Wednesday, October 30, 2013

ವಾಯೇಜರ್ ಗಗನ ನೌಕೆಗಳು - 36 ವರ್ಷಗಳ ಕಾಲ 1900 ಕೋಟಿ ಕಿ.ಮೀ ದೂರ ಪಯಣ

ವಾಯೇಜರ್ ಗಗನನೌಕೆಗಳ ಪಯಣ:
1977ರಲ್ಲಿ ಅಮೇರಿಕಾದ ರಾಷ್ಟ್ರೀಯ ಬಾಹ್ಯಾಕಾಶ ಸಂಸ್ಥೆ (ನಾಸಾ) 'ವಾಯೇಜರ್ 1' ಮತ್ತು ಅದರ ಅವಳಿ ಗಗನನೌಕೆ 'ವಾಯೇಜರ್ 2' ಹೆಸರಿನ ಎರಡು ಗಗನನೌಕೆಗಳನ್ನು 16 ದಿನಗಳ ಅಂತರದಲ್ಲಿ ಗಗನಕ್ಕೆ ಹಾರಿಬಿಟ್ಟಿತು. ಇವೆರಡೂ ಇನ್ನೂ ತಮ್ಮ ಪಯಣವನ್ನು ಮುಂದುವರೆಸುತ್ತಾ ಸೌರವ್ಯೂಹದಾಚೆಗಿನ ಮಾಹಿತಿಯನ್ನು ನಮಗೆ ರವಾನಿಸುತ್ತಲೇ ಇವೆ. ಇವೆರಡೂ ಗಗನನೌಕೆಗಳು ಮೊದಲಿಗೆ ಗುರು ಮತ್ತು ಶನಿ ಗ್ರಹವನ್ನು ಹಾದು ಹೋಗಿ ನಂತರದಲ್ಲಿ ಯುರೇನಸ್ ಮತ್ತು ನೆಪ್ಚೂನ್ ಗ್ರಹಗಳನ್ನು ಹಾದು ಮುಂದೆ ಹೋಗಿವೆ. ಇಲ್ಲಿಂದಾಚೆಗೆ ಅಂತರನಕ್ಷತ್ರ ಪ್ರದೇಶವಿದೆ. ಅಂತರನಕ್ಷತ್ರ ಪ್ರದೇಶದಲ್ಲಿರುವ ಒತ್ತಡದಿಂದಾಗಿ ಸೂರ್ಯನ ಸೌರಮಾರುತಗಳ ವೇಗ ಇಲ್ಲಿ ಕಡಿಮೆಯಾಗುತ್ತದೆ. ಇದನ್ನು ಹೀಲೀಯೋಪಾಸ್ ಪ್ರದೇಶ ಎಂದು ಕರೆಯುತ್ತಾರೆ.
ಸೂರ್ಯನಿಂದ ನಮ್ಮ ಭೂಮಿ ಸುಮಾರು 15 ಕೋಟಿ ಕಿಲೋ ಮೀಟರ್ ದೂರದಲ್ಲಿದೆ. ಇದೀಗ ಇವೆರಡೂ ಗಗನನೌಕೆಗಳು ಸೂರ್ಯನಿಂದ 1900 ಕೋಟಿ ಕಿಲೋ ಮೀಟರ್ ದೂರದಲ್ಲಿ ಪಯಣಿಸುತ್ತಿವೆ. ಅಷ್ಟು ದೂರದಲ್ಲಿರುವ ಗಗನನೌಕೆಗಳಿಂದ ನಮ್ಮ ಭೂಮಿಗೆ ಸಂದೇಶ ರವಾನಿಸಲು ಅವುಗಳಿಂದ ಹೊರಡುವ ಸಿಗ್ನಲ್ಗಳು ಬೆಳಕಿನ ವೇಗದಲ್ಲಿ ಚಲಿಸಿ ಭೂಮಿಯನ್ನು 17 ಘಂಟೆಗಳಲ್ಲಿ ತಲುಪುತ್ತವೆ!
ಭೂಮಿಯಿಂದ ನಾವು ಎಷ್ಟು ದೂರ ಆಗಸದಾಚೆಗೆ ಪಯಣಿಸಬಹುದು? ಭೂಮಿಯಿಂದ ಗಗನ ನೌಕೆಗಳನ್ನು ನಾವು ಮಂಗಳ ಗ್ರಹಕ್ಕೂ ಕಳುಹಿಸಿ ಅಲ್ಲಿಯ ಚಿತ್ರಗಳನ್ನೆಲ್ಲ ನೋಡುತ್ತಿದ್ದೇವೆ. ಇನ್ನೂ ಮುಂದಕ್ಕೆ ಹೋಗಿ ನಮ್ಮ ಸೌರವ್ಯೂಹವನ್ನು ತೊರೆದು ನಾವು ಆಚೆಗೆ ಪಯಣಿಸಬಹುದೇ? ಸೌರಮಾರುತಗಳ ಪ್ರಭಾವಳಿ ಎಲ್ಲಿಯವರೆಗಿದೆ? ನಮ್ಮ ಸೌರವ್ಯೂಹದ ಆಚೆಗೆ, ನಮ್ಮ ಗೆಲಾಕ್ಸಿಯೊಳಗಿನ ಚಿತ್ರಣ ಹೇಗಿರಬಹುದು? ಇಂತಹ ಇನ್ನೂ ಹಲವು ಪ್ರಶ್ನೆಗಳಿಗೆ ಉತ್ತರ ನೀಡುವ ನಿಟ್ಟಿನಲ್ಲಿ ಅಮೇರಿಕಾದ ಗಗನ ನೌಕೆಗಳಾದ 'ವಾಯೇಜರ್ 1 & ವಾಯೇಜರ್ 2' ಸಹಾಯಕವಾಗುತ್ತಿವೆ. ಆರಂಭದಲ್ಲಿ ಗುರು ಮತ್ತು ಶನಿ ಗ್ರಹಗಳ ಕುರಿತು ಹೆಚ್ಚಿನ ಮಾಹಿತಿಗಾಗಿ ಉಡಾವಣೆಯಾದ ಈ ನೌಕೆಗಳು ಇದೀಗ ಹಿಂದೆಂದೂ ಕ್ರಮಿಸಿರದ ಅನತಿ ದೂರದ ಗಗನಪ್ರದೇಶಗಳನ್ನು ಶೋಧಿಸುತ್ತಾ ಮಾಹಿತಿ ರವಾನಿಸುತ್ತಿವೆ. ಹೌದು! ಕಳೆದ ವಾರವಷ್ಟೇ ಅವು ಅಂತರನಕ್ಷತ್ರ ಪ್ರದೇಶವನ್ನು ತಲುಪಿವೆ.
ನಮ್ಮ ಸೌರವ್ಯೂಹ ಮತ್ತು ನಕ್ಷತ್ರ ಸಮೂಹ:
ನಮ್ಮ ಸೌರವ್ಯೂಹವು 'ಕ್ಷೀರಪಥ' ಎಂದು ಕರೆಯಲಾಗುವ ಗೆಲಾಕ್ಸಿ (ನಕ್ಷತ್ರ ಸಮೂಹ) ಯಲ್ಲಿದೆ. ಈ ಗೆಲಾಕ್ಸಿಯಲ್ಲಿ ನಮ್ಮ ಸೂರ್ಯನ ರೀತಿಯ ಸುಮಾರು 10,000 ದಿಂದ 40,000 ಗಳಷ್ಟು ನಕ್ಷತ್ರಗಳಿವೆ ಎಂಬ ಅಂದಾಜಿದೆ. ಈ ನಕ್ಷತ್ರಗಳಿಗೆಲ್ಲ ನಮ್ಮ ಸೌರವ್ಯೂಹದ ತರಹ ಹಲವಾರು ಗ್ರಹಗಳಿವೆ. ನಮ್ಮ ವಿಶ್ವ ಅಥವಾ ಬ್ರಹ್ಮಾಂಡದಲ್ಲಿ ಎಷ್ಟು ನಕ್ಷತ್ರ ಸಮೂಹಗಳಿವೆ? ವಿಶ್ವ ಎಷ್ಟು ವಿಸ್ತಾರವಿದೆ? ಎಂದು ಹೇಳಲಾಗದು. ನಮ್ಮ ನಕ್ಷತ್ರವಾದ ಸೂರ್ಯ ಮತ್ತು ಸೂರ್ಯನಿಗೆ ಹತ್ತಿರುವಿರುವ ಇತರ ನಕ್ಷತ್ರಗಳ ನಡುವಿನ ಜಾಗವನ್ನು 'ಅಂತರನಕ್ಷತ್ರ ಪ್ರದೇಶ' ಎನ್ನುತ್ತಾರೆ. ಈ ಭಾಗ ಪ್ರಾಸ್ಮಾ ಮತ್ತು ಅಯಾನೀಕೃತ ಅನಿಲಗಳಿಂದ ಕೂಡಿದ್ದು, ಇವುಗಳನ್ನು ದೈತ್ಯ ನಕ್ಷತ್ರಗಳು ಮಿಲಿಯಾಂತರ ವರ್ಷಗಳ ಹಿಂದೆ ಇಲ್ಲಿಗೆ ತೂರಿವೆ, ಅಥವಾ ಮಿಲಿಯಾಂತರ ವರ್ಷಗಳ ಹಿಂದೆ ನಕ್ಷತ್ರಗಳ ಸಾವಿನಿಂದ ಇವು ಅಂತರನಕ್ಷತ್ರದಲ್ಲಿ ಚೆಲ್ಲಾಪಿಲ್ಲಿಯಾಗಿ ಹರಡಿವೆ ಎನ್ನಲಾಗಿದೆ.
ನಮ್ಮ ಸೌರವ್ಯೂಹ ಅಂದರೆ ಸೂರ್ಯ ಮತ್ತು ಅದರ ಸುತ್ತಲಿನ ಎಂಟು ಗ್ರಹಗಳವರೆಗೆ ಮಾತ್ರ ಅಂದುಕೊಂಡರೂ ಇದರಾಚೆಗಿರುವ ಊಟರ್್ ಮೋಡದವರೆಗೂ ಸೂರ್ಯನ ಗುರುತ್ವವೇ ಪ್ರಭಾವಶಾಲಿ. ಊಟರ್್ ಮೋಡದಾಚೆಗಷ್ಟೆ ಸೂರ್ಯನ ಗುರುತ್ವ ಕ್ಷೀಣಗೊಂಡು ಇತರೆ ನಕ್ಷತ್ರಗಳ ಗುರುತ್ವ ಪ್ರಭಾವಶಾಲಿಯಾಗುತ್ತದೆ. ಊಟರ್್ ಮೋಡ ಅತಿ ವಿಸ್ತಾರ ಪ್ರದೇಶವಾಗಿದ್ದು, ಸೂರ್ಯನಿಂದ 15,000 ಕೋಟಿ ಕಿ.ಮೀ ದೂರದಲ್ಲಿ ಆರಂಭವಾದರೆ ಸುಮಾರು 15 ಲಕ್ಷ ಕೋಟಿ ಕಿ.ಮೀ ವರೆಗೂ ಚಾಚಿದೆ.
ವಾಯೇಜರ್ ನೌಕೆಯಲ್ಲಿ ಏನೇನಿದೆ?
ಪ್ರತಿಯೊಂದು ವಾಯೇಜರ್ ಗಗನನೌಕೆಯೂ ಲಕ್ಷಾಂತರ ಸಂಖ್ಯೆಯ ಟ್ರಾನ್ಸಿಸ್ಟರ್ ಮತ್ತು ಕಂಪ್ಯೂಟರ್ ಪ್ರೋಗ್ರಾಂ ಗಳಿಂದಾಗಿದ್ದು, ಅತಿ ದೂರದ ಅಂತರಿಕ್ಷ ಪ್ರಯಾಣಕ್ಕೆ ವಿನ್ಯಾಸಗೊಳಿಸಲಾಗಿದೆ. ಇವುಗಳ ವೇಗ ಘಂಟೆಗೆ 36,000 ಕಿ.ಮೀ. ಅಪಾಯ ಪರಿಸ್ಥಿತಿಯಲ್ಲಿ, ಕ್ಷಣಾರ್ಧದಲ್ಲಿ ತಂತಾನು ಸುರಕ್ಷಿತ ಸ್ಥಿತಿಗೆ ತಂದುಕೊಳ್ಳಬಲ್ಲದು. ಗುರು ಗ್ರಹದ ಬಳಿ ಸಾಗುವಾಗ ಭೂಮಿಗಿಂತ 1000 ಪಟ್ಟು ಹೆಚ್ಚು ವಿಕಿರಣ ಬೀಳುವುದರಿಂದ ರಕ್ಷಿಸಲು ವಿಕಿರಣ-ನಿಯಂತ್ರಿಸುವ ಕವಚ ಹೊಂದಿದೆ. ಇದರಲ್ಲಿರುವ ಟೆಲಿವಿಷನ್ ಕ್ಯಾಮೆರಾಗಳು ಎಷ್ಟು ಶಕ್ತಿಯುತವಾಗಿವೆ ಎಂದರೆ ಇವುಗಳಿಂದ 1 ಕಿ.ಮೀ ದೂರದಲ್ಲಿರುವ ದಿನಪತ್ರಿಕೆಯನ್ನು ನಾವು ಓದಬಹುದು! ಮ್ಯಾಗ್ನೆಟೋಮೀಟರ್ಗಳು ಮತ್ತು ಇತರೆ ಉಪಕರಣಗಳಿಂದ ಹಲವು ಮಾಹಿತಿಗಳು ದೊರೆಯುತ್ತಿವೆ. ಗಗನನೌಕೆಯ ತೂಕ 773 ಕೆಜಿ ಇದ್ದರೆ, ಅದರಲ್ಲಿ 105 ಕೆಜಿ ವೈಜ್ಞಾನಿಕ ಉಪಕರಣಗಳಿವೆ. ಈ ನೌಕೆಗೆ ಅಗತ್ಯವಿರುವ ವಿದ್ಯುಚ್ಛಕ್ತಿಯನ್ನು ಪರಮಾಣು ವಿಕಿರಣ ಶಕ್ತಿ ಆಧಾರಿತ 3 ರೇಡಿಯೋ ಐಸೋಟೋಪ್ ಉಷ್ಣವಿದ್ಯುತ್ ಜನರೇಟರ್ಗಳಿಂದ ಪೂರೈಕೆಯಾಗುತ್ತದೆ.

ವಾಯೇಜರ್ ಗಳು ಇದುವರೆಗೆ ರವಾನಿಸಿರುವ ಮಾಹಿತಿ & ಚಿತ್ರಗಳು:
ಹಲವು ಗ್ರಹಗಳ ಅತಿ ಹತ್ತಿರದ ಚಿತ್ರಗಳನ್ನು ರವಾನಿಸಿದೆ. ಗುರು ಗ್ರಹದ ಉಪಗ್ರಹದ ಹೆಸರು 'ಲೊ' ಎಂದು. ಈ ಉಪಗ್ರಹದ ಮೇಲೆ ಆಸ್ಫೋಟಿಸುತ್ತಿರುವ ಜ್ಞಾಲಾಮುಖಿಯಿಂದ ಗಂಧಕ ಮತ್ತು ಗಂಧಕದ ಡೈ ಆಕ್ಸೈಡ್ಗಳು ನಮ್ಮ ಮೌಂಟ್ ಎವರೆಸ್ಟ್ ಹಿಮಶಿಖರಕ್ಕಿಂತ 30 ಪಟ್ಟು ಹೆಚ್ಚು ಎತ್ತರಕ್ಕೆ ಸಿಡಿಯುತ್ತಿರುವುದನ್ನು ಈ ಕ್ಯಾಮೆರಾಗಳು ದಾಖಲಿಸಿವೆ! ಗುರು ಗ್ರಹದಲ್ಲಿರುವ ಸಂಕೀರ್ಣ ಮೋಡ ರೂಪುಗೊಳ್ಳುವುದು, ಬಿರುಸಿನ ಮಾರುತಗಳು, ಇತ್ಯಾದಿ ಚಿತ್ರಗಳನ್ನು ರವಾನಸಿದೆ. ಶನಿ ಗ್ರಹದ ಸುತ್ತ ಸುಮಾರು 10,000 ಸಂಖ್ಯೆಯ ನೆಕ್ಲೇಸ್ ತರಹ ಹೊಳೆಯುವ ಎಳೆಗಳನ್ನು ಗುರುತಿಸಿದೆ. ಶನಿಯ ಅತಿ ದೊಡ್ಡ ಉಪಗ್ರಹ 'ಟೈಟಾನ್' ಮತ್ತು ಯುರೇನಸ್ ಗ್ರಹ ಕಗ್ಗತ್ತಲೆಯ ಪ್ರದೇಶಗಳಂತೆ ಕಂಡಿವೆ. ಸೌರವ್ಯೂಹದ ಕೊನೆಯ ಗ್ರಹ ನೆಪ್ಚೂನ್ನಲ್ಲಿ ಬೆಳಕು ಯುರೇನಸ್ ಗಿಂತಲೂ ಬರೇ ಅರ್ಧದಷ್ಟಿದೆ. ಅಂತರನಕ್ಷತ್ರ ಪ್ರದೇಶದಲ್ಲಿ ಗಗನನೌಕೆಗಳು ವಸ್ತುವಿನ ನಾಲ್ಕನೇ ಸ್ಥಿತಿ ಎನಿಸಿರುವ ಪ್ಲಾಸ್ಮಾದಲ್ಲಿ 40 ಸಲ ಮುಳುಗಿ ಎದ್ದಿರುವ ಮಾಹಿತಿಯೂ ಸಿಕ್ಕಿದೆ.

ಗೋಲ್ಡನ್ ರೆಕಾರ್ಡ್:
ವಾಯೇಜರ್ಗಳು ತಮ್ಮೊಂದಿಗೆ ಭೂಮಿಯ ಶಬ್ಧ ಮತ್ತು ಚಿತ್ರಗಳನ್ನೂ ಕೂಡ ಹೊತ್ತೊಯ್ಯುತ್ತಿವೆ. ಜೊತೆಗೆ ಭೂಮಿಯ ವಿಶ್ವದಲ್ಲಿ ಯಾವ ಕಡೆ ಇದೆಯೆಂಬ ದಿಕ್ಕಿನ ಮಾಹಿತಿಯನ್ನೂ ಕೂಡ ದಾಖಲೆ ರೂಪದಲ್ಲಿ ಹೊತ್ತೊಯ್ಯುತ್ತಿದೆ. ಇದನ್ನೇ ಗೋಲ್ಡನ್ ರೆಕಾರ್ಡ್ ಎನ್ನುತ್ತಾರೆ. ಅನ್ಯ ಗ್ರಹದಲ್ಲಿ ಅನ್ಯ ಜೀವಿಗಳೇನಾದರೂ ಒಂದು ಪಕ್ಷ ಇದ್ದಲ್ಲಿ ವಾಯೇಜರ್ ಹೊತ್ತೊಯ್ಯುತ್ತಿರುವ ದಾಖಲೆಗಳನ್ನು ಆಧರಿಸಿ ಅವು ಭೂಮಿಯನ್ನು ಪತ್ತೆ ಹಚ್ಚಲು ಸಾಧ್ಯವಾಗಲಿ ಎಂಬುದು ಆಶಯ!
*************
 

Friday, September 6, 2013

ವಿಚಾರವಾದಿ ಡಾ: ನರೇಂದ್ರ ದಾಬೋಲ್ಕರ್ ಕಗ್ಗೊಲೆ: ವೈಚಾರಿಕತೆಯ ಮೇಲಿನ ಧಾಳಿ

ಮೂಢನಂಬಿಕೆ, ಅಂಧಶ್ರದ್ಧೆ, ಕಂದಾಚಾರ ಹಾಗೂ ಜಾತಿ ತಾರತಮ್ಯಗಳ ವಿರುದ್ದ ಮಹಾರಾಷ್ಟ್ರದಲ್ಲಿ ಕಳೆದ 25 ವರ್ಷಗಳಿಂದ ಹೋರಾಟ ಮಾಡುತ್ತಿದ್ದ ಖ್ಯಾತ ವಿಚಾರವಾದಿ ಡಾ: ನರೇಂದ್ರ ದಾಬೋಲ್ಕರ್ ರವರನ್ನು ಎರಡು ವಾರಗಳ ಹಿಂದೆ ಕೊಲೆ ಮಾಡಿರುವುದು ಎಲ್ಲೆಡೆ ಪ್ರತಿಭಟನೆ ಮತ್ತು ಆತಂಕಕ್ಕೆ ಕಾರಣವಾಗಿದೆ. ಅವರು ದಿ: 20.08.2013 ರಂದು ವಾಯುವಿಹಾರಕ್ಕೆ ಹೋಗಿದ್ದಾಗ ಅವರನ್ನು ಸಮಾಜಘಾತುಕ ಶಕ್ತಿಗಳು ಗುಂಡಿಕ್ಕಿ ಕೊಂದಿದ್ದಾರೆ. ಮಾಯ, ಮಾಟ, ಮಂತ್ರಗಳಿಂದ ಅವರನ್ನು ಕೊಲ್ಲಲಾಗಿಲ್ಲ!


ಡಾ: ನರೇಂದ್ರ ದಾಬೋಲ್ಕರ್ ರವರು ಮೂಲತ: ಡಾಕ್ಟರ್ ಆಗಿದ್ದು, ಸಮಾಜವನ್ನು ಕಾಡುತ್ತಿರುವ ಪಿಡುಗುಗಳಾದ ಮೂಢನಂಬಿಕೆ, ಅಂಧಶ್ರದ್ಧೆ, ಕಂದಾಚಾರ ಹಾಗೂ ಜಾತಿ ತಾರತಮ್ಯಗಳ ವಿರುದ್ದ ಹೋರಾಡುವ ಸಲುವಾಗಿ ತಮ್ಮ ಜೀವನವನ್ನೇ ಅರ್ಪಿಸಿಕೊಂಡಿದ್ದರು. ಹಳ್ಳಿ ನಗರ ಪ್ರದೇಶಗಳ ಮೂಲೆ ಮೂಲೆಗಳಿಗೆ ತಮ್ಮ ಕಾರ್ಯಕರ್ತರೊಡನೆ ಹೋಗಿ ಬಾಬಾಗಳು, ಢೋಂಗಿ ಸ್ವಾಮೀಜಿಗಳು ಮತ್ತು ಇತರೆ ಧಾರ್ಮಿಕ ಕಪಟಿಗಳ ಬೂಟಾಟಿಕೆಗಳನ್ನು ಬಯಲಿಗೆಳೆಯುತ್ತಿದ್ದರು. ಅವರ ಜೀವದ ಮೇಲೆ ಹಲವಾರು ಬಾರಿ ಧಾಳಿಗಳೂ ನಡೆದಿದ್ದವು. ಅಂಧಶ್ರದ್ಧೆಗಳ ವಿರುದ್ದ ಹೋರಾಡುವ ಸಲುವಾಗಿ 'ಮಹಾರಾಷ್ಟ್ರ ಅಂಧಶ್ರದ್ಧೆ ನಿರ್ಮೂಲನಾ ಸಮಿತಿ' ಎಂಬ ಸಂಘಟನೆಯನ್ನು ಸ್ಥಾಪಿಸಿದ್ದರು. ಈ ಸಂಘಟನೆಯ ಒಂದು ವರ್ಷ ಪೂರಾ ಕಾರ್ಯಕ್ರಮಗಳು ಮುಂಚೆಯೇ ನಿಗಧಿಯಾಗಿರುತ್ತಿದ್ದವು. ಅಂಧಶ್ರದ್ಧೆ ನಿರ್ಮೂಲನೆಗಾಗಿ ಮಸೂದೆಯೊಂದನ್ನು ಜಾರಿಗೆ ತರಬೇಕೆಂದು ಕಳೆದ 18 ವರ್ಷಗಳಿಂದ ಅವರು ಹೋರಾಡುತ್ತಿದ್ದರೂ ಅದನ್ನು ಕಡೆಗಣಿಸಿದ್ದ ಮಹಾರಾಷ್ಟ್ರ ಸರ್ಕಾರ ಅವರು ಸತ್ತ 3 ದಿನದೊಳಗೆ ಆ ಮಸೂದೆಯನ್ನು ಅಂಗೀಕರಿಸಿದೆ!

ಗಣೇಶನ ಹಬ್ಬದ ಸಂದರ್ಭದಲ್ಲಿ ರಾಸಾಯನಿಕ ವಸ್ತುಗಳನ್ನು ಬಳಸಿಕೊಂಡು ಮಾಡುವ ವಿಗ್ರಹಗಳು ಪರಿಸರಕ್ಕೆ ಮಾರಕವಾಗಿರುವುದರಿಂದ ನೈಸರ್ಗಿಕ ಬಣ್ಣ ಮತ್ತು ಮಣ್ಣು ಬಳಸಿದ ವಿಗ್ರಹಗಳನ್ನೇ ಬಳಸಬೇಕೆಂದು ಹೈ ಕೋರ್ಟ್ ವರೆಗೂ ಹೋರಾಡಿ ಪರಿಸರ-ಸ್ನೇಹಿ ತೀರ್ಪು ಹೊರಬೀಳುವಲ್ಲಿ ಯಶಸ್ವಿಯಾಗಿದ್ದರು. ಹಳ್ಳಿಗಳಲ್ಲಿ ಜಾತಿ ತಾರತಮ್ಯದ ಕುರುಹಾದ ಕೆಳಜಾತಿ ಜನರಿಗೆ ಒಂದೇ ಕಡೆ ನೀರು ನೀಡದಿರುವ ವಿರುದ್ದ 'ಒಂದು ಹಳ್ಳಿ, ಒಂದು ಬಾವಿ' ಘೋಷಣೆಯಡಿ ಚಟುವಟಿಕೆಗಳನ್ನು ನಡೆಸುತ್ತಿದ್ದರು. ಜ್ಯೋತಿ ಬಾ ಪುಲೆ-ಸಾಹು-ಅಂಬೇಡ್ಕರ್ ರವರ ವಿಚಾರಧಾರೆಗಳಿಂದ ಪ್ರೇರಿತರಾಗಿದ್ದರು. ವೈಚಾರಿಕ ಲೇಖನಗಳನ್ನು ಒಳಗೊಂಡ ವಾರಪತ್ರಿಕೆ 'ಸಾಧನಾ' ದ ಸಂಪಾದಕರಾಗಿದ್ದರು. ಆದರೆ ಗಾಂಧಿಯನ್ನು ಹತ್ಯೆ ಮಾಡಿದ ಮತಾಂಧ ಮನಸ್ಥಿತಿಯೇ ಇವರನ್ನು ಬಲಿತೆಗೆದುಕೊಂಡಿದೆ.

ಮೂಢನಂಬಿಕೆ ಮತ್ತು ಅಂಧಶ್ರದ್ಧೆ ವಿರುದ್ದದ ಹೋರಾಟ ಮತ್ತು ವಿಚಾರವಾದಿಗಳು:
ಮೂಢನಂಬಿಕೆ ಮತ್ತು ಅಂಧಶ್ರದ್ಧೆಗಳನ್ನು ಬೆಳೆಸಿ ಜನರನ್ನು ವಂಚಿಸುವ ಹಾಗೂ ಶೋಷಣೆ ಮಾಡುವ,  ಆ ಮೂಲಕ ಸಮಾಜದಲ್ಲಿ ಹಣ ಮತ್ತು ಅಧಿಕಾರ ಗಳಿಸುವ ಶಕ್ತಿಗಳಿಗೆ ಯಾವಾಗಲೂ ಸ್ವತಂತ್ರ ಆಲೋಚನೆಯ, ತರ್ಕಿಸುವ ಮತ್ತು ಪ್ರಶ್ನಿಸುವ ಮನೋಭಾವದ ವೈಚಾರಿಕತೆ ಶತ್ರುವೇ ಸರಿ. ಇಂಥಹ ಮೂಢನಂಬಿಕೆಗಳು ಮತ್ತು ಕಂದಾಚಾರಗಳ ಕುರಿತಾಗಿ ವಿಚಾರವಾದಿಗಳ ಚಟುವಟಿಕೆಗಳಿಗೆ ಹೋಲಿಸಿದರೆ ಜನವಿಜ್ಞಾನ ಚಳುವಳಿಗೆ ತನ್ನದೇ ಆದ ಕಣ್ಣೋಟವಿದೆ. ಮೂಢನಂಬಿಕೆ ಮತ್ತು ಅಂಧಶ್ರದ್ಧೆಗಳ ಮೂಲ ಬೇರುಗಳು ತಿಳುವಳಿಕೆಯ ಕೊರತೆ ಅಥವಾ ಅಜ್ಞಾನ ಹಾಗೂ ಸಮಾಜದ ರಚನೆಯಲ್ಲಿ ಅಡಗಿದೆ. ಒಂದೆಡೆ ಅಜ್ಞಾನದಿಂದ ಮೂಢನಂಬಿಕೆ ಮತ್ತು ಅಂಧಶ್ರದ್ಧೆಗಳು ಬೆಳೆದರೆ, ಮತ್ತೊಂದೆಡೆ ಸಮಾಜದ ರಚನೆ ಅಂದರೆ ಸಮಾಜದಲ್ಲಿರುವ ಪಟ್ಟಭದ್ರ ಹಿತಾಸಕ್ತಿಗಳು ಮೂಢನಂಬಿಕೆಯನ್ನು ಮತ್ತಷ್ಟು ಪೋಷಿಸುತ್ತವೆ ಮಾತ್ರವಲ್ಲ ವಿಜ್ಞಾನದ ಕುರಿತು ಅಪನಂಬಿಕೆ ಹುಟ್ಟಿಸಲು ಸದಾ ಯತ್ನಿಸುತ್ತವೆ. ಸಮಾಜದ ರಚನೆ ಬದಲಾದಂತೆ ನಂಬಿಕೆಗಳೂ ಬದಲಾಗುತ್ತವೆ. ಸಮಾಜ ರಚನೆಯನ್ನು ಆಮೂಲಾಗ್ರ ಬದಲಿಸುವ, ಉಳ್ಳವರು ಮತ್ತು ಇಲ್ಲದವರ ಸಂಘರ್ಷ, ಹೋರಾಟಗಳ ಜೊತೆಗೆ ಮೂಢನಂಬಿಕೆ ಮತ್ತು ಕಂದಾಚಾರಗಳ ವಿರುದ್ದದ ಹೋರಾಟವನ್ನೂ ಬೆಸೆಯಬೇಕು. ವೈಜ್ಞಾನಿಕ ಮನೋಭಾವ ಬೆಳೆಸಲು ಶ್ರಮಿಸುತ್ತಾ ಮೂಢನಂಬಿಕೆ ಮತ್ತು ಕಂದಾಚಾರಗಳ ಕುರಿತು ಜನತೆಯ ನಡುವೆ ಜಾಗೃತಿ ಮೂಡಿಸಿ ಅವುಗಳನ್ನು ತೊಡೆಯಬೇಕು ಎನ್ನುವುದು ಜನವಿಜ್ಞಾನ ಚಳುವಳಿಯ ಕಣ್ಣೋಟ. ಸಮಾಜರಚನೆಯ ಬದಲಾವಣೆಗೆ ಕೈಹಾಕದೆ ಆ ಸಮಾಜದ ಮೂಢನಂಬಿಕೆ ಮತ್ತು ಕಂದಾಚಾರಗಳನ್ನು ಮಾತ್ರವೇ ಪ್ರಶ್ನಿಸುವುದರಿಂದ ಅವುಗಳನ್ನು ತೊಡೆದು ಹಾಕುವುದು ಸಾಧ್ಯವಿಲ್ಲ ಎಂಬುದನ್ನು ವಿಚಾರವಾದಿಗಳು ಮನಗಂಡಿಲ್ಲ.

ಆದರೆ ಡಾ: ನರೇಂದ್ರ ದಾಭೋಲ್ಕರ್ರವರ ವೈಶಿಷ್ಟ್ಯ ಮಾದರಿ ಇರುವುದು ಇಲ್ಲಿಯೇ. ಅವರು ವಿಚಾರವಾದಿಯಾಗಿ ಜಾತಿ ಪದ್ದತಿಯ ವಿರುದ್ದ ಹೋರಾಟವನ್ನೂ ಕೂಡ ಮೂಢನಂಬಿಕೆ ಮತ್ತು ಕಂದಾಚಾರ ವಿರುದ್ದ ಹೋರಾಟಗಳ ಜೊತೆಗೆ ಬೆಸೆದಿದ್ದರು.

ಡಾ: ನರೇಂದ್ರ ದಾಭೋಲ್ಕರ್ ರವರ ಮೇಲಿನ ಧಾಳಿ ಪ್ರತ್ಯೇಕ ಘಟನೆಯೇನಲ್ಲ. ಇತ್ತೀಚಿನ ವರ್ಷಗಳಲ್ಲಿ ವೈಚಾರಿಕತೆ, ವೈಜ್ಞಾನಿಕ ಮನೋಭಾವ, ಪ್ರಗತಿಪರ ವಿಚಾರಗಳು, ಇತ್ಯಾದಿ ಮೇಲೆ ತೀವ್ರಗೊಳ್ಳುತ್ತಿರುವ ಸರಣಿ ಧಾಳಿಗಳ ಪೈಕಿ ಅದೂ ಒಂದಷ್ಟೆ. ಪ್ರಗತಿಪರ ರಂಗ ಕರ್ಮಿ ಸಪ್ಧಾರ್ ಹಶ್ಮಿಯನ್ನು ಹಾಡು ಹಗಲೇ ಕೊಂದದ್ದು, ಕಲಾವಿದ ಎಂ.ಎಫ್ ಹುಸೇನ್ ರವರ ಕಲಾಕೃತಿಗಳನ್ನು ನಾಶಮಾಡಿ ಹತ್ಯೆ ಮಾಡಲು ಯತ್ನಿಸಿದ್ದು, ಹಲವು ಬರಹಗಾರರು, ಕಲಾವಿದರು, ಕಾರ್ಟೂನಿಸ್ಟರ ಮೇಲೆ, ಮಾಹಿತಿ ಹಕ್ಕು ಕಾರ್ಯಕರ್ತರ ಮೇಲೆ ನಿರಂತರವಾಗಿ ನಡೆಯುತ್ತಿರುವ ಸರಣಿ ಧಾಳಿಗಳಲ್ಲೊಂದು ಇದೊಂದಷ್ಟೆ. ಇದು ಬೆಳೆಯುತ್ತಿರುವ ಧಾರ್ಮಿಕ ಮೂಲಭೂತವಾದಿಗಳು ಮತ್ತು ಕೋಮುವಾದಿಗಳ ಶಕ್ತಿಯನ್ನು ತೋರಿಸುತ್ತದೆ.

ಇದು 16 ನೇ ಶತಮಾನದ ಖ್ಯಾತ ವಿಚಾರವಾದಿ ಜಿಯಾರ್ಡಿನೊ ಬ್ರುನೋ ವನ್ನು ಬೀದಿಯಲ್ಲಿ ಸುತ್ತು ಕೊಂದ ಘಟನೆ ಯನ್ನು ನೆನಪಿಸಿಕೊಳ್ಳಬಹುದು. ಆತ ವಿಚಾರವಾದಿ ಮಾತ್ರವೇ ಅಲ್ಲ, ಖಗೋಳವಿಜ್ಞಾನದಲ್ಲಿ ಕೊಪರ್ನಿಕಸ್ ಗಿಂತಲೂ ಒಂದು ಹೆಜ್ಜೆ ಮುಂದೆ ಹೋಗಿ ಸೂರ್ಯಕೇಂದ್ರಿತ ಮಾದರಿಯನ್ನು ಜನಪ್ರಿಯಗೊಳಿಸಿ, ಸೂರ್ಯ ಕೂಡ ಒಂದು ನಕ್ಷತ್ರ, ನಮ್ಮ ವಿಶ್ವದಲ್ಲಿ ಹಲವಾರು ನಕ್ಷತ್ರಗಳು ಗ್ರಹಗಳು ಹೀಗೆ ವ್ಯವಸ್ಥಿತವಾಗಿ ಭೌತಿಕ ನಿಯಮನುಸಾರ ಅಸ್ತಿತ್ವದಲ್ಲಿದೆ ಎಂದಿದ್ದ. ಇಂಥಹ ಪ್ರಭುತ್ವ-ವಿರೋಧಿ ವಿಚಾರಗಳಿಂದ ಕ್ರೋಧಗೊಂಡ ರೋಮನ್ ಪ್ರಭುತ್ವ ಅವನನ್ನು ಗಲ್ಲಿಗೇರಿಸಿತ್ತು.

1958 ರಲ್ಲಿ ಭಾರತದ ಮೊದಲ ಪ್ರಧಾನಿ ಪಂಡಿತ್ ನೆಹರೂ ರವರು 'ವಿಜ್ಞಾನ ನೀತಿ ನಿರ್ಣಯ' ವೊಂದನ್ನು ಲೋಕಸಭೆಯಲ್ಲಿ ಮಂಡಿಸಿ 'ಇದು ದೇಶಕ್ಕೆ ವಿಜ್ಞಾನದ ಸಾಧನಗಳನ್ನು ನೀಡಲಿದ್ದು, ಭೌತಿಕ ತಿಳುವಳಿಕೆ ವಿಸ್ತರಿಸುತ್ತದೆ. ಜೀವನದ ಮೌಲ್ಯಗಳು ಉತ್ತಮಗೊಳ್ಳುತ್ತವೆ. ಇದು ಭಾರತೀಯ ನಾಗರೀಕತೆಗೆ ಹೊಸ ಚೈತನ್ಯ ಮತ್ತು ನವನವೀನ ಶಕ್ತಿ ನೀಡುತ್ತದೆ.' ಎಂದಿದ್ದರು. ಇದರ ಚರ್ಚೆಗೆ ಅಂದಿನ ಲೋಕಸಭಾ ಸದಸ್ಯರೆಲ್ಲರು ಬಹಳ ಸಮಯ ನೀಡಿದ್ದರು.

ಅಲ್ಲದೆ, ನಮ್ಮ ಸಂವಿಧಾನದ ವಿಧಿ 51 ಎ (ಹೆಚ್) ವೈಜ್ಞಾನಿಕ ಮನೋಭಾವದ ಕುರಿತು ಈ ರೀತಿ ಹೇಳುತ್ತದೆ: ದೇಶದ ಪ್ರತಿಯೊಬ್ಬ ನಾಗರೀಕನೂ ವೈಜ್ಞಾನಿಕ ಮನೋಭಾವ, ಮಾನವೀಯತೆ ಮತ್ತು ವೈಚಾರಿಕ ಮನೋಭಾವವನ್ನು ಅಭಿವೃದ್ಧಿ ಪಡಿಸುವ ಜವಾಬ್ದಾರಿ ಹೊಂದಿರತಕ್ಕದ್ದು.

ಆದರೆ, ಡಾ: ನರೇಂದ್ರ ದಾಭೋಲ್ಕರ್ರವರು ಈ ಆಶಯಗಳನ್ನು ಜಾರಿಗೊಳಿಸುವಾಗಲೇ ಬಲಿಯಾದದ್ದು ಸಂವಿಧಾನದ ಮೇಲಿನ ಧಾಳಿಯಷ್ಟೆ.

  *  ಈ ಹತ್ಯೆಯನ್ನು ನಾವೆಲ್ಲರೂ ಒಕ್ಕೊರಲಿನಿಂದ ಖಂಡಿಸೋಣ.
 *   ಅವರನ್ನು ಹತ್ಯೆಗೈದ ಕೊಲೆಗಡುಕರನ್ನು ಶೀಘ್ರ ಬಂಧಿಸುವಂತೆ ಒತ್ತಾಯಿಸೋಣ.
   *  ಮೂಢನಂಬಿಕೆಗಳನ್ನು ಬಯಲುಗೊಳಿಸುವ ವಿಚಾರವಾದಿಗಳ ಮೇಲೆಯೇ ಧಾರ್ಮಿಕ ಸಹಿಷ್ಣುತೆಗಾಗಿ ಇರುವ ಹಲವು ಕಾನೂನುಗಳನ್ನು ದುರ್ಬಳಕೆ ಮಾಡಿಕೊಳ್ಳಲಾಗುತ್ತಿದ್ದು, ಅವುಗಳಿಗೆ ಸಂವಿಧಾನದ ವಿಧಿ 51 ಎ (ಹೆಚ್) ಗೆ ಪೂರಕವಾಗಿ ತಿದ್ದುಪಡಿ ಮಾಡಬೇಕು.
  *  ವೈಜ್ಞಾನಿಕ ಮನೋಭಾವ ಹರಡುತ್ತಾ ಮೂಢನಂಬಿಕೆಗಳು ಮತ್ತು ಅಂಧಶ್ರದ್ದೆಗಳ ವಿರುದ್ದ ಜಾಗೃತಿ ಮೂಡಿಸಿ ಅವುಗಳನ್ನು ತೊಡೆದುಹಾಕಬೇಕು. 

*********