Wednesday, June 27, 2012
ಇಂಟರ್ ನೆಟ್ ಸೆನ್ಸಾರ್ ಷಿಪ್ : ಪ್ರಜಾಪ್ರಭುತ್ವಕ್ಕೆ ಸವಾಲು
ಸರ್ಕಾರ ಮತ್ತು ರಾಜಕೀಯ ವ್ಯಕ್ತಿಗಳ ಕುರಿತಂತೆ ವಿಮರ್ಶಾತ್ಮಕವಾಗಿ ಬಿಂಬಿಸುವ ಹೇಳಿಕೆಗಳನ್ನು ಗೂಗಲ್, ಫೇಸ್ ಬುಕ್ ನಂತಹ ಮಧ್ಯವರ್ತಿ ಕಂಪನಿಗಳ (intermediaries) ಮೂಲಕ ಪ್ರಕಟಿಸುತ್ತಿರುವುದಕ್ಕಾಗಿ ಐ.ಟಿ ನಿಯಮಾವಳಿಯಡಿ ಇಂತಹ ಕಂಪನಿಗಳ ಮೇಲೆ ಒತ್ತಡ ತರುತ್ತಿರುವುದನ್ನು ನಾವು ಕಾಣುತ್ತಿದ್ದೇವೆ. ಕಾರ್ಟೂನ್ ಗಳನ್ನು ಎಲ್ಲರಿಗೂ ಕಳುಹಿಸಿ ವಿನಿಮಯ ಮಾಡಿಕೊಳ್ಳುವುದೇ ಅಪರಾಧ ಎಂಬಂತೆ ಪೊಲೀಸರು F.I.R ದಾಖಲಿಸುತ್ತಿದ್ದಾರೆ. ನಮ್ಮ ಸಂವಿಧಾನ ನಮಗೆ ಕಲ್ಪಿಸಿರುವ ಪ್ರಜಾಸತ್ತಾತ್ಮಕ ಹಕ್ಕುಗಳ ಮೇಲೆ ಧಾಳಿ ನಡೆಯುತ್ತಿರುವುದನ್ನು ಇದರಿಂದ ನಾವು ಕಾಣಬಹುದು. ಮತ್ತೊಂದು ಆತಂಕಕಾರಿ ಅಂಶವೆಂದರೆ ನ್ಯಾಯಾಲಯಗಳು ಕೂಡ ಕೆಲವು ಮೀಡಿಯಾ ಕಂಪನಿಗಳ ಬೌದ್ದಿಕ ಹಕ್ಕು ಸ್ವಾಮ್ಯವನ್ನು ರಕ್ಷಿಸಲು ಕಂಪನಿ-ಪರ ಆದೇಶಗಳನ್ನು ದಯಪಾಲಿಸುತ್ತಿರುವುದು. ರಿಲಯನ್ಸ್ ಮೀಡಿಯಾ ಕಂಪನಿಗೆ ಅನುಕೂಲವಾಗುವಂತೆ ಇಂಟರ್ನೆಟ್ ಸೇವಾ ಪೂರೈಕೆ ಕಂಪನಿಯಾದ ರಿಲಯನ್ಸ್ ಕಮುನಿಕೆಷನ್ಸ್ ಕಂಪನಿಯು torrent ಸೈಟ್ ಗಳನ್ನು ಬ್ಲಾಕ್ ಮಾಡುತ್ತಿದೆ.
ಪಶ್ಚಿಮ ಬಂಗಾಳದ ಉಪನ್ಯಾಸಕರೊಬ್ಬರು ಕಾರ್ಟೂನ್ ವೊಂದನ್ನು ರಚಿಸಿ ಅದನ್ನು ಇ-ಮೇಲ್ ಮೂಲಕ ಇತರರೊಡನೆ ಹಂಚಿಕೊಂಡಿದ್ದೆ ಅಪರಾಧವಾಯಿತು. ಕಾರ್ಟೂನ್ ನಲ್ಲಿ ತಮ್ಮನ್ನು ಅವಹೆಳಕಾರಿಯಾಗಿ ಚಿತ್ರಿಸಿದ್ದಾರೆಂದು ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಆ ಉಪನ್ಯಾಸಕರನ್ನು ಐ.ಟಿ. ಕಾಯಿದೆ ಯಡಿ ಬಂಧಿಸಿ ಸೆರೆಮನೆಯಲ್ಲಿಟ್ಟರು. ಹಲವು ಸಂಘಟನೆಗಳು ಹೋರಾಟ ನಡೆಸಿದ ನಂತರವಷ್ಟೇ ಅವರ ಬಿಡುಗಡೆಯಾಯಿತು. ಇದು ಕೇಂದ್ರ ಸರ್ಕಾರ ಇತ್ತೀಚಿಗೆ ತಿದ್ದುಪಡಿ ಮಾಡಿರುವ ಐ.ಟಿ. ಕಾಯಿದೆ ಯ ಘೋರ ಪರಿಣಾಮಗಳಿಗೆ ಒಂದು ಸ್ಯಾಂಪಲ್ ಅಷ್ಟೇ.
ಸರ್ಕಾರವು ಇಂತಹ ಸರ್ವಾಧಿಕಾರಿ ಕಾನೂನೊಂದನ್ನು ರೂಪಿಸಿದ್ದು ಅದರಿಂದ ಇಂಟರ್ನೆಟ್ ನಲ್ಲಿಯ ನಮ್ಮ ಬರಹಗಳನ್ನು ಸೆನ್ಸಾರ್ ಮಾಡಲು ಅವಕಾಶ ಕಲ್ಪಿಸಿದೆ. ನಮ್ಮ ಫೇಸ್ ಬುಕ್ ಬರಹಗಳನ್ನು ಸೆನ್ಸಾರ್ ಮಾಡಲು, ಸ್ಕೈಪ್ ನಂಥಹ ಆನ್ ಲೈನ್ ಮೂಲಕ ನಾವು ನಡೆಸುವ ಸಂಭಾಷಣೆಗಳನ್ನು ಕದ್ದು ಕೇಳಲು, ನಾವು ಮಾಡುವ twitter ಅಥವಾ ಬ್ಲಾಗ್ ಬರಹಗಳನ್ನು ನಿಯಂತ್ರಿಸಲು, ಅಥವಾ ನಾವು ಆನ್ ಲೈನ್ ನಲ್ಲಿ ಸಂಗ್ರಹಿಸಿಡುವ ಖಾಸಗಿ ಫೋಟೋ ಗಳನ್ನು ಮತ್ತು ಡಾಕುಮೆಂಟ್ ಗಳನ್ನು ತೆಗೆದುಕೊಳ್ಳುವ, ಅಥವಾ ನಮ್ಮ ಮೊಬೈಲ್ ಫೋನ್ ಗಳನ್ನು ಬಳಸಿಕೊಂಡು ನಾವಿರುವ ನೆಲೆಯನ್ನು ಟ್ರ್ಯಾಕ್ ಮಾಡಿ ತಿಳಿಯಲು ಮತ್ತು ನಮ್ಮೆಲ್ಲ ಆನ್ ಲೈನ್ ಚಟುವಟಿಕೆಗಳ ಮೇಲೆ ಬೇಹುಗಾರಿಕೆ ನಡೆಸಲು ಇದರಿಂದ ಸಾಧ್ಯವಾಗುತ್ತದೆ. ಅಸ್ಪಷ್ಟ ಮತ್ತು ನ್ಯೂನ್ಯತೆಯ ಕಾನೂನುಗಳನ್ನು ಬಳಸಿಕೊಂಡು ನಮ್ಮ ಅಭಿವ್ಯಕ್ತಿ ಸ್ವಾತಂತ್ರ್ಯದ ಹಕ್ಕುಗಳನ್ನು ಸರ್ಕಾರ ನಮ್ಮಿಂದ ಕಿತ್ತುಕೊಳ್ಳುತ್ತಿದೆ. ಕಲಿಕೆಗೆ ಮತ್ತು ಅಭಿವ್ಯಕ್ತಿಗೆ ಅತ್ಯುತ್ತಮ ಸಾಧನವಾಗಿರುವ ಇಂಟರ್ ನೆಟ್ ನ್ನು ನಿರ್ಬಂಧಿಸಲು, ಸರ್ಕಾರದ ವಿರುದ್ದ ಯಾವುದೇ ರೀತಿಯ ಅಭಿಪ್ರಾಯ ಬಾರದೆ ಇರಲು ಇಂತಹ ಸರ್ವಾಧಿಕಾರಿ ನೀತಿಯನ್ನು ಅನುಸರಿಸುವ ಪ್ರಯತ್ನ ಇದಾಗಿದೆ.
2011 ಎಪ್ರಿಲ್ 11 ರಂದು ಸರ್ಕಾರವು ಹೊಸ ಮಾಹಿತಿ ತಂತ್ರಜ್ಞಾನ (ಮಧ್ಯಸ್ಥವರ್ತಿಗಳ ಮಾರ್ಗದರ್ಶಿ) ನಿಯಮಾವಳಿ , 2011 ನ್ನು ಅಧಿಸೂಚನೆ ಹೊರಡಿಸಿತು. ಈ ಅಧಿಸೂಚನೆಯ ಮಾರ್ಗದರ್ಶಿ ತತ್ವಗಳನ್ನು ಎಲ್ಲ ಇಂಟರ್ನೆಟ್ ಸಂಭಂಧಿತ ಕಂಪನಿಗಳು ಪಾಲಿಸಬೇಕೆಂದು ಠರಾವು ಹೊರಡಿಸಿತು.
ಈ ನಿಯಮಾವಳಿಗಳ ಪರಿಣಾಮವೇನೆಂದರೆ:
1 . ಖಾಸಗಿ ಕಂಪನಿಗಳ ಮೂಲಕ ಸೆನ್ಸಾರ್ ವಿಧಿಸಿ ಭಾರತದ ಸಂವಿಧಾನದಲ್ಲಿ ನೀಡಲಾಗಿರುವ ಅಭಿವ್ಯಕ್ತಿ ಸ್ವಾತಂತ್ರ್ಯ ವನ್ನು ದಮನ ಮಾಡುವುದು.
2 . ಸರ್ಕಾರಿ ಏಜೆನ್ಸಿ ಗಳಿಗೆ ಇಂಟರ್ನೆಟ್ ಬಳಕೆದಾರರ ಎಲ್ಲ ಆನ್ ಲೈನ್ ಮಾಹಿತಿಗಳನ್ನು ನೀಡುವ ಮೂಲಕ ನಾಗರೀಕರ ಖಾಸಗಿ ಬದುಕಿನ ಹಕ್ಕನ್ನು ದಮನ ಮಾಡುವುದು.
3 . ಭಾರತದಲ್ಲಿ ಇಂಟರ್ನೆಟ್ ಬಳಕೆ ಹರಡುವುದನ್ನು ಇದು ತಪ್ಪಿಸುತ್ತದೆ ಮತ್ತು ಇದರಿಂದಾಗಿ ಆರ್ಥಿಕ ಬೆಳವಣಿಗೆ ಕುಂಠಿತವಾಗುತ್ತದೆ.
4 . ವಿವಿಧ ಐ.ಟಿ. ಸಂಬಂಧಿತ ಕೈಗಾರಿಕೆಗಳು ಮತ್ತು ಸೇವೆಗಳ (ವಿಶೇಷವಾಗಿ ಸೈಬರ್ ಕೆಫೆಗಳು, ಸರ್ಚ್ ಇಂಜಿನ್ ಗಳು ಮತ್ತು ಬ್ಲಾಗರ್ ಗಳು) ಬೆಳವಣಿಗೆಯನ್ನು ತಡೆಗಟ್ಟುತ್ತದೆ.
ಹೀಗೆ ನಾನಾ ಮೂಲೆಗಳಿಂದ - ರಾಜ್ಯ ಸರ್ಕಾರಗಳು, ಮಾಹಿತಿ ತಂತ್ರಜ್ಞಾನ ಸಚಿವಾಲಯ, ಪೊಲೀಸರು ಮತ್ತು ಇದೀಗ ರಿಲಯನ್ಸ್ ಕಮುನಿಕೆಷನ್ಸ್, ಎಮ್.ಟಿ.ಎನ್.ಎಲ್ ಮತ್ತು ಏರ್ ಟೆಲ್ ನಂತಹ ಪ್ರಧಾನ ಇಂಟರ್ನೆಟ್ ಸೇವಾ ಪೂರೈಕೆ ಕಂಪನಿಗಳಿಂದ (ISPs)- ಇಂಟರ್ನೆಟ್ ಮೇಲೆ ಧಾಳಿ ಮಾಡಲಾಗುತ್ತಿದೆ. ಸರ್ಕಾರದಿಂದ ಸೂಚನೆ ಇಲ್ಲದಿದ್ದರೂ ಸಹ ದೊಡ್ಡ ಫೈಲ್ ಗಳನ್ನು ವಿನಿಮಯ ಮಾಡಿಕೊಳ್ಳಲು ಬಳಸುವ vimeo ಮತ್ತು ಇನ್ನಿತರ torrent ಸೈಟ್ ಗಳನ್ನು ಇಂಟರ್ನೆಟ್ ಸೇವಾ ಪೂರೈಕೆ ಕಂಪನಿಗಳು ಬ್ಲಾಕ್ ಮಾಡುತ್ತಿವೆ.
ಇದಲ್ಲದೆ, ಬಳಕೆದಾರರ ದತ್ತಾಂಶ ಮಾಹಿತಿಯನ್ನು ಕಡ್ಡಾಯವಾಗಿ ಸಂಗ್ರಹಿಸಿಡುವ ಜವಾಬ್ದಾರಿ ಇಂಟರ್ನೆಟ್ ಸೇವೆ ಒದಗಿಸುವ ಕಂಪನಿಗಳ ಮೇಲೆ ಬರುವುದರಿಂದ, ಬಳಕೆದಾರರ ದೊಡ್ಡ ಮತ್ತು ದುಬಾರಿ ಮಾಹಿತಿ ತಾಣವನ್ನು ಸಂಗ್ರಹಿಸಿಡಲಾಗುತ್ತದೆ. ಈ ಮಾಹಿತಿಯನ್ನು ರಹಸ್ಯವಾಗಿ, ಯಾವುದೇ ನ್ಯಾಯಾಲಯದ ಗಮನಕ್ಕೂ ತರದೇ, ಸರ್ಕಾರಕ್ಕೆ ಮತ್ತು ಅದರ ಏಜೆನ್ಸಿಗಳಿಗೆ ರವಾನಿಸಲಾಗುತ್ತದೆ. ಈ ಹಿನ್ನೆಲೆಯಲ್ಲಿ ಎಲ್ಲ ಬ್ಲಾಗರ್ ಗಳು, ಆನ್ ಲೈನ್ ಬಳಕೆದಾರರು, ಮತ್ತು ಎಲ್ಲ ಪ್ರಜಾಸತ್ತಾತ್ಮಕ ಮನಸ್ಸುಳ್ಳ ನಾಗರೀಕರು ಈ ನಿಯಮಾವಳಿ ರದ್ದುಪಡಿಸಲು ಮತ್ತು ಸರ್ಕಾರ ಮತ್ತು ಇಂಟರ್ನೆಟ್ ಸೇವಾ ಪೂರೈಕೆ ಕಂಪನಿಗಳ ಇಂತಹ ಕ್ರಮಗಳ ವಿರುದ್ದ ಧ್ವನಿ ಎತ್ತಿವೆ.
***
Subscribe to:
Posts (Atom)