಾಂತವು ಗುರುತ್ವಶಕ್ತಿ ಮತ್ತು ವಿಶ್ವವನ್ನು ಇಡಿಯಾಗಿ ವಿವರಿಸುತ್ತದೆ. ಆದರೆ ಅತಿಸೂಕ್ಷ್ಮಕಣ ಭೌತಶಾಸ್ತ್ರವು (ಕ್ವಾಂಟಮ್ ಫಿಸಿಕ್ಸ್) ಪದಾರ್ಥಗಳ ಸಣ್ಣಾತಿಸಣ್ಣ ಕಣಗಳ ಒಳವಿಶ್ವವನ್ನು ಮತ್ತು ನಿಸರ್ಗದ ಇತರೆ ಬಲಗಳಾದ ಪ್ರಬಲ ಮತ್ತು ದುರ್ಬಲ ಪರಮಾಣು ಬಲಗಳು ಮತ್ತು ವಿದ್ಯುದಾಯಸ್ಕಾಂತೀಯ ಬಲಗಳ ಕುರಿತು ವಿವರಿಸುತ್ತದೆ. ಕಳೆದ ನೂರು ವರ್ಷಗಳಿಂದ ಇವೆಲ್ಲ ವಿವಿಧ ಸಿದ್ದಾಂತಗಳು ಹೇಗೆ ಒಂದೇ ವಿವರಣೆ ನೀಡುತ್ತವೆ ಎಂದು ವಿಜ್ಞಾನಿಗಳು ಜಿಜ್ಞಾಸೆ ನಡೆಸುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ಬಿಡಿ ಬಿಡಿ ಸಿದ್ದಾಂತಗಳನ್ನು ಒಗ್ಗೂಡಿಸಿ ಐಕ್ಯ ಸಿದ್ದಾಂತ ರೂಪಿಸುವುದು ಮುಂದಿನ ಕಾರ್ಯಭಾರವಾಗಿದೆ.
*************

Wednesday, October 30, 2013

ವಾಯೇಜರ್ ಗಗನ ನೌಕೆಗಳು - 36 ವರ್ಷಗಳ ಕಾಲ 1900 ಕೋಟಿ ಕಿ.ಮೀ ದೂರ ಪಯಣ

ವಾಯೇಜರ್ ಗಗನನೌಕೆಗಳ ಪಯಣ:
1977ರಲ್ಲಿ ಅಮೇರಿಕಾದ ರಾಷ್ಟ್ರೀಯ ಬಾಹ್ಯಾಕಾಶ ಸಂಸ್ಥೆ (ನಾಸಾ) 'ವಾಯೇಜರ್ 1' ಮತ್ತು ಅದರ ಅವಳಿ ಗಗನನೌಕೆ 'ವಾಯೇಜರ್ 2' ಹೆಸರಿನ ಎರಡು ಗಗನನೌಕೆಗಳನ್ನು 16 ದಿನಗಳ ಅಂತರದಲ್ಲಿ ಗಗನಕ್ಕೆ ಹಾರಿಬಿಟ್ಟಿತು. ಇವೆರಡೂ ಇನ್ನೂ ತಮ್ಮ ಪಯಣವನ್ನು ಮುಂದುವರೆಸುತ್ತಾ ಸೌರವ್ಯೂಹದಾಚೆಗಿನ ಮಾಹಿತಿಯನ್ನು ನಮಗೆ ರವಾನಿಸುತ್ತಲೇ ಇವೆ. ಇವೆರಡೂ ಗಗನನೌಕೆಗಳು ಮೊದಲಿಗೆ ಗುರು ಮತ್ತು ಶನಿ ಗ್ರಹವನ್ನು ಹಾದು ಹೋಗಿ ನಂತರದಲ್ಲಿ ಯುರೇನಸ್ ಮತ್ತು ನೆಪ್ಚೂನ್ ಗ್ರಹಗಳನ್ನು ಹಾದು ಮುಂದೆ ಹೋಗಿವೆ. ಇಲ್ಲಿಂದಾಚೆಗೆ ಅಂತರನಕ್ಷತ್ರ ಪ್ರದೇಶವಿದೆ. ಅಂತರನಕ್ಷತ್ರ ಪ್ರದೇಶದಲ್ಲಿರುವ ಒತ್ತಡದಿಂದಾಗಿ ಸೂರ್ಯನ ಸೌರಮಾರುತಗಳ ವೇಗ ಇಲ್ಲಿ ಕಡಿಮೆಯಾಗುತ್ತದೆ. ಇದನ್ನು ಹೀಲೀಯೋಪಾಸ್ ಪ್ರದೇಶ ಎಂದು ಕರೆಯುತ್ತಾರೆ.
ಸೂರ್ಯನಿಂದ ನಮ್ಮ ಭೂಮಿ ಸುಮಾರು 15 ಕೋಟಿ ಕಿಲೋ ಮೀಟರ್ ದೂರದಲ್ಲಿದೆ. ಇದೀಗ ಇವೆರಡೂ ಗಗನನೌಕೆಗಳು ಸೂರ್ಯನಿಂದ 1900 ಕೋಟಿ ಕಿಲೋ ಮೀಟರ್ ದೂರದಲ್ಲಿ ಪಯಣಿಸುತ್ತಿವೆ. ಅಷ್ಟು ದೂರದಲ್ಲಿರುವ ಗಗನನೌಕೆಗಳಿಂದ ನಮ್ಮ ಭೂಮಿಗೆ ಸಂದೇಶ ರವಾನಿಸಲು ಅವುಗಳಿಂದ ಹೊರಡುವ ಸಿಗ್ನಲ್ಗಳು ಬೆಳಕಿನ ವೇಗದಲ್ಲಿ ಚಲಿಸಿ ಭೂಮಿಯನ್ನು 17 ಘಂಟೆಗಳಲ್ಲಿ ತಲುಪುತ್ತವೆ!
ಭೂಮಿಯಿಂದ ನಾವು ಎಷ್ಟು ದೂರ ಆಗಸದಾಚೆಗೆ ಪಯಣಿಸಬಹುದು? ಭೂಮಿಯಿಂದ ಗಗನ ನೌಕೆಗಳನ್ನು ನಾವು ಮಂಗಳ ಗ್ರಹಕ್ಕೂ ಕಳುಹಿಸಿ ಅಲ್ಲಿಯ ಚಿತ್ರಗಳನ್ನೆಲ್ಲ ನೋಡುತ್ತಿದ್ದೇವೆ. ಇನ್ನೂ ಮುಂದಕ್ಕೆ ಹೋಗಿ ನಮ್ಮ ಸೌರವ್ಯೂಹವನ್ನು ತೊರೆದು ನಾವು ಆಚೆಗೆ ಪಯಣಿಸಬಹುದೇ? ಸೌರಮಾರುತಗಳ ಪ್ರಭಾವಳಿ ಎಲ್ಲಿಯವರೆಗಿದೆ? ನಮ್ಮ ಸೌರವ್ಯೂಹದ ಆಚೆಗೆ, ನಮ್ಮ ಗೆಲಾಕ್ಸಿಯೊಳಗಿನ ಚಿತ್ರಣ ಹೇಗಿರಬಹುದು? ಇಂತಹ ಇನ್ನೂ ಹಲವು ಪ್ರಶ್ನೆಗಳಿಗೆ ಉತ್ತರ ನೀಡುವ ನಿಟ್ಟಿನಲ್ಲಿ ಅಮೇರಿಕಾದ ಗಗನ ನೌಕೆಗಳಾದ 'ವಾಯೇಜರ್ 1 & ವಾಯೇಜರ್ 2' ಸಹಾಯಕವಾಗುತ್ತಿವೆ. ಆರಂಭದಲ್ಲಿ ಗುರು ಮತ್ತು ಶನಿ ಗ್ರಹಗಳ ಕುರಿತು ಹೆಚ್ಚಿನ ಮಾಹಿತಿಗಾಗಿ ಉಡಾವಣೆಯಾದ ಈ ನೌಕೆಗಳು ಇದೀಗ ಹಿಂದೆಂದೂ ಕ್ರಮಿಸಿರದ ಅನತಿ ದೂರದ ಗಗನಪ್ರದೇಶಗಳನ್ನು ಶೋಧಿಸುತ್ತಾ ಮಾಹಿತಿ ರವಾನಿಸುತ್ತಿವೆ. ಹೌದು! ಕಳೆದ ವಾರವಷ್ಟೇ ಅವು ಅಂತರನಕ್ಷತ್ರ ಪ್ರದೇಶವನ್ನು ತಲುಪಿವೆ.
ನಮ್ಮ ಸೌರವ್ಯೂಹ ಮತ್ತು ನಕ್ಷತ್ರ ಸಮೂಹ:
ನಮ್ಮ ಸೌರವ್ಯೂಹವು 'ಕ್ಷೀರಪಥ' ಎಂದು ಕರೆಯಲಾಗುವ ಗೆಲಾಕ್ಸಿ (ನಕ್ಷತ್ರ ಸಮೂಹ) ಯಲ್ಲಿದೆ. ಈ ಗೆಲಾಕ್ಸಿಯಲ್ಲಿ ನಮ್ಮ ಸೂರ್ಯನ ರೀತಿಯ ಸುಮಾರು 10,000 ದಿಂದ 40,000 ಗಳಷ್ಟು ನಕ್ಷತ್ರಗಳಿವೆ ಎಂಬ ಅಂದಾಜಿದೆ. ಈ ನಕ್ಷತ್ರಗಳಿಗೆಲ್ಲ ನಮ್ಮ ಸೌರವ್ಯೂಹದ ತರಹ ಹಲವಾರು ಗ್ರಹಗಳಿವೆ. ನಮ್ಮ ವಿಶ್ವ ಅಥವಾ ಬ್ರಹ್ಮಾಂಡದಲ್ಲಿ ಎಷ್ಟು ನಕ್ಷತ್ರ ಸಮೂಹಗಳಿವೆ? ವಿಶ್ವ ಎಷ್ಟು ವಿಸ್ತಾರವಿದೆ? ಎಂದು ಹೇಳಲಾಗದು. ನಮ್ಮ ನಕ್ಷತ್ರವಾದ ಸೂರ್ಯ ಮತ್ತು ಸೂರ್ಯನಿಗೆ ಹತ್ತಿರುವಿರುವ ಇತರ ನಕ್ಷತ್ರಗಳ ನಡುವಿನ ಜಾಗವನ್ನು 'ಅಂತರನಕ್ಷತ್ರ ಪ್ರದೇಶ' ಎನ್ನುತ್ತಾರೆ. ಈ ಭಾಗ ಪ್ರಾಸ್ಮಾ ಮತ್ತು ಅಯಾನೀಕೃತ ಅನಿಲಗಳಿಂದ ಕೂಡಿದ್ದು, ಇವುಗಳನ್ನು ದೈತ್ಯ ನಕ್ಷತ್ರಗಳು ಮಿಲಿಯಾಂತರ ವರ್ಷಗಳ ಹಿಂದೆ ಇಲ್ಲಿಗೆ ತೂರಿವೆ, ಅಥವಾ ಮಿಲಿಯಾಂತರ ವರ್ಷಗಳ ಹಿಂದೆ ನಕ್ಷತ್ರಗಳ ಸಾವಿನಿಂದ ಇವು ಅಂತರನಕ್ಷತ್ರದಲ್ಲಿ ಚೆಲ್ಲಾಪಿಲ್ಲಿಯಾಗಿ ಹರಡಿವೆ ಎನ್ನಲಾಗಿದೆ.
ನಮ್ಮ ಸೌರವ್ಯೂಹ ಅಂದರೆ ಸೂರ್ಯ ಮತ್ತು ಅದರ ಸುತ್ತಲಿನ ಎಂಟು ಗ್ರಹಗಳವರೆಗೆ ಮಾತ್ರ ಅಂದುಕೊಂಡರೂ ಇದರಾಚೆಗಿರುವ ಊಟರ್್ ಮೋಡದವರೆಗೂ ಸೂರ್ಯನ ಗುರುತ್ವವೇ ಪ್ರಭಾವಶಾಲಿ. ಊಟರ್್ ಮೋಡದಾಚೆಗಷ್ಟೆ ಸೂರ್ಯನ ಗುರುತ್ವ ಕ್ಷೀಣಗೊಂಡು ಇತರೆ ನಕ್ಷತ್ರಗಳ ಗುರುತ್ವ ಪ್ರಭಾವಶಾಲಿಯಾಗುತ್ತದೆ. ಊಟರ್್ ಮೋಡ ಅತಿ ವಿಸ್ತಾರ ಪ್ರದೇಶವಾಗಿದ್ದು, ಸೂರ್ಯನಿಂದ 15,000 ಕೋಟಿ ಕಿ.ಮೀ ದೂರದಲ್ಲಿ ಆರಂಭವಾದರೆ ಸುಮಾರು 15 ಲಕ್ಷ ಕೋಟಿ ಕಿ.ಮೀ ವರೆಗೂ ಚಾಚಿದೆ.
ವಾಯೇಜರ್ ನೌಕೆಯಲ್ಲಿ ಏನೇನಿದೆ?
ಪ್ರತಿಯೊಂದು ವಾಯೇಜರ್ ಗಗನನೌಕೆಯೂ ಲಕ್ಷಾಂತರ ಸಂಖ್ಯೆಯ ಟ್ರಾನ್ಸಿಸ್ಟರ್ ಮತ್ತು ಕಂಪ್ಯೂಟರ್ ಪ್ರೋಗ್ರಾಂ ಗಳಿಂದಾಗಿದ್ದು, ಅತಿ ದೂರದ ಅಂತರಿಕ್ಷ ಪ್ರಯಾಣಕ್ಕೆ ವಿನ್ಯಾಸಗೊಳಿಸಲಾಗಿದೆ. ಇವುಗಳ ವೇಗ ಘಂಟೆಗೆ 36,000 ಕಿ.ಮೀ. ಅಪಾಯ ಪರಿಸ್ಥಿತಿಯಲ್ಲಿ, ಕ್ಷಣಾರ್ಧದಲ್ಲಿ ತಂತಾನು ಸುರಕ್ಷಿತ ಸ್ಥಿತಿಗೆ ತಂದುಕೊಳ್ಳಬಲ್ಲದು. ಗುರು ಗ್ರಹದ ಬಳಿ ಸಾಗುವಾಗ ಭೂಮಿಗಿಂತ 1000 ಪಟ್ಟು ಹೆಚ್ಚು ವಿಕಿರಣ ಬೀಳುವುದರಿಂದ ರಕ್ಷಿಸಲು ವಿಕಿರಣ-ನಿಯಂತ್ರಿಸುವ ಕವಚ ಹೊಂದಿದೆ. ಇದರಲ್ಲಿರುವ ಟೆಲಿವಿಷನ್ ಕ್ಯಾಮೆರಾಗಳು ಎಷ್ಟು ಶಕ್ತಿಯುತವಾಗಿವೆ ಎಂದರೆ ಇವುಗಳಿಂದ 1 ಕಿ.ಮೀ ದೂರದಲ್ಲಿರುವ ದಿನಪತ್ರಿಕೆಯನ್ನು ನಾವು ಓದಬಹುದು! ಮ್ಯಾಗ್ನೆಟೋಮೀಟರ್ಗಳು ಮತ್ತು ಇತರೆ ಉಪಕರಣಗಳಿಂದ ಹಲವು ಮಾಹಿತಿಗಳು ದೊರೆಯುತ್ತಿವೆ. ಗಗನನೌಕೆಯ ತೂಕ 773 ಕೆಜಿ ಇದ್ದರೆ, ಅದರಲ್ಲಿ 105 ಕೆಜಿ ವೈಜ್ಞಾನಿಕ ಉಪಕರಣಗಳಿವೆ. ಈ ನೌಕೆಗೆ ಅಗತ್ಯವಿರುವ ವಿದ್ಯುಚ್ಛಕ್ತಿಯನ್ನು ಪರಮಾಣು ವಿಕಿರಣ ಶಕ್ತಿ ಆಧಾರಿತ 3 ರೇಡಿಯೋ ಐಸೋಟೋಪ್ ಉಷ್ಣವಿದ್ಯುತ್ ಜನರೇಟರ್ಗಳಿಂದ ಪೂರೈಕೆಯಾಗುತ್ತದೆ.

ವಾಯೇಜರ್ ಗಳು ಇದುವರೆಗೆ ರವಾನಿಸಿರುವ ಮಾಹಿತಿ & ಚಿತ್ರಗಳು:
ಹಲವು ಗ್ರಹಗಳ ಅತಿ ಹತ್ತಿರದ ಚಿತ್ರಗಳನ್ನು ರವಾನಿಸಿದೆ. ಗುರು ಗ್ರಹದ ಉಪಗ್ರಹದ ಹೆಸರು 'ಲೊ' ಎಂದು. ಈ ಉಪಗ್ರಹದ ಮೇಲೆ ಆಸ್ಫೋಟಿಸುತ್ತಿರುವ ಜ್ಞಾಲಾಮುಖಿಯಿಂದ ಗಂಧಕ ಮತ್ತು ಗಂಧಕದ ಡೈ ಆಕ್ಸೈಡ್ಗಳು ನಮ್ಮ ಮೌಂಟ್ ಎವರೆಸ್ಟ್ ಹಿಮಶಿಖರಕ್ಕಿಂತ 30 ಪಟ್ಟು ಹೆಚ್ಚು ಎತ್ತರಕ್ಕೆ ಸಿಡಿಯುತ್ತಿರುವುದನ್ನು ಈ ಕ್ಯಾಮೆರಾಗಳು ದಾಖಲಿಸಿವೆ! ಗುರು ಗ್ರಹದಲ್ಲಿರುವ ಸಂಕೀರ್ಣ ಮೋಡ ರೂಪುಗೊಳ್ಳುವುದು, ಬಿರುಸಿನ ಮಾರುತಗಳು, ಇತ್ಯಾದಿ ಚಿತ್ರಗಳನ್ನು ರವಾನಸಿದೆ. ಶನಿ ಗ್ರಹದ ಸುತ್ತ ಸುಮಾರು 10,000 ಸಂಖ್ಯೆಯ ನೆಕ್ಲೇಸ್ ತರಹ ಹೊಳೆಯುವ ಎಳೆಗಳನ್ನು ಗುರುತಿಸಿದೆ. ಶನಿಯ ಅತಿ ದೊಡ್ಡ ಉಪಗ್ರಹ 'ಟೈಟಾನ್' ಮತ್ತು ಯುರೇನಸ್ ಗ್ರಹ ಕಗ್ಗತ್ತಲೆಯ ಪ್ರದೇಶಗಳಂತೆ ಕಂಡಿವೆ. ಸೌರವ್ಯೂಹದ ಕೊನೆಯ ಗ್ರಹ ನೆಪ್ಚೂನ್ನಲ್ಲಿ ಬೆಳಕು ಯುರೇನಸ್ ಗಿಂತಲೂ ಬರೇ ಅರ್ಧದಷ್ಟಿದೆ. ಅಂತರನಕ್ಷತ್ರ ಪ್ರದೇಶದಲ್ಲಿ ಗಗನನೌಕೆಗಳು ವಸ್ತುವಿನ ನಾಲ್ಕನೇ ಸ್ಥಿತಿ ಎನಿಸಿರುವ ಪ್ಲಾಸ್ಮಾದಲ್ಲಿ 40 ಸಲ ಮುಳುಗಿ ಎದ್ದಿರುವ ಮಾಹಿತಿಯೂ ಸಿಕ್ಕಿದೆ.

ಗೋಲ್ಡನ್ ರೆಕಾರ್ಡ್:
ವಾಯೇಜರ್ಗಳು ತಮ್ಮೊಂದಿಗೆ ಭೂಮಿಯ ಶಬ್ಧ ಮತ್ತು ಚಿತ್ರಗಳನ್ನೂ ಕೂಡ ಹೊತ್ತೊಯ್ಯುತ್ತಿವೆ. ಜೊತೆಗೆ ಭೂಮಿಯ ವಿಶ್ವದಲ್ಲಿ ಯಾವ ಕಡೆ ಇದೆಯೆಂಬ ದಿಕ್ಕಿನ ಮಾಹಿತಿಯನ್ನೂ ಕೂಡ ದಾಖಲೆ ರೂಪದಲ್ಲಿ ಹೊತ್ತೊಯ್ಯುತ್ತಿದೆ. ಇದನ್ನೇ ಗೋಲ್ಡನ್ ರೆಕಾರ್ಡ್ ಎನ್ನುತ್ತಾರೆ. ಅನ್ಯ ಗ್ರಹದಲ್ಲಿ ಅನ್ಯ ಜೀವಿಗಳೇನಾದರೂ ಒಂದು ಪಕ್ಷ ಇದ್ದಲ್ಲಿ ವಾಯೇಜರ್ ಹೊತ್ತೊಯ್ಯುತ್ತಿರುವ ದಾಖಲೆಗಳನ್ನು ಆಧರಿಸಿ ಅವು ಭೂಮಿಯನ್ನು ಪತ್ತೆ ಹಚ್ಚಲು ಸಾಧ್ಯವಾಗಲಿ ಎಂಬುದು ಆಶಯ!
*************
 

Friday, September 6, 2013

ವಿಚಾರವಾದಿ ಡಾ: ನರೇಂದ್ರ ದಾಬೋಲ್ಕರ್ ಕಗ್ಗೊಲೆ: ವೈಚಾರಿಕತೆಯ ಮೇಲಿನ ಧಾಳಿ

ಮೂಢನಂಬಿಕೆ, ಅಂಧಶ್ರದ್ಧೆ, ಕಂದಾಚಾರ ಹಾಗೂ ಜಾತಿ ತಾರತಮ್ಯಗಳ ವಿರುದ್ದ ಮಹಾರಾಷ್ಟ್ರದಲ್ಲಿ ಕಳೆದ 25 ವರ್ಷಗಳಿಂದ ಹೋರಾಟ ಮಾಡುತ್ತಿದ್ದ ಖ್ಯಾತ ವಿಚಾರವಾದಿ ಡಾ: ನರೇಂದ್ರ ದಾಬೋಲ್ಕರ್ ರವರನ್ನು ಎರಡು ವಾರಗಳ ಹಿಂದೆ ಕೊಲೆ ಮಾಡಿರುವುದು ಎಲ್ಲೆಡೆ ಪ್ರತಿಭಟನೆ ಮತ್ತು ಆತಂಕಕ್ಕೆ ಕಾರಣವಾಗಿದೆ. ಅವರು ದಿ: 20.08.2013 ರಂದು ವಾಯುವಿಹಾರಕ್ಕೆ ಹೋಗಿದ್ದಾಗ ಅವರನ್ನು ಸಮಾಜಘಾತುಕ ಶಕ್ತಿಗಳು ಗುಂಡಿಕ್ಕಿ ಕೊಂದಿದ್ದಾರೆ. ಮಾಯ, ಮಾಟ, ಮಂತ್ರಗಳಿಂದ ಅವರನ್ನು ಕೊಲ್ಲಲಾಗಿಲ್ಲ!


ಡಾ: ನರೇಂದ್ರ ದಾಬೋಲ್ಕರ್ ರವರು ಮೂಲತ: ಡಾಕ್ಟರ್ ಆಗಿದ್ದು, ಸಮಾಜವನ್ನು ಕಾಡುತ್ತಿರುವ ಪಿಡುಗುಗಳಾದ ಮೂಢನಂಬಿಕೆ, ಅಂಧಶ್ರದ್ಧೆ, ಕಂದಾಚಾರ ಹಾಗೂ ಜಾತಿ ತಾರತಮ್ಯಗಳ ವಿರುದ್ದ ಹೋರಾಡುವ ಸಲುವಾಗಿ ತಮ್ಮ ಜೀವನವನ್ನೇ ಅರ್ಪಿಸಿಕೊಂಡಿದ್ದರು. ಹಳ್ಳಿ ನಗರ ಪ್ರದೇಶಗಳ ಮೂಲೆ ಮೂಲೆಗಳಿಗೆ ತಮ್ಮ ಕಾರ್ಯಕರ್ತರೊಡನೆ ಹೋಗಿ ಬಾಬಾಗಳು, ಢೋಂಗಿ ಸ್ವಾಮೀಜಿಗಳು ಮತ್ತು ಇತರೆ ಧಾರ್ಮಿಕ ಕಪಟಿಗಳ ಬೂಟಾಟಿಕೆಗಳನ್ನು ಬಯಲಿಗೆಳೆಯುತ್ತಿದ್ದರು. ಅವರ ಜೀವದ ಮೇಲೆ ಹಲವಾರು ಬಾರಿ ಧಾಳಿಗಳೂ ನಡೆದಿದ್ದವು. ಅಂಧಶ್ರದ್ಧೆಗಳ ವಿರುದ್ದ ಹೋರಾಡುವ ಸಲುವಾಗಿ 'ಮಹಾರಾಷ್ಟ್ರ ಅಂಧಶ್ರದ್ಧೆ ನಿರ್ಮೂಲನಾ ಸಮಿತಿ' ಎಂಬ ಸಂಘಟನೆಯನ್ನು ಸ್ಥಾಪಿಸಿದ್ದರು. ಈ ಸಂಘಟನೆಯ ಒಂದು ವರ್ಷ ಪೂರಾ ಕಾರ್ಯಕ್ರಮಗಳು ಮುಂಚೆಯೇ ನಿಗಧಿಯಾಗಿರುತ್ತಿದ್ದವು. ಅಂಧಶ್ರದ್ಧೆ ನಿರ್ಮೂಲನೆಗಾಗಿ ಮಸೂದೆಯೊಂದನ್ನು ಜಾರಿಗೆ ತರಬೇಕೆಂದು ಕಳೆದ 18 ವರ್ಷಗಳಿಂದ ಅವರು ಹೋರಾಡುತ್ತಿದ್ದರೂ ಅದನ್ನು ಕಡೆಗಣಿಸಿದ್ದ ಮಹಾರಾಷ್ಟ್ರ ಸರ್ಕಾರ ಅವರು ಸತ್ತ 3 ದಿನದೊಳಗೆ ಆ ಮಸೂದೆಯನ್ನು ಅಂಗೀಕರಿಸಿದೆ!

ಗಣೇಶನ ಹಬ್ಬದ ಸಂದರ್ಭದಲ್ಲಿ ರಾಸಾಯನಿಕ ವಸ್ತುಗಳನ್ನು ಬಳಸಿಕೊಂಡು ಮಾಡುವ ವಿಗ್ರಹಗಳು ಪರಿಸರಕ್ಕೆ ಮಾರಕವಾಗಿರುವುದರಿಂದ ನೈಸರ್ಗಿಕ ಬಣ್ಣ ಮತ್ತು ಮಣ್ಣು ಬಳಸಿದ ವಿಗ್ರಹಗಳನ್ನೇ ಬಳಸಬೇಕೆಂದು ಹೈ ಕೋರ್ಟ್ ವರೆಗೂ ಹೋರಾಡಿ ಪರಿಸರ-ಸ್ನೇಹಿ ತೀರ್ಪು ಹೊರಬೀಳುವಲ್ಲಿ ಯಶಸ್ವಿಯಾಗಿದ್ದರು. ಹಳ್ಳಿಗಳಲ್ಲಿ ಜಾತಿ ತಾರತಮ್ಯದ ಕುರುಹಾದ ಕೆಳಜಾತಿ ಜನರಿಗೆ ಒಂದೇ ಕಡೆ ನೀರು ನೀಡದಿರುವ ವಿರುದ್ದ 'ಒಂದು ಹಳ್ಳಿ, ಒಂದು ಬಾವಿ' ಘೋಷಣೆಯಡಿ ಚಟುವಟಿಕೆಗಳನ್ನು ನಡೆಸುತ್ತಿದ್ದರು. ಜ್ಯೋತಿ ಬಾ ಪುಲೆ-ಸಾಹು-ಅಂಬೇಡ್ಕರ್ ರವರ ವಿಚಾರಧಾರೆಗಳಿಂದ ಪ್ರೇರಿತರಾಗಿದ್ದರು. ವೈಚಾರಿಕ ಲೇಖನಗಳನ್ನು ಒಳಗೊಂಡ ವಾರಪತ್ರಿಕೆ 'ಸಾಧನಾ' ದ ಸಂಪಾದಕರಾಗಿದ್ದರು. ಆದರೆ ಗಾಂಧಿಯನ್ನು ಹತ್ಯೆ ಮಾಡಿದ ಮತಾಂಧ ಮನಸ್ಥಿತಿಯೇ ಇವರನ್ನು ಬಲಿತೆಗೆದುಕೊಂಡಿದೆ.

ಮೂಢನಂಬಿಕೆ ಮತ್ತು ಅಂಧಶ್ರದ್ಧೆ ವಿರುದ್ದದ ಹೋರಾಟ ಮತ್ತು ವಿಚಾರವಾದಿಗಳು:
ಮೂಢನಂಬಿಕೆ ಮತ್ತು ಅಂಧಶ್ರದ್ಧೆಗಳನ್ನು ಬೆಳೆಸಿ ಜನರನ್ನು ವಂಚಿಸುವ ಹಾಗೂ ಶೋಷಣೆ ಮಾಡುವ,  ಆ ಮೂಲಕ ಸಮಾಜದಲ್ಲಿ ಹಣ ಮತ್ತು ಅಧಿಕಾರ ಗಳಿಸುವ ಶಕ್ತಿಗಳಿಗೆ ಯಾವಾಗಲೂ ಸ್ವತಂತ್ರ ಆಲೋಚನೆಯ, ತರ್ಕಿಸುವ ಮತ್ತು ಪ್ರಶ್ನಿಸುವ ಮನೋಭಾವದ ವೈಚಾರಿಕತೆ ಶತ್ರುವೇ ಸರಿ. ಇಂಥಹ ಮೂಢನಂಬಿಕೆಗಳು ಮತ್ತು ಕಂದಾಚಾರಗಳ ಕುರಿತಾಗಿ ವಿಚಾರವಾದಿಗಳ ಚಟುವಟಿಕೆಗಳಿಗೆ ಹೋಲಿಸಿದರೆ ಜನವಿಜ್ಞಾನ ಚಳುವಳಿಗೆ ತನ್ನದೇ ಆದ ಕಣ್ಣೋಟವಿದೆ. ಮೂಢನಂಬಿಕೆ ಮತ್ತು ಅಂಧಶ್ರದ್ಧೆಗಳ ಮೂಲ ಬೇರುಗಳು ತಿಳುವಳಿಕೆಯ ಕೊರತೆ ಅಥವಾ ಅಜ್ಞಾನ ಹಾಗೂ ಸಮಾಜದ ರಚನೆಯಲ್ಲಿ ಅಡಗಿದೆ. ಒಂದೆಡೆ ಅಜ್ಞಾನದಿಂದ ಮೂಢನಂಬಿಕೆ ಮತ್ತು ಅಂಧಶ್ರದ್ಧೆಗಳು ಬೆಳೆದರೆ, ಮತ್ತೊಂದೆಡೆ ಸಮಾಜದ ರಚನೆ ಅಂದರೆ ಸಮಾಜದಲ್ಲಿರುವ ಪಟ್ಟಭದ್ರ ಹಿತಾಸಕ್ತಿಗಳು ಮೂಢನಂಬಿಕೆಯನ್ನು ಮತ್ತಷ್ಟು ಪೋಷಿಸುತ್ತವೆ ಮಾತ್ರವಲ್ಲ ವಿಜ್ಞಾನದ ಕುರಿತು ಅಪನಂಬಿಕೆ ಹುಟ್ಟಿಸಲು ಸದಾ ಯತ್ನಿಸುತ್ತವೆ. ಸಮಾಜದ ರಚನೆ ಬದಲಾದಂತೆ ನಂಬಿಕೆಗಳೂ ಬದಲಾಗುತ್ತವೆ. ಸಮಾಜ ರಚನೆಯನ್ನು ಆಮೂಲಾಗ್ರ ಬದಲಿಸುವ, ಉಳ್ಳವರು ಮತ್ತು ಇಲ್ಲದವರ ಸಂಘರ್ಷ, ಹೋರಾಟಗಳ ಜೊತೆಗೆ ಮೂಢನಂಬಿಕೆ ಮತ್ತು ಕಂದಾಚಾರಗಳ ವಿರುದ್ದದ ಹೋರಾಟವನ್ನೂ ಬೆಸೆಯಬೇಕು. ವೈಜ್ಞಾನಿಕ ಮನೋಭಾವ ಬೆಳೆಸಲು ಶ್ರಮಿಸುತ್ತಾ ಮೂಢನಂಬಿಕೆ ಮತ್ತು ಕಂದಾಚಾರಗಳ ಕುರಿತು ಜನತೆಯ ನಡುವೆ ಜಾಗೃತಿ ಮೂಡಿಸಿ ಅವುಗಳನ್ನು ತೊಡೆಯಬೇಕು ಎನ್ನುವುದು ಜನವಿಜ್ಞಾನ ಚಳುವಳಿಯ ಕಣ್ಣೋಟ. ಸಮಾಜರಚನೆಯ ಬದಲಾವಣೆಗೆ ಕೈಹಾಕದೆ ಆ ಸಮಾಜದ ಮೂಢನಂಬಿಕೆ ಮತ್ತು ಕಂದಾಚಾರಗಳನ್ನು ಮಾತ್ರವೇ ಪ್ರಶ್ನಿಸುವುದರಿಂದ ಅವುಗಳನ್ನು ತೊಡೆದು ಹಾಕುವುದು ಸಾಧ್ಯವಿಲ್ಲ ಎಂಬುದನ್ನು ವಿಚಾರವಾದಿಗಳು ಮನಗಂಡಿಲ್ಲ.

ಆದರೆ ಡಾ: ನರೇಂದ್ರ ದಾಭೋಲ್ಕರ್ರವರ ವೈಶಿಷ್ಟ್ಯ ಮಾದರಿ ಇರುವುದು ಇಲ್ಲಿಯೇ. ಅವರು ವಿಚಾರವಾದಿಯಾಗಿ ಜಾತಿ ಪದ್ದತಿಯ ವಿರುದ್ದ ಹೋರಾಟವನ್ನೂ ಕೂಡ ಮೂಢನಂಬಿಕೆ ಮತ್ತು ಕಂದಾಚಾರ ವಿರುದ್ದ ಹೋರಾಟಗಳ ಜೊತೆಗೆ ಬೆಸೆದಿದ್ದರು.

ಡಾ: ನರೇಂದ್ರ ದಾಭೋಲ್ಕರ್ ರವರ ಮೇಲಿನ ಧಾಳಿ ಪ್ರತ್ಯೇಕ ಘಟನೆಯೇನಲ್ಲ. ಇತ್ತೀಚಿನ ವರ್ಷಗಳಲ್ಲಿ ವೈಚಾರಿಕತೆ, ವೈಜ್ಞಾನಿಕ ಮನೋಭಾವ, ಪ್ರಗತಿಪರ ವಿಚಾರಗಳು, ಇತ್ಯಾದಿ ಮೇಲೆ ತೀವ್ರಗೊಳ್ಳುತ್ತಿರುವ ಸರಣಿ ಧಾಳಿಗಳ ಪೈಕಿ ಅದೂ ಒಂದಷ್ಟೆ. ಪ್ರಗತಿಪರ ರಂಗ ಕರ್ಮಿ ಸಪ್ಧಾರ್ ಹಶ್ಮಿಯನ್ನು ಹಾಡು ಹಗಲೇ ಕೊಂದದ್ದು, ಕಲಾವಿದ ಎಂ.ಎಫ್ ಹುಸೇನ್ ರವರ ಕಲಾಕೃತಿಗಳನ್ನು ನಾಶಮಾಡಿ ಹತ್ಯೆ ಮಾಡಲು ಯತ್ನಿಸಿದ್ದು, ಹಲವು ಬರಹಗಾರರು, ಕಲಾವಿದರು, ಕಾರ್ಟೂನಿಸ್ಟರ ಮೇಲೆ, ಮಾಹಿತಿ ಹಕ್ಕು ಕಾರ್ಯಕರ್ತರ ಮೇಲೆ ನಿರಂತರವಾಗಿ ನಡೆಯುತ್ತಿರುವ ಸರಣಿ ಧಾಳಿಗಳಲ್ಲೊಂದು ಇದೊಂದಷ್ಟೆ. ಇದು ಬೆಳೆಯುತ್ತಿರುವ ಧಾರ್ಮಿಕ ಮೂಲಭೂತವಾದಿಗಳು ಮತ್ತು ಕೋಮುವಾದಿಗಳ ಶಕ್ತಿಯನ್ನು ತೋರಿಸುತ್ತದೆ.

ಇದು 16 ನೇ ಶತಮಾನದ ಖ್ಯಾತ ವಿಚಾರವಾದಿ ಜಿಯಾರ್ಡಿನೊ ಬ್ರುನೋ ವನ್ನು ಬೀದಿಯಲ್ಲಿ ಸುತ್ತು ಕೊಂದ ಘಟನೆ ಯನ್ನು ನೆನಪಿಸಿಕೊಳ್ಳಬಹುದು. ಆತ ವಿಚಾರವಾದಿ ಮಾತ್ರವೇ ಅಲ್ಲ, ಖಗೋಳವಿಜ್ಞಾನದಲ್ಲಿ ಕೊಪರ್ನಿಕಸ್ ಗಿಂತಲೂ ಒಂದು ಹೆಜ್ಜೆ ಮುಂದೆ ಹೋಗಿ ಸೂರ್ಯಕೇಂದ್ರಿತ ಮಾದರಿಯನ್ನು ಜನಪ್ರಿಯಗೊಳಿಸಿ, ಸೂರ್ಯ ಕೂಡ ಒಂದು ನಕ್ಷತ್ರ, ನಮ್ಮ ವಿಶ್ವದಲ್ಲಿ ಹಲವಾರು ನಕ್ಷತ್ರಗಳು ಗ್ರಹಗಳು ಹೀಗೆ ವ್ಯವಸ್ಥಿತವಾಗಿ ಭೌತಿಕ ನಿಯಮನುಸಾರ ಅಸ್ತಿತ್ವದಲ್ಲಿದೆ ಎಂದಿದ್ದ. ಇಂಥಹ ಪ್ರಭುತ್ವ-ವಿರೋಧಿ ವಿಚಾರಗಳಿಂದ ಕ್ರೋಧಗೊಂಡ ರೋಮನ್ ಪ್ರಭುತ್ವ ಅವನನ್ನು ಗಲ್ಲಿಗೇರಿಸಿತ್ತು.

1958 ರಲ್ಲಿ ಭಾರತದ ಮೊದಲ ಪ್ರಧಾನಿ ಪಂಡಿತ್ ನೆಹರೂ ರವರು 'ವಿಜ್ಞಾನ ನೀತಿ ನಿರ್ಣಯ' ವೊಂದನ್ನು ಲೋಕಸಭೆಯಲ್ಲಿ ಮಂಡಿಸಿ 'ಇದು ದೇಶಕ್ಕೆ ವಿಜ್ಞಾನದ ಸಾಧನಗಳನ್ನು ನೀಡಲಿದ್ದು, ಭೌತಿಕ ತಿಳುವಳಿಕೆ ವಿಸ್ತರಿಸುತ್ತದೆ. ಜೀವನದ ಮೌಲ್ಯಗಳು ಉತ್ತಮಗೊಳ್ಳುತ್ತವೆ. ಇದು ಭಾರತೀಯ ನಾಗರೀಕತೆಗೆ ಹೊಸ ಚೈತನ್ಯ ಮತ್ತು ನವನವೀನ ಶಕ್ತಿ ನೀಡುತ್ತದೆ.' ಎಂದಿದ್ದರು. ಇದರ ಚರ್ಚೆಗೆ ಅಂದಿನ ಲೋಕಸಭಾ ಸದಸ್ಯರೆಲ್ಲರು ಬಹಳ ಸಮಯ ನೀಡಿದ್ದರು.

ಅಲ್ಲದೆ, ನಮ್ಮ ಸಂವಿಧಾನದ ವಿಧಿ 51 ಎ (ಹೆಚ್) ವೈಜ್ಞಾನಿಕ ಮನೋಭಾವದ ಕುರಿತು ಈ ರೀತಿ ಹೇಳುತ್ತದೆ: ದೇಶದ ಪ್ರತಿಯೊಬ್ಬ ನಾಗರೀಕನೂ ವೈಜ್ಞಾನಿಕ ಮನೋಭಾವ, ಮಾನವೀಯತೆ ಮತ್ತು ವೈಚಾರಿಕ ಮನೋಭಾವವನ್ನು ಅಭಿವೃದ್ಧಿ ಪಡಿಸುವ ಜವಾಬ್ದಾರಿ ಹೊಂದಿರತಕ್ಕದ್ದು.

ಆದರೆ, ಡಾ: ನರೇಂದ್ರ ದಾಭೋಲ್ಕರ್ರವರು ಈ ಆಶಯಗಳನ್ನು ಜಾರಿಗೊಳಿಸುವಾಗಲೇ ಬಲಿಯಾದದ್ದು ಸಂವಿಧಾನದ ಮೇಲಿನ ಧಾಳಿಯಷ್ಟೆ.

  *  ಈ ಹತ್ಯೆಯನ್ನು ನಾವೆಲ್ಲರೂ ಒಕ್ಕೊರಲಿನಿಂದ ಖಂಡಿಸೋಣ.
 *   ಅವರನ್ನು ಹತ್ಯೆಗೈದ ಕೊಲೆಗಡುಕರನ್ನು ಶೀಘ್ರ ಬಂಧಿಸುವಂತೆ ಒತ್ತಾಯಿಸೋಣ.
   *  ಮೂಢನಂಬಿಕೆಗಳನ್ನು ಬಯಲುಗೊಳಿಸುವ ವಿಚಾರವಾದಿಗಳ ಮೇಲೆಯೇ ಧಾರ್ಮಿಕ ಸಹಿಷ್ಣುತೆಗಾಗಿ ಇರುವ ಹಲವು ಕಾನೂನುಗಳನ್ನು ದುರ್ಬಳಕೆ ಮಾಡಿಕೊಳ್ಳಲಾಗುತ್ತಿದ್ದು, ಅವುಗಳಿಗೆ ಸಂವಿಧಾನದ ವಿಧಿ 51 ಎ (ಹೆಚ್) ಗೆ ಪೂರಕವಾಗಿ ತಿದ್ದುಪಡಿ ಮಾಡಬೇಕು.
  *  ವೈಜ್ಞಾನಿಕ ಮನೋಭಾವ ಹರಡುತ್ತಾ ಮೂಢನಂಬಿಕೆಗಳು ಮತ್ತು ಅಂಧಶ್ರದ್ದೆಗಳ ವಿರುದ್ದ ಜಾಗೃತಿ ಮೂಡಿಸಿ ಅವುಗಳನ್ನು ತೊಡೆದುಹಾಕಬೇಕು. 

*********

Monday, September 10, 2012

ಟಾಗೋರರ ಸ್ಫೂರ್ತಿ ಮಾತುಗಳ ಅನುವಾದ

Where the mind is without fear and the head is held high; Where knowledge is free; Where the world has not been broken up into fragments by narrow domestic walls; Where words come out from the depth of truth; Where tireless striving stretches its arms towards perfection; Where the clear stream of reason has not lost its way into the dreary desert sand of dead habit; Where the mind is led forward by thee into ever-widening thought and action ... Into that heaven of freedom, my father, let my country awake.

ಐನ್  ಸ್ಟೀನ್ - ಟಾಗೋರ್ : ಅದ್ಭುತ ಮನಸ್ಸುಗಳ ಸಮಾಗಮ 


ಎಲ್ಲಿ ಮನಸ್ಸು ನಿರ್ಭಯದಿ ತಲೆ ಎತ್ತಿ ನಿಲ್ಲಬಲ್ಲದೋ,
ಎಲ್ಲಿ ಜ್ಞಾನ ಸ್ವಾತಂತ್ರ್ಯ ಹೊಂದಿದೆಯೋ;
ಎಲ್ಲಿ ಸೀಮಿತ ಗೋಡೆಗಳಿಂದ ವಿಶ್ವ ಒಡೆದು ಚೂರು ಚೂರಾಗಿಲ್ಲವೋ;
ಎಲ್ಲಿ ಮಾತುಗಳು ಸತ್ಯದಾಳದಿಂದ ಹೊರ ಹೊಮ್ಮುತ್ತವೆಯೋ;
ಎಲ್ಲಿ ದಣಿವರಿಯದ ಶ್ರಮ ಪರಿಪೂರ್ಣತೆಯೆಡೆಗೆ ಸಾಗುವುದೋ;
ಎಲ್ಲಿ ನಿರ್ಜೀವ ನಡುವಳಿಕೆಗಳ ಮರಳುಗಾಡಿನಲ್ಲಿ ಅರಿವಿನ ತೊರೆ ದಿಕ್ಕೆಟ್ಟು ಬತ್ತದೆ ಇದೆಯೋ;
ಎಲ್ಲಿ ಮನಸ್ಸು ಸದಾ ವಿಸ್ತರಿಸುವ ಕಾರ್ಯ ಚಿಂತನೆಗಳಿಂದ ಮುನ್ನಡೆಯುವುದೋ
ಆ ಸ್ವಾತಂತ್ರ್ಯದ ಸ್ವರ್ಗದೆಡೆಗೆ ನನ್ನ ನಾಡು ಜಾಗೃತಗೊಳ್ಳಲಿ.

Wednesday, June 27, 2012

ಇಂಟರ್ ನೆಟ್ ಸೆನ್ಸಾರ್ ಷಿಪ್ : ಪ್ರಜಾಪ್ರಭುತ್ವಕ್ಕೆ ಸವಾಲು

ಸರ್ಕಾರ ಮತ್ತು ರಾಜಕೀಯ ವ್ಯಕ್ತಿಗಳ ಕುರಿತಂತೆ ವಿಮರ್ಶಾತ್ಮಕವಾಗಿ ಬಿಂಬಿಸುವ ಹೇಳಿಕೆಗಳನ್ನು ಗೂಗಲ್, ಫೇಸ್ ಬುಕ್ ನಂತಹ ಮಧ್ಯವರ್ತಿ ಕಂಪನಿಗಳ (intermediaries) ಮೂಲಕ ಪ್ರಕಟಿಸುತ್ತಿರುವುದಕ್ಕಾಗಿ ಐ.ಟಿ ನಿಯಮಾವಳಿಯಡಿ ಇಂತಹ ಕಂಪನಿಗಳ ಮೇಲೆ ಒತ್ತಡ ತರುತ್ತಿರುವುದನ್ನು ನಾವು ಕಾಣುತ್ತಿದ್ದೇವೆ. ಕಾರ್ಟೂನ್ ಗಳನ್ನು ಎಲ್ಲರಿಗೂ ಕಳುಹಿಸಿ ವಿನಿಮಯ ಮಾಡಿಕೊಳ್ಳುವುದೇ ಅಪರಾಧ ಎಂಬಂತೆ ಪೊಲೀಸರು F.I.R ದಾಖಲಿಸುತ್ತಿದ್ದಾರೆ. ನಮ್ಮ ಸಂವಿಧಾನ ನಮಗೆ ಕಲ್ಪಿಸಿರುವ ಪ್ರಜಾಸತ್ತಾತ್ಮಕ ಹಕ್ಕುಗಳ ಮೇಲೆ ಧಾಳಿ ನಡೆಯುತ್ತಿರುವುದನ್ನು ಇದರಿಂದ ನಾವು ಕಾಣಬಹುದು. ಮತ್ತೊಂದು ಆತಂಕಕಾರಿ ಅಂಶವೆಂದರೆ ನ್ಯಾಯಾಲಯಗಳು ಕೂಡ ಕೆಲವು ಮೀಡಿಯಾ ಕಂಪನಿಗಳ ಬೌದ್ದಿಕ ಹಕ್ಕು ಸ್ವಾಮ್ಯವನ್ನು ರಕ್ಷಿಸಲು ಕಂಪನಿ-ಪರ ಆದೇಶಗಳನ್ನು ದಯಪಾಲಿಸುತ್ತಿರುವುದು. ರಿಲಯನ್ಸ್ ಮೀಡಿಯಾ ಕಂಪನಿಗೆ ಅನುಕೂಲವಾಗುವಂತೆ ಇಂಟರ್ನೆಟ್ ಸೇವಾ ಪೂರೈಕೆ ಕಂಪನಿಯಾದ ರಿಲಯನ್ಸ್ ಕಮುನಿಕೆಷನ್ಸ್ ಕಂಪನಿಯು torrent ಸೈಟ್ ಗಳನ್ನು ಬ್ಲಾಕ್ ಮಾಡುತ್ತಿದೆ.
ಪಶ್ಚಿಮ ಬಂಗಾಳದ ಉಪನ್ಯಾಸಕರೊಬ್ಬರು ಕಾರ್ಟೂನ್ ವೊಂದನ್ನು ರಚಿಸಿ ಅದನ್ನು ಇ-ಮೇಲ್ ಮೂಲಕ ಇತರರೊಡನೆ ಹಂಚಿಕೊಂಡಿದ್ದೆ ಅಪರಾಧವಾಯಿತು. ಕಾರ್ಟೂನ್ ನಲ್ಲಿ ತಮ್ಮನ್ನು ಅವಹೆಳಕಾರಿಯಾಗಿ ಚಿತ್ರಿಸಿದ್ದಾರೆಂದು ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಆ ಉಪನ್ಯಾಸಕರನ್ನು ಐ.ಟಿ. ಕಾಯಿದೆ ಯಡಿ ಬಂಧಿಸಿ ಸೆರೆಮನೆಯಲ್ಲಿಟ್ಟರು. ಹಲವು ಸಂಘಟನೆಗಳು ಹೋರಾಟ ನಡೆಸಿದ ನಂತರವಷ್ಟೇ ಅವರ ಬಿಡುಗಡೆಯಾಯಿತು. ಇದು ಕೇಂದ್ರ ಸರ್ಕಾರ ಇತ್ತೀಚಿಗೆ ತಿದ್ದುಪಡಿ ಮಾಡಿರುವ ಐ.ಟಿ. ಕಾಯಿದೆ ಯ ಘೋರ ಪರಿಣಾಮಗಳಿಗೆ ಒಂದು ಸ್ಯಾಂಪಲ್ ಅಷ್ಟೇ. ಸರ್ಕಾರವು ಇಂತಹ ಸರ್ವಾಧಿಕಾರಿ ಕಾನೂನೊಂದನ್ನು ರೂಪಿಸಿದ್ದು ಅದರಿಂದ ಇಂಟರ್ನೆಟ್ ನಲ್ಲಿಯ ನಮ್ಮ ಬರಹಗಳನ್ನು ಸೆನ್ಸಾರ್ ಮಾಡಲು ಅವಕಾಶ ಕಲ್ಪಿಸಿದೆ. ನಮ್ಮ ಫೇಸ್ ಬುಕ್ ಬರಹಗಳನ್ನು ಸೆನ್ಸಾರ್ ಮಾಡಲು, ಸ್ಕೈಪ್ ನಂಥಹ ಆನ್ ಲೈನ್ ಮೂಲಕ ನಾವು ನಡೆಸುವ ಸಂಭಾಷಣೆಗಳನ್ನು ಕದ್ದು ಕೇಳಲು, ನಾವು ಮಾಡುವ twitter ಅಥವಾ ಬ್ಲಾಗ್ ಬರಹಗಳನ್ನು ನಿಯಂತ್ರಿಸಲು, ಅಥವಾ ನಾವು ಆನ್ ಲೈನ್ ನಲ್ಲಿ ಸಂಗ್ರಹಿಸಿಡುವ ಖಾಸಗಿ ಫೋಟೋ ಗಳನ್ನು ಮತ್ತು ಡಾಕುಮೆಂಟ್ ಗಳನ್ನು ತೆಗೆದುಕೊಳ್ಳುವ, ಅಥವಾ ನಮ್ಮ ಮೊಬೈಲ್ ಫೋನ್ ಗಳನ್ನು ಬಳಸಿಕೊಂಡು ನಾವಿರುವ ನೆಲೆಯನ್ನು ಟ್ರ್ಯಾಕ್ ಮಾಡಿ ತಿಳಿಯಲು ಮತ್ತು ನಮ್ಮೆಲ್ಲ ಆನ್ ಲೈನ್ ಚಟುವಟಿಕೆಗಳ ಮೇಲೆ ಬೇಹುಗಾರಿಕೆ ನಡೆಸಲು ಇದರಿಂದ ಸಾಧ್ಯವಾಗುತ್ತದೆ. ಅಸ್ಪಷ್ಟ ಮತ್ತು ನ್ಯೂನ್ಯತೆಯ ಕಾನೂನುಗಳನ್ನು ಬಳಸಿಕೊಂಡು ನಮ್ಮ ಅಭಿವ್ಯಕ್ತಿ ಸ್ವಾತಂತ್ರ್ಯದ ಹಕ್ಕುಗಳನ್ನು ಸರ್ಕಾರ ನಮ್ಮಿಂದ ಕಿತ್ತುಕೊಳ್ಳುತ್ತಿದೆ. ಕಲಿಕೆಗೆ ಮತ್ತು ಅಭಿವ್ಯಕ್ತಿಗೆ ಅತ್ಯುತ್ತಮ ಸಾಧನವಾಗಿರುವ ಇಂಟರ್ ನೆಟ್ ನ್ನು ನಿರ್ಬಂಧಿಸಲು, ಸರ್ಕಾರದ ವಿರುದ್ದ ಯಾವುದೇ ರೀತಿಯ ಅಭಿಪ್ರಾಯ ಬಾರದೆ ಇರಲು ಇಂತಹ ಸರ್ವಾಧಿಕಾರಿ ನೀತಿಯನ್ನು ಅನುಸರಿಸುವ ಪ್ರಯತ್ನ ಇದಾಗಿದೆ. 2011 ಎಪ್ರಿಲ್ 11 ರಂದು ಸರ್ಕಾರವು ಹೊಸ ಮಾಹಿತಿ ತಂತ್ರಜ್ಞಾನ (ಮಧ್ಯಸ್ಥವರ್ತಿಗಳ ಮಾರ್ಗದರ್ಶಿ) ನಿಯಮಾವಳಿ , 2011 ನ್ನು ಅಧಿಸೂಚನೆ ಹೊರಡಿಸಿತು. ಈ ಅಧಿಸೂಚನೆಯ ಮಾರ್ಗದರ್ಶಿ ತತ್ವಗಳನ್ನು ಎಲ್ಲ ಇಂಟರ್ನೆಟ್ ಸಂಭಂಧಿತ ಕಂಪನಿಗಳು ಪಾಲಿಸಬೇಕೆಂದು ಠರಾವು ಹೊರಡಿಸಿತು. ಈ ನಿಯಮಾವಳಿಗಳ ಪರಿಣಾಮವೇನೆಂದರೆ: 1 . ಖಾಸಗಿ ಕಂಪನಿಗಳ ಮೂಲಕ ಸೆನ್ಸಾರ್ ವಿಧಿಸಿ ಭಾರತದ ಸಂವಿಧಾನದಲ್ಲಿ ನೀಡಲಾಗಿರುವ ಅಭಿವ್ಯಕ್ತಿ ಸ್ವಾತಂತ್ರ್ಯ ವನ್ನು ದಮನ ಮಾಡುವುದು. 2 . ಸರ್ಕಾರಿ ಏಜೆನ್ಸಿ ಗಳಿಗೆ ಇಂಟರ್ನೆಟ್ ಬಳಕೆದಾರರ ಎಲ್ಲ ಆನ್ ಲೈನ್ ಮಾಹಿತಿಗಳನ್ನು ನೀಡುವ ಮೂಲಕ ನಾಗರೀಕರ ಖಾಸಗಿ ಬದುಕಿನ ಹಕ್ಕನ್ನು ದಮನ ಮಾಡುವುದು. 3 . ಭಾರತದಲ್ಲಿ ಇಂಟರ್ನೆಟ್ ಬಳಕೆ ಹರಡುವುದನ್ನು ಇದು ತಪ್ಪಿಸುತ್ತದೆ ಮತ್ತು ಇದರಿಂದಾಗಿ ಆರ್ಥಿಕ ಬೆಳವಣಿಗೆ ಕುಂಠಿತವಾಗುತ್ತದೆ. 4 . ವಿವಿಧ ಐ.ಟಿ. ಸಂಬಂಧಿತ ಕೈಗಾರಿಕೆಗಳು ಮತ್ತು ಸೇವೆಗಳ (ವಿಶೇಷವಾಗಿ ಸೈಬರ್ ಕೆಫೆಗಳು, ಸರ್ಚ್ ಇಂಜಿನ್ ಗಳು ಮತ್ತು ಬ್ಲಾಗರ್ ಗಳು) ಬೆಳವಣಿಗೆಯನ್ನು ತಡೆಗಟ್ಟುತ್ತದೆ. ಹೀಗೆ ನಾನಾ ಮೂಲೆಗಳಿಂದ - ರಾಜ್ಯ ಸರ್ಕಾರಗಳು, ಮಾಹಿತಿ ತಂತ್ರಜ್ಞಾನ ಸಚಿವಾಲಯ, ಪೊಲೀಸರು ಮತ್ತು ಇದೀಗ ರಿಲಯನ್ಸ್ ಕಮುನಿಕೆಷನ್ಸ್, ಎಮ್.ಟಿ.ಎನ್.ಎಲ್ ಮತ್ತು ಏರ್ ಟೆಲ್ ನಂತಹ ಪ್ರಧಾನ ಇಂಟರ್ನೆಟ್ ಸೇವಾ ಪೂರೈಕೆ ಕಂಪನಿಗಳಿಂದ (ISPs)- ಇಂಟರ್ನೆಟ್ ಮೇಲೆ ಧಾಳಿ ಮಾಡಲಾಗುತ್ತಿದೆ. ಸರ್ಕಾರದಿಂದ ಸೂಚನೆ ಇಲ್ಲದಿದ್ದರೂ ಸಹ ದೊಡ್ಡ ಫೈಲ್ ಗಳನ್ನು ವಿನಿಮಯ ಮಾಡಿಕೊಳ್ಳಲು ಬಳಸುವ vimeo ಮತ್ತು ಇನ್ನಿತರ torrent ಸೈಟ್ ಗಳನ್ನು ಇಂಟರ್ನೆಟ್ ಸೇವಾ ಪೂರೈಕೆ ಕಂಪನಿಗಳು ಬ್ಲಾಕ್ ಮಾಡುತ್ತಿವೆ.
ಇದಲ್ಲದೆ, ಬಳಕೆದಾರರ ದತ್ತಾಂಶ ಮಾಹಿತಿಯನ್ನು ಕಡ್ಡಾಯವಾಗಿ ಸಂಗ್ರಹಿಸಿಡುವ ಜವಾಬ್ದಾರಿ ಇಂಟರ್ನೆಟ್ ಸೇವೆ ಒದಗಿಸುವ ಕಂಪನಿಗಳ ಮೇಲೆ ಬರುವುದರಿಂದ, ಬಳಕೆದಾರರ ದೊಡ್ಡ ಮತ್ತು ದುಬಾರಿ ಮಾಹಿತಿ ತಾಣವನ್ನು ಸಂಗ್ರಹಿಸಿಡಲಾಗುತ್ತದೆ. ಈ ಮಾಹಿತಿಯನ್ನು ರಹಸ್ಯವಾಗಿ, ಯಾವುದೇ ನ್ಯಾಯಾಲಯದ ಗಮನಕ್ಕೂ ತರದೇ, ಸರ್ಕಾರಕ್ಕೆ ಮತ್ತು ಅದರ ಏಜೆನ್ಸಿಗಳಿಗೆ ರವಾನಿಸಲಾಗುತ್ತದೆ. ಈ ಹಿನ್ನೆಲೆಯಲ್ಲಿ ಎಲ್ಲ ಬ್ಲಾಗರ್ ಗಳು, ಆನ್ ಲೈನ್ ಬಳಕೆದಾರರು, ಮತ್ತು ಎಲ್ಲ ಪ್ರಜಾಸತ್ತಾತ್ಮಕ ಮನಸ್ಸುಳ್ಳ ನಾಗರೀಕರು ಈ ನಿಯಮಾವಳಿ ರದ್ದುಪಡಿಸಲು ಮತ್ತು ಸರ್ಕಾರ ಮತ್ತು ಇಂಟರ್ನೆಟ್ ಸೇವಾ ಪೂರೈಕೆ ಕಂಪನಿಗಳ ಇಂತಹ ಕ್ರಮಗಳ ವಿರುದ್ದ ಧ್ವನಿ ಎತ್ತಿವೆ. ***

Thursday, June 23, 2011

ಮತ್ತೊಂದು ವಿಶ್ವ ಪರಿಸರ ದಿನಾಚರಣೆ: ಹೆಚ್ಚಳವಾಗಲಿರುವ ಕರ್ನಾಟಕದ ತಾಪಮಾನ



ರಾಜಸ್ತಾನದ ನಂತರ ವೈಪರೀತ್ಯ ಭೀತಿ ಕಾಣುವ ಕರ್ನಾಟಕ :
ವಿಶ್ವದೆಲ್ಲೆಡೆ ಕಾರ್ಪೋರೇಟ್ ಕಂಪನಿಗಳಾದಿಯಾಗಿ ಎಲ್ಲ ಸರ್ಕಾರಗಳು ಮತ್ತು ಸರ್ಕಾರೇತರ ಸಂಸ್ಥೆಗಳು ಜೂನ್ 6ರಂದು ಮತ್ತೊಂದು ವಿಶ್ವ ಪರಿಸರ ದಿನಾಚರಣೆ ಆಚರಿಸಲು ಸಿದ್ದವಾಗುತ್ತಿವೆ. ಇದೇ ಸಮಯದಲ್ಲಿ ಕರ್ನಾಟಕ ಸರ್ಕಾರ ರಚಿಸಿದ್ದ ಬೆಂಗಳೂರು ಹವಾಮಾನ ಬದಲಾವಣೆ ಇನಿಷಿಯೇಟಿವ್ - ಕರ್ನಾಟಕ ಎಂಬ ಸಮಿತಿಯು ಸಲ್ಲಿಸಿರುವ ವರದಿ ನಮ್ಮ ರಾಜ್ಯದ ಮೇಲೆ ಉಂಟಾಗುವ ಹವಾಮಾನ್ ವೈಪರೀತ್ಯಗಳ ಅಪಾಯಗಳ ಕುರಿತು ಕರೆಗಂಟೆ ಒತ್ತಿದೆ ಎನ್ನಬಹುದು. ಪರಿಸರ ಸಂರಕ್ಷಣೆ ಮಾಡದೇ ಹೀಗೆ ಸುಮ್ಮನಿದ್ದಲ್ಲಿ 2030 ರ ವೇಳೆಗೆ ನಮ್ಮ ರಾಜ್ಯದ ಶೇ. 38ರಷ್ಟು ಅರಣ್ಯ ನಾಶವಾಗುತ್ತದೆಂದು ಮತ್ತು ರಾಜ್ಯದ ಬಹುತೇಕ ಪ್ರದೇಶಗಳ ಉಷ್ಣಾಂಶ 1.8 ಡಿಗ್ರಿಯಿಂದ 2.2 ಡಿಗ್ರಿವರೆಗೆ ಹೆಚ್ಚಳವಾಗುತ್ತದೆಂದು ಇದು ತಿಳಿಸಿದೆ. ಇಡೀ ದೇಶದಲ್ಲಿ ರಾಜಸ್ತಾನದ ನಂತರ ಹವಾಮಾನ ವೈಪರೀತ್ಯಗಳಿಂದ ಸಂಕಷ್ಟಕ್ಕೀಡಾಗುವ ಎರಡನೇ ರಾಜ್ಯ ಕರ್ನಾಟಕ.


ಋತುಚಕ್ರಗಳ ಅವಧಿಯಲ್ಲಿ ಬದಲಾವಣೆ:
ಮೂರು ಕಾಲಗಳ (ಬೇಸಿಗೆ, ಮಳೆ ಮತ್ತು ಚಳಿಗಾಲ) ಬದಲಾವಣೆ ಮತ್ತು ಈ ಋತುಮಾನಗಳ ಅವಧಿಯಲ್ಲಿ ಉಂಟಾಗುವ ಏರುಪೇರು ಹವಾಮಾನ ಬದಲಾವಣೆಯ ಸೂಚ್ಯಂಕ ಎನ್ನಬಹುದು. ಜಾಗತಿಕ ಪರಿಸರದಲ್ಲಿ ಶಕ್ತಿ ಚಕ್ರದ (ಶಕ್ತಿ ಚಕ್ರವು ಸೌರಶಕ್ತಿ, ವಾಯು, ಒತ್ತಡ, ಉಷ್ಣಾಂಶ ಇವೆಲ್ಲವನ್ನು ಒಳಗೊಂಡಿರುತ್ತದೆ) ಮೇಲೆ ಉಂಟಾಗುವ ಎಲ್ಲ ರೀತಿಯ ಏರುಪೇರುಗಳನ್ನು ಋತುಮಾನದ ಏರುಪೇರುಗಳು ನಮಗೆ ತೋರಿಸಿಕೊಡುತ್ತವೆ. ಹೀಗೆ ಉಂಟಾಗುವ ಏರುಪೇರು ನಮ್ಮ ಜೀವವ್ಯವಸ್ಥೆಯಲ್ಲಿ ಜೀವ ಸಮತೋಲನದ ಮೇಲೆ ದೊಡ್ಡ ಪರಿಣಾಮ ಬೀರುತ್ತವೆ ಮತ್ತು ಕೃಷಿ ಹಾಗೂ ಜಲ ಚಕ್ರದ ಮೇಲೆ ಅಡ್ಡ ಪರಿಣಾಮ ಬೀರುತ್ತದೆ. ಹಲವು ವೈಜ್ಞಾನಿಕ ವಿಧಾನಗಳನ್ನು ಬಳಸಿಕೊಂಡು ಮುಂದಿನ 25 ಅಥವಾ 50 ವರ್ಷಗಳಲ್ಲಿ ಭೂಮಿಯ ಮೇಲೆ ಯಾವ ತಾಪಮಾನ, ಮಳೆ ಪ್ರಮಾಣ ಇರುತ್ತದೆ ಎಂದು ಅಂದಾಜು ಮಾಡಲು ಸಾಧ್ಯ.


ಈ ವರದಿಯು ಏರುತ್ತಿರುವ ಭೂಮಿಯ ತಾಪಮಾನದಿಂದ ಹವಾಮಾನ ವೈಪರೀತ್ಯ, ಬದಲಾಗಲಿರುವ ಹವಾಮಾನ ಸೂಚ್ಯಂಕಗಳು, ಅರಣ್ಯ, ಜಲ ಸಂಪನ್ಮೂಲ ಮತ್ತು ಕೃಷಿ ವಲಯದ ಮೇಲುಂಟಾಗುವ ಅಪಾಯ, ಇದರಿಂದುಂಟಾಗುವ ಸಾಮಾಜಿಕ-ಆರ್ಥಿಕ ಹೊಡೆತಗಳು ಮತ್ತು ಇಂಧನ ಕ್ಷೇತ್ರದಲ್ಲಿ ನಾವು ಮಾಲಿನ್ಯ ತಡೆಗಟ್ಟಲು ಇರುವ ವಿಧಾನಗಳು, ಇತ್ಯಾದಿ ಕುರಿತು ವಿವರಗಳನ್ನು ಒಳಗೊಂಡಿದೆ. ಉದಾಹರಣೆಗೆ, ಸಸ್ಯಜೀವಿಗಳಲ್ಲಿ ಕಂಡುಬರುವ ರೋಗಗಳ ಮೇಲೆ ಹವಾಮಾನ ವೈಪರೀತ್ಯವು ಉಂಟುಮಾಡುವ ದುಷ್ಪರಿಣಾಮವೆಂದರೆ: ಸಸ್ಯ ರೋಗಗಳಿಂದ ನಷ್ಟದ ಮತ್ತಷ್ಟು ಹೆಚ್ಚಳ, ರೋಗ ನಿರ್ವಹಣಾ ತಂತ್ರಗಳಿಗೆ ಮತ್ತಷ್ಟು ವ್ಯಯ, ಸಸ್ಯರೋಗಗಳು ಹೊಸ ಹೊಸ ಭೂಭಾಗಗಳಿಗೆ ಹರಡುವುದು,ಇತ್ಯಾದಿ.

ಉಷ್ಙಾಂಶ ಮತ್ತು ಮಳೆ ಪ್ರಮಾಣದಲ್ಲಿ ಏರುಪೇರು:

2001-07 ರವರೆಗಿನ ಅವಧಿಯಲ್ಲಿ ರಾಜ್ಯದ ಅರಣ್ಯ ಪ್ರದೇಶ ಕಡಿಮೆಯಾಗುತ್ತಾ ಬರುತ್ತಿದ್ದು, ದಟ್ಟ ಅರಣ್ಯ ಪ್ರದೇಶವಂತೂ ಶೇ. 8ರಷ್ಟು ಕಡಿಮೆಯಾಗಿದೆ. ಅಂದರೆ ಕೇವಲ 7 ವರ್ಷಗಳ ಅವಧಿಯಲ್ಲಿ ಸುಮಾರು 2,500 ಚದುರ ಕಿಲೋಮೀಟರ್ ನಷ್ಟು ಅರಣ್ಯ ಪ್ರದೇಶ ನಾಶವಾಗಿದೆ. ಇದಕ್ಕೆ ಹೋಲಿಸಿದರೆ, ಬೆಂಗಳೂರು ನಗರದ ವಿಸ್ತೀರ್ಣ 741 ಚದುರ ಕಿ.ಮೀ ಇದ್ದು, ಬೆಂಗಳೂರು ನಗರದ ವಿಸ್ತೀರ್ಣಕ್ಕಿಂತ 3 ಪಟ್ಟು ಹೆಚ್ಚು ಅರಣ್ಯ ನಾಶವಾಗಿದೆ ಎನ್ನಬಹುದು. 1954ರಿಂದ 2004 ರ 50 ವರ್ಷಗಳ ಅವಧಿಯಲ್ಲಿ ಶೇ. 6 ರಷ್ಟು ಮಳೆ ಬೀಳುವ ಪ್ರಮಾಣ ಕಡಿಮೆಯಾಗಿರುವುದು ಕಳವಳಕಾರಿಯಾದ ಅಂಶ. ಮಳೆ ಏರುಪೇರು ಉಂಟಾಗುವ ಪ್ರದೇಶಗಳೆಂದರೆ: ಚಿಕ್ಕಬಳ್ಳಾಪುರ, ಚಿತ್ರದುರ್ಗ, ಗದಗ, ಕೋಲಾರ, ಮಂಡ್ಯ ಮತ್ತು ತುಮಕೂರು. ಉಷ್ಣಾಂಶ ಹೆಚ್ಚಳ ಕಂಡುಬರುವ ಜಿಲ್ಲೆಗಳು: ರಾಯಚೂರು, ಬಿಜಾಪುರ, ಗುಲ್ಬರ್ಗ ಮತ್ತು ಯಾದಗಿರಿ ಎಂದು ವರದಿ ದಾಖಲಿಸಿದೆ. ಕೃಷ್ಣ ಜಲಾನಯನ ಪ್ರದೇಶದ 6 ಜಿಲ್ಲೆಗಳಲ್ಲಿ ಮಳೆ ಪ್ರಮಾಣದ ಕೊರತೆಯಿಂದ ಆಗಾಗ್ಗೆ ಬರ ಉಂಟಾಗುತ್ತದೆ. ರಾಜ್ಯದ ಎಲ್ಲೆಡೆ ನೀರಿಗಾಗಿ ಆಹಾಕಾರ ಉಂಟಾಗುತ್ತದೆ ಎಂದು ವರದಿ ತಿಳಿಸಿದೆ.

ಶನಿ ಗ್ರಹಕ್ಕೆ ಕಾಟ ಕೊಡುತ್ತಿರುವ ಭೀಕರ ಸುಂಟರಗಾಳಿ!



ರಾಜಾ ವಿಕ್ರಮ ಮತ್ತು ಶನಿ ದೃಷ್ಟಿ:
ಇಡೀ ದೇವರುಗಳಲ್ಲೆಲ್ಲ ಶನಿ ದೇವರನ್ನು ಕಂಡರೆ ಹಲವರಿಗೆ ಭಯ, ಅದರಿಂದಾಗಿ ಜಾಸ್ತಿ ಭಕಿಯ್ತೂ ಎನ್ನಬಹುದು. ಶನಿ ದೃಷ್ಟಿ ಬಿದ್ದವರ ಮೇಲಂತೂ ಶನಿಯು ಉಗ್ರ ಪ್ರತಾಪಿಯಂತೆ ಉಪಟಳ ಕೊಟ್ಟು ಭೀಕರ ಶಿಕ್ಷೆ ನೀಡುತ್ತಾನೆಂದು ಹಲವು ಭಕ್ತರು ಭಾರಿ ಎಚ್ಚರಿಕೆ ಮತ್ತು ಭಯ-ಭಕ್ತಿಯಿಂದ ಅವನಿಗೆ ಪೂಜೆ ಸಲ್ಲಿಸುತ್ತಾರೆ. ಇದಕ್ಕೆ ಉದಾಹರಣೆಯಾಗಿ ಪುರಾಣ ಕಾಲದಲ್ಲಿ ರಾಜಾ ವಿಕ್ರಮ ಎಂಬುವನು ಅತ್ಯುತ್ತಮವಾಗಿ ಆಳುತ್ತಿದ್ದರೂ, ಶನಿ ದೇವರಿಗೆ ಪೂಜೆ ಸಲ್ಲಿಸದೇ ನಿರ್ಲಕ್ಷ್ಯ ವಹಿಸಿದ್ದರ ಫಲವಾಗಿ ಶನಿ ಅವನ ಮೇಲೆ ಉಗ್ರ ದೃಷ್ಟಿ ಬೀರಿ ರಾಜಾ ವಿಕ್ರಮ ತನ್ನ ರಾಜ್ಯವನ್ನೇ ಕಳೆದುಕೊಂಡು ದಯನೀಯವಾಗಿ ಬದುಕುವಂತೆ ಮಾಡುವ ಕಥೆ ಎಲ್ಲಿರಿಗೂ ಚಿರಪರಿಚಿತ.

ಆದರೆ ವಾಸ್ತವವೆಂದರೆ ನಮ್ಮ ಖಗೋಳ ಭೌತಶಾಸ್ತ್ರ ಮತ್ತು ಅದಕ್ಕೆ ಪೂರಕವಾಗಿ ನಮ್ಮ ಭೂಮಿಯಿಂದ ದೂರದಲ್ಲಿರುವ ಇತರೆ ಗ್ರಹಗಳ ನಮ್ಮ ಜ್ಞಾನ, ಆ ಗ್ರಹಗಳ ಬಳಿಗೆ ಕಣ್ಣು ಹಾಯಿಸುವ ಪರಿಣಾಮಕಾರಿ ದೂರದರ್ಶಕಗಳು, ಆಕಾಶಯಾನಗಳು ಹೆಚ್ಚಿದಂತೆಲ್ಲ ಸೂರ್ಯನ ಸುತ್ತಲಿರುವ ಗ್ರಹ ಪರಿವಾರಗಳ ಕುರಿತು ನಮಗೆ ಹೆಚ್ಚಿನ ತಿಳುವಳಿಕೆ ಲಭಿಸಿದೆ. ಇದರಿಂದ ಜ್ಯೋತಿಷಿಗಳು ಮತ್ತು ಕಂದಾಚಾರಿಗಳ ಪುರಾಣ, ಭವಿಷ್ಯತ್-ನುಡಿಗಳೆಲ್ಲವೂ ಕಾಗೆ-ಗೂಬಕ್ಕನ ಕಥೆಗಳೆಂಬುದನ್ನು ಜನಸಾಮಾನ್ಯರು ತಿಳಿದುಕೊಳ್ಳುವ ಸ್ಥಿತಿಯಿದೆ.




ಶನಿ ಗ್ರಹದ ಮೇಲೆರಗಿರುವ ಸುಂಟರಗಾಳಿ:
ಶನಿ ಗ್ರಹದ ಉತ್ತರ ಧ್ರುವದಲ್ಲಿ ಭೀಕರ ಸ್ವರೂಪಿ ಸುಂಟರಗಾಳಿ ಎದ್ದಿದ್ದು, ಅದು ಇಡೀ ಶನಿ ಗ್ರಹದ ತುಂಬೆಲ್ಲ ಹರಡಿಕೊಂಡಿದೆ ಎಂದು ಅಮೇರಿಕಾದ ಕ್ಯಾಸಿನಿ ಗಗನನೌಕೆ ಮತ್ತು ಯೂರೋಪ್ ಗಗನ ವೀಕ್ಷಣಕೇಂದ್ರವು ಭೂಮಿಯಲ್ಲಿ ಅಳವಡಿಸಿರುವ ದೂರದರ್ಶಕಗಳೆರಡೂ ವರದಿ ಮಾಡಿವೆ. ಅಮೇರಿಕಾದ ಬಾಹ್ಯಾಕಾಶ ಸಂಶೋಧನಾ ಸಂಸ್ಥೆಯಾದ ನಾಸಾವು ಈ ಕ್ಯಾಸಿನಿ ಗಗನನೌಕೆಯನ್ನು ಅಂತರಿಕ್ಷಕ್ಕೆ ಕಳುಹಿಸಿಕೊಟ್ಟಿತ್ತು. ಈ ಸುಂಟರಗಾಳಿ ಅದೆಷ್ಟು ಬಲಯುತವಾಗಿದೆಯೆಂದರೆ ಅದು ಇಡೀ ಶನಿ ಗ್ರಹದ ವಾತಾವರಣದ ತುಂಬೆಲ್ಲ ಅನಿಲಭರಿತ ಧೂಳನ್ನು ಹರಡುತ್ತಿದೆ. ಕ್ಯಾಸಿನಿ ಗಗನನೌಕೆಯಲ್ಲಿದ್ದ ರೇಡಿಯೋ ಮತ್ತು ಪ್ಲಾಸ್ಮಾ ತರಂಗಾಂತರ ಉಪಕರಣಗಳು ಮೊದಲಿಗೆ ಸುಂಟರಗಾಳಿಯನ್ನು ಗಮನಿಸಿದವು. ಕ್ಯಾಸಿನಿ ಗಗನನೌಕೆಯ ಅತಿ ನೇರಳೆ ಮ್ಯಾಪಿಂಗ್ ಸ್ಪೆಕ್ಟ್ರೋಮೀಟರ್ ಎಂಬ ಉಪಕರಣವು ಈ ಸುಂಟರಗಾಳಿಯು ಹಿಂಸಾತ್ಮಕ ರೂಪ ತಳೆದು ಅಮೋನಿಯಾ ಅನಿಲವನ್ನು ಎಲ್ಲೆಡೆ ಹರಡುತ್ತಿದೆ ಎಂದು ದಾಖಲಿಸಿದೆ. ಈ ದೊಡ್ಡ ಸುಂಟರಗಾಳಿಯ ಅಗಲ ಸುಮಾರು 5,000 ಕಿಲೋ ಮೀಟರ್ ಇದೆ. ಈ ಸುಂಟರಗಾಳಿಯಿಂದ ಶನಿ ಗ್ರಹದ ವಾತಾವರಣದ ಗಾಳಿಯ ಚಲನೆಯು ತೀವ್ರತರದಲ್ಲಿ ಮಾರ್ಪಾಟಾಗಿದ್ದು ಅಲ್ಲಿನ ಶಕ್ತಿ ಮತ್ತು ವಸ್ತುಗಳನ್ನು ದೂರ ಪ್ರದೇಶಗಳಿಗೆ ದಿಕ್ಕಾಪಾಲಾಗಿ ಚೆಲ್ಲಾ ಪಿಲ್ಲಿಯಾಗಿಸಿದೆ.



ನಮ್ಮ ಭೂಮಿಯಿಂದ ಸುಮಾರು 51 ಕಿಲೋ ಮೀಟರ್ ವರೆಗೆ ಚಾಚಿರುವ ಸ್ಟ್ರ್ಯಾಟೋಸ್ಪಿಯರ್ ಎಂದು ಕರೆಯಲಾಗುವ ವಾತಾವರಣದ ಗಡಿಯ ಕೆಳ ಹಂತದಲ್ಲಿ ಸಾಮಾನ್ಯವಾಗಿ ವಿಮಾನಯಾನ ಮಾಡುವುದನ್ನು ತಪ್ಪಿಸಿ ಇದರ ಮೇಲ್-ಹಂತದಲ್ಲಿ ಯಾನ ಮಾಡಲಾಗುತ್ತದೆ. ಏಕೆಂದರೆ ಈ ಕೆಳ ಹಂತದಲ್ಲಿ ವಾತಾವರಣದಲ್ಲಿನ ವಾಯು ವೇಗ, ಒತ್ತಡ, ಉಷ್ಣತೆ ಇತ್ಯಾದಿಗಳ ಏರಿಳಿತಗಳು ಹೆಚ್ಚಿರುತ್ತವೆ. ಆದರೆ ಶನಿ ಗ್ರಹದ ಸ್ಟ್ರ್ಯಾಟೋಸ್ಪಿಯರ್ ಮೇಲ್-ಹಂತದ ಎತ್ತರದಲ್ಲಿಯೂ ಕೂಡ ಸುಂಟರಗಾಳಿಯ ಪ್ರವಾಹ ಚಿಮ್ಮುತ್ತಿದೆ ಎನ್ನಲಾಗಿದೆ.

ಶನಿ ಗ್ರಹದ ವಾತಾವರಣ ಮತ್ತು ಉಪಗ್ರಹಗಳು:
ಶನಿ ಗ್ರಹವು ಸೂರ್ಯ ಪರಿವಾರದಲ್ಲಿ ಜ್ಯೂಪಿಟರ್ ನಂತರ ಎರಡನೇ ಅತಿ ದೊಡ್ಡ ಗ್ರಹವೆನಿಸಿದೆ. ಆದರೆ ಸೂರ್ಯನಿಂದ ದೂರವಿರುವ 6ನೇ ಗ್ರಹವಾಗಿದೆ. ಇದು ಭೂಮಿಯಿಂದ ಸುಮಾರು 1,20,000 ಕೋಟಿ ಕಿಲೋಮೀಟರ್ ದೂರದಲ್ಲಿದೆ. ಶನಿ ಗ್ರಹದ ತೂಕ ನಮ್ಮ ಭೂಮಿಯ ಒಟ್ಟಾರೆ ತೂಕದ ಮುಕ್ಕಾಲು ಪ್ರಮಾನದ ತೂಕ ಮಾತ್ರವಿದ್ದರೂ ಆಕಾರದಲ್ಲಿ ಭೂಮಿಯ 95 ಪಟ್ಟು ದೊಡ್ಡದಿದೆ. ಶನಿ ಗ್ರಹವು ತನ್ನ ಸುತ್ತ ಆವರಿಸಿರುವ ಒಂಬತ್ತು ಬಳೆಗಳನ್ನು ಹೊಂದಿದ್ದು, ಈ ಬಳೆಗಳು ಮಂಜುಗಡ್ಡೆಯ ಕಣಗಳು, ಬಂಡೆಯ ಚೂರುಗಳು ಮತ್ತು ಧೂಳಿನಿಂದ ಮಾಡಲ್ಪಟ್ಟಿವೆ. ಶನಿ ಗ್ರಹವು ಸುಮಾರು ನಮ್ಮ ಚಂದ್ರನಂತಹ 62 ಉಪಗ್ರಹಗಳನ್ನು ಹೊಂದಿದ್ದು, ಅದರಲ್ಲಿ ಟೈಟಾನ್ ಎಂಬ ಉಪಗ್ರಹವೇ ದೊಡ್ಡದು.



ಗಗನನೌಕೆಗಳಿಂದ ಶನಿ ಗ್ರಹ ಸರ್ವೇಕ್ಷಣೆ:
ಶನಿ ಗ್ರಹದ ವೀಕ್ಷಣೆಯನ್ನು ಮೊದಲು ಬರಿಗಣ್ಣಿಂದ ನೋಡಲಾಗುತ್ತಿತ್ತು. 17ನೇ ಶತಮಾನದಲ್ಲಿ ಬಲು ಪರಿಣಾಮಕಾರಿಯಾದ ದೂರದರ್ಶಕಗಳನ್ನು ಅಭಿವೃದ್ಧಿಪಡಿಸಿ ವೀಕ್ಷಿಸಲಾಗುತ್ತಿತ್ತು. ಇಪ್ಪತ್ತೊಂದನೇ ಶತಮಾನದಲ್ಲಿ ಪಯನಿಯರ್, ವಾಯೇಜರ್ ನೌಕೆಗಳನ್ನು ಕಳುಹಿಸಲಾಯಿತು. 2004ರಲ್ಲಿ ಕ್ಯಾಸಿನಿ-ಹ್ಯೂಜೆನ್ಸ್ ಎಂಬ ಗಗನನೌಕೆಗಳು ಶನಿ ಗ್ರಹ ಪ್ರಯಾಣ ಮಾಡಿ ಆ ಗ್ರಹದ ಸುತ್ತು ಹಾಕಿ, ಗ್ರಹ ಪ್ರದೇಶಕ್ಕಿಳಿದು ಪೋಟೋ ತೆಗೆದುಕೊಂಡವು ಹಾಗೆಯೇ ಅದರ ಉಪಗ್ರಹ ಟೈಟಾನ್ ಮೇಲೆ ಓಡಾಡಿ ಸರ್ವೇಕ್ಷಣೆ ನಡೆಸಿತು. ಟೈಟಾನ್ ನಲ್ಲಿ ದೊಡ್ಡ ಸರೋವರಗಳಿರುವುದು, ಬೆಟ್ಟ ಗುಡ್ಡಗಳು, ದ್ವೀಪಗಳಿರುವ ಚಿತ್ರಗಳನ್ನು ನಮಗೆ ನೀಡಿದೆ.
*******