Thursday, December 23, 2010
ವಸ್ತುವಿನ ತದ್ರೂಪು ಪ್ರತಿ-ವಸ್ತುವನ್ನು ಹಿಡಿದಿಡುವಲ್ಲಿ ವಿಜ್ಞಾನಿಗಳ ಯಶಸ್ಸು
ಭೂಮಿಯಲ್ಲಿ ಒಂದೇ ತರಹದ 7 ಜನ ಇರುತ್ತಾರೆಂದು ಹಲವು ವೇಳೆ ಕೆಲವರು ಪುಂಗಿ ಬಿಡುವುದನ್ನು ನಾವು ಕೇಳಿದ್ದೇವೆ. ಆದರೆ ಯಾವುದೇ ವಸ್ತುವಿನ ಅತ್ಯಂತ ಸಣ್ಣಾತಿಸಣ್ಣ ಕಣವಾದ ಪರಮಾಣುವಿನ ಪ್ರತಿರೂಪ ಅಂದರೆ ಪ್ರತಿ-ಪರಮಾಣುವನ್ನು ವಿಜ್ಞಾನಿಗಳು ಹಿಡಿದಿಡುವಲ್ಲಿ ಯಶಸ್ವಿಯಾಗಿದ್ದಾರೆ. ಈ ಮೂಲಕ ಭೌತಶಾಸ್ತ್ರದಲ್ಲಿ ಮೂಲಕಣಗಳ ಸ್ವರೂಪ ಮತ್ತು ಅದರ ರಚನೆಯ ಮಹಾನ್ ರಹಸ್ಯಗಳನ್ನು ಭೇಧಿಸುವಲ್ಲಿ ಒಂದು ಹೆಜ್ಜೆ ಮುಂದಿಟ್ಟಿದ್ದಾರೆ.
1931ರಲ್ಲಿ ಬ್ರಿಟಿಷ್ ಭೌತಶಾಸ್ತ್ರಜ್ಞ ಪಾಲ್ ಡೈರಕ್ ಎಂಬುವನು ಮೊದಲ ಬಾರಿಗೆ ಈ ಸಿದ್ದಾಂತವನ್ನು ರೂಪಿಸಿದ. ಅದರಂತೆ ಒಂದು ಶಕ್ತಿಯು ವಸ್ತುವಾಗಿ ಪರಿವರ್ತನೆಗೊಂಡಾಗ ಅದರಲ್ಲಿ ಉತ್ಪಾದನೆಯಾಗುವುದು: ಒಂದು ಕಣ ಮತ್ತು ಆ ಕಣದ ಕನ್ನಡಿ ಬಿಂಬ. ಈ ಕಣದ ಕನ್ನಡಿ ಬಿಂಬವನ್ನು ಪ್ರತಿ-ಕಣ ಎಂದು ಕರೆಯಲಾಗುತ್ತದೆ. ಈ ಪ್ರತಿ-ಕಣವು ವಿರುದ್ದ ವಿದ್ಯುತ್ ಋಣವನ್ನು ಹೊಂದಿರುತ್ತದೆ. ನಮಗೆ ತಿಳಿದಿರುವಂತೆ ವಸ್ತುವೊಂದರ ಸಣ್ಣಾತಿಸಣ್ಣ ಕಣವಾದ ಪರಮಾಣುವೊಂದರಲ್ಲಿ ಮೂಲತ: ಒಂದು ಪ್ರೋಟಾನ್ ಮತ್ತು ನ್ಯೂಟ್ರಾನು ಇದ್ದು ಇವೆರಡರ ಸುತ್ತಲೂ ಇಲೆಕ್ಟ್ರಾನುಗಳು ಸುತ್ತು ಹಾಕುತ್ತಿರುತ್ತವೆ. ಇಲೆಕ್ಟ್ರಾನ್ ಪ್ರತಿವಸ್ತುವನ್ನು ಅಂದರೆ ಕನ್ನಡಿ ಬಿಂಬವನ್ನು ಪಾಸಿಟ್ರಾನ್ ಎಂದು ಕರೆಯುತ್ತಾರೆ. ಅದೇ ರೀತಿ ಪ್ರೋಟಾನ್-ಪ್ರತಿಪ್ರೋಟಾನ್, ಜಲಜನಕ-ಪ್ರತಿಜಲಜನಕ, ಇತ್ಯಾದಿ. ಕಣ ಮತ್ತು ಅದರ ಕನ್ನಡಿ ಬಿಂಬವಾದ ಪ್ರತಿ-ಕಣವು ಒಂದಕ್ಕೊಂದು ಡಿಕ್ಕಿ ಹೊಡೆದಾಗ ಅವುಗಳಿಂದ ಹೆಚ್ಚಿನ ಶಕ್ತಿ ಬಿಡುಗಡೆ ಹೊಂದಿ ಅವು ನಾಶಗೊಳ್ಳುತ್ತವೆ.
ವಿಶ್ವ ಸೃಷ್ಟಿಯ ರಹಸ್ಯದ ಶೋಧನೆ:
ಭೌತಶಾಸ್ತ್ರದ ಪರಮಾಣುಗಳ ಸ್ವರೂಪವನ್ನು ಅಧ್ಯಯನ ನಡೆಸುತ್ತಿರುವ ವಿಜ್ಞಾನಿಗಳಿಗೆ ರಹಸ್ಯವಾಗಿಯೇ ಉಳಿದಿರುವ ವಿಷಯವೆಂದರೆ ವಿಶ್ವದಲ್ಲಿ ವಸ್ತು ಇರುವಂತೆಯೇ ಅದರ ಪ್ರತಿ-ವಸ್ತುಗಳು ಅಸ್ತಿತ್ವದಲ್ಲಿವೆಯೇ ಎಂಬುದು. ಅವು ಅಸ್ತಿತ್ವದಲ್ಲಿದ್ದರೆ ಎಲ್ಲಿವೆ? ಅವುಗಳನ್ನು ಪ್ರಯೋಗಗಳ ಮೂಲಕ ಅಸ್ತಿತ್ವಕ್ಕೆ ತರಬಹುದೇ? ಅವುಗಳನ್ನು ಅಸ್ತಿತ್ವಕ್ಕೆ ತಂದ ಮೇಲೆ ಅವುಗಳ ಸ್ವಭಾವ ಏನು ಇತ್ಯಾದಿ ಕುರಿತು ಹಲವು ಪ್ರಯೋಗಗಳು ನಡೆಯುತ್ತಲೇ ಇವೆ. ಇದುವರೆಗೂ ಪ್ರಯೋಗಗಳ ಮೂಲಕ ಜಲಜನಕ ಎಂಬ ಮೂಲವಸ್ತುವಿನ ಪ್ರತಿ-ಪರಮಾಣುವನ್ನು ಉತ್ಪಾದಿಸಲಾಗಿತ್ತು. ಆದರೆ ಅದನ್ನು ಉತ್ಪಾದಿಸಿದ ಕ್ಷಣಾರ್ಧದಲ್ಲಿ ಅಲ್ಲ ಅಲ್ಲ, ಸೆಕೆಂಡಿನ ಲಕ್ಷದ ಒಂದು ಕಾಲ ಮಾತ್ರ! ಅದು ವಸ್ತುವಿನ ಜೊತೆ ಡಿಕ್ಕಿ ಹೊಡೆದು ನಾಶಗೊಳ್ಳುತ್ತಿತ್ತು! ಇದರಿಂದ ಅದನ್ನು ಅಳೆಯುವುದಾಗಲಿ ಅಥವಾ ಅದರ ರಚನೆಯನ್ನು ಅಧ್ಯಯನ ಮಾಡುವುದಾಗಲಿ ಅಸಾಧ್ಯವಾಗಿತ್ತು.
ಆದರೆ, ಯೂರೋಪ್ ಪರಮಾಣು ಸಂಶೋಧನಾ ಸಂಸ್ಥೆ (ಸಿಇಆರ್ಎನ್)ಯು ನಡೆಸುತ್ತಿರುವ ಹಲವಾರು ಪ್ರಯೋಗಗಳಲ್ಲಿ ಸಾವಿರಾರು ಪ್ರತಿ-ಜಲಜನಕ ಅಣುಗಳನ್ನು ತಯಾರಿಸಿದೆಯಾದರೂ ಅವುಗಳಲ್ಲಿ ಕೇವಲ 38 ಪ್ರತಿ-ಜಲಜನಕ ಅಣುಗಳನ್ನು ಮಾತ್ರವೇ ಹಿಡಿದಿಡಲು ಅದೂ ಕೂಡ ಸೆಕೆಂಡಿನ ಹತ್ತನೇ ಒಂದು ಕಾಲ ಮಾತ್ರ ಹಿಡಿದಿಡಿದು ಅಧ್ಯಯನ ಮಾಡಲು ಸಾಧ್ಯವಾಗಿದೆ.
ಈ ವಿಶ್ವ ಅಥವಾ ಬ್ರಹ್ಮಾಂಡವನ್ನು ದೇವರು ಹೇಗೆ ಸೃಷ್ಟಿ ಮಾಡಿದ ಎಂದು ಅನಾದಿ ಕಾಲದಲ್ಲಿ ತಮ್ಮ ಧರ್ಮಗ್ರಂಥಗಳಲ್ಲಿ ಬರೆದು ಹೋದ ತಮ್ಮ ಹಿರಿಯರ ವಿಚಾರಗಳಿಂದಲೇ ಹಿಂದೂ ಧರ್ಮದ ಆದಿಯಾಗಿ ಕ್ರಿಶ್ಚಿಯನ್, ಇಸ್ಲಾಂ, ಇತ್ಯಾದಿ ಎಲ್ಲ ಧರ್ಮಗಳು ಅರ್ಥೈಸುತ್ತವೆ. ಆದರೆ ಧರ್ಮಗಳು ನೀಡುವ ವಿವರಣೆಗೂ ಸಾಕ್ಷ್ಯಗಳನ್ನುಳ್ಳ ವಾಸ್ತವತೆಗೂ ಯಾವುದೇ ನಂಟಿರುವುದಿಲ್ಲ. ಇಂದಿನ ವಿಜ್ಞಾನ ಈ ವಿಶ್ವದ ಆರಂಭ ಹೇಗಾಯಿತು? ಅಥವಾ ಅನಾದಿ ಕಾಲದಲ್ಲಿ ಹಲವು ಲಕ್ಷಾಂತರ ವರ್ಷಗಳ ಹಿಂದೆ ಈ ವಿಶ್ವ ಹೇಗಿತ್ತು? ಈ ವಿಶ್ವ ಹೇಗೆ ಬದಲಾಗುತ್ತಾ ವಿಕಸನಗೊಳ್ಳುತ್ತಾ ಹೋಗುತ್ತಿದೆ? ಈ ವಿಶ್ವದ ಸ್ವರೂಪಕ್ಕೆ ಕಾರಣವಾಗಿರುವ ಮೂಲ ಕಣಗಳ ಗುಣಸ್ವಭಾವಗಳೇನು? ಇತ್ಯಾದಿ ಪ್ರಶ್ನೆಗಳಿಗೆ ನಮ್ಮ ವಿಜ್ಞಾನಿಗಳು ವೈಜ್ಞಾನಿಕ ಸಾಕ್ಷ್ಯಾಧಾರಗಳ ಮೂಲಕ, ಹಲವು ಪರೀಕ್ಷೆಗಳ ಮೂಲಕ ವಿವರಿಸುವ ಪ್ರಯತ್ನ ಮಾಡುತ್ತಾ ಬಂದಿದ್ದಾರೆ.
ದೊಡ್ಡ ಹ್ಯಾಡ್ರನ್ ಡಿಕ್ಕಿಕಾರಕ (ಎಲ್.ಹೆಚ್.ಸಿ) ಪ್ರಯೋಗ:
ಯೂರೋಪ್ ಪರಮಾಣು ಸಂಶೋಧನಾ ಸಂಸ್ಥೆ (ಸಿಇಆರ್ಎನ್)ಯು 100 ಕ್ಕೂ ಹೆಚ್ಚು ದೇಶಗಳ 10,000ಕ್ಕೂ ಹೆಚ್ಚು ವಿಜ್ಞಾನಿಗಳು ಒಡಗೂಡಿ ನಡೆಸುತ್ತಿರುವ ಮತ್ತೊಂದು ದೊಡ್ಡ ಹ್ಯಾಡ್ರನ್ ಡಿಕ್ಕಿಕಾರಕ (ಎಲ್.ಹೆಚ್.ಸಿ) ಪ್ರಯೋಗವು ಈ ವಿಶ್ವ ಹೇಗೆ ರೂಪುಗೊಂಡಿದೆ ಮತ್ತು ಮೂಲಕಣಗಳು ಯಾವುದರಿಂದ ಮಾಡಲ್ಪಟ್ಟಿವೆ ಎಂದು ಕಂಡುಹಿಡಿಯುವುದಾಗಿದೆ. ಮೂಲಕಣಗಳಿಗೆ ಅತಿ ಹೆಚ್ಚು ಶಕ್ತಿ ನೀಡಿದಾಗ ಅವು ಹೇಗೆ ವರ್ತಿಸುತ್ತವೆ ಎಂದು ಅಧ್ಯಯನ ನಡೆಸಲಾಗುತ್ತಿದೆ.
***********
ಪೆನ್ಸಿಲ್ ನಲ್ಲಿರುವ ಕಪ್ಪು ಸೀಸದ ಕಡ್ಡಿ ಉಕ್ಕಿಗಿಂತ ಬಲಿಷ್ಟ!
ಪೆನ್ಸಿಲ್ ನಲ್ಲಿ ನಮಗೆ ಬರೆಯಲು ಸಾಧ್ಯವಾಗುವುದು ಅದರಲ್ಲಿರುವ ಗ್ರಾಫೈಟ್ ಎಂದು ಕರೆಯಲಾಗುವ ಕಪ್ಪು ಸೀಸದ ಕಡ್ಡಿಯಿಂದ. ಗ್ರಾಫೈಟ್ ನ್ನು ಅತಿ ಸಣ್ಣದಾಗಿ ಎಳೆ ಎಳೆಯಂತೆ ಕತ್ತರಿಸುತ್ತಾ ಹೋದಂತೆ, ಅದನ್ನು ಪರಮಾಣುವಿಗಿಂತ ಅತಿ ಸಣ್ಣ ಎಳೆಯಂತೆ ಬೇರ್ಪಡಿಸಿದಾಗ ಈ ಸಣ್ಣ ಹಾಳೆಗೆ ವಿಚಿತ್ರ ಗುಣಲಕ್ಷಣಗಳು ಮೂಡಿಬರುತ್ತವೆ. ಈ ಹಾಳೆಯನ್ನು ಗ್ರಾಫೀನ್ ಎಂದು ಕರೆಯುತ್ತಾರೆ. ಇದು ವಿಶ್ವದ ಮೊದಲ 2 ಆಯಾಮದ ವಸ್ತುವೂ ಆಗಿದೆ. ಈ ಗ್ರಾಫೈಟ್ ಹಾಳೆಯಲ್ಲಿ ಕೇವಲ ಇಂಗಾಲದ ಪರಮಾಣುಗಳು ಮಾತ್ರವಿರುತ್ತವೆ.
ಈ ರೀತಿ ಹಾಳೆಗಳಂತೆ ಗ್ರಾಫೈಟ್ ನ್ನು ಬೇರ್ಪಡಿಸುವ ವಿಧಾನವನ್ನು ಕಂಡುಹಿಡಿದ ಆಂಡ್ರೆ ಗ್ರೀಮ್ ಮತ್ತು ನೊವಸೆಲೆವ್ ಎಂಬ ವಿಜ್ಞಾನಿಗಳಿಗೆ ಈ ವರ್ಷದ ನೊಬೆಲ್ ಪಾರಿತೋಷಕವು ಭೌತಶಾಸ್ತ್ರ ಸಂಶೋಧನೆ ವಿಭಾಗದಲ್ಲಿ ಲಭಿಸಿದೆ. ಗ್ರಾಫೈಟ್ ಮತ್ತು ಇತರೆ ವಸ್ತುಗಳನ್ನು ಅವುಗಳ ಮೂಲವಸ್ತುಗಳ ರೂಪದಲ್ಲಿ, ಬೇರೆ ಬೇರೆ ವಿಧಾನಗಳಿಂದ ತೆಳುವಾಗಿ ಬೇರ್ಪಡಿಸಿ ಅವುಗಳ ಗುಣಲಕ್ಷಣಗಳನ್ನು ನಮ್ಮ ದೇಶದ ಪ್ರೊ. ಸಿ.ಎನ್.ಆರ್ ರಾವ್ ಒಳಗೊಂಡಂತೆ ಇತರೆ ವಿಜ್ಞಾನಿಗಳು ಅಧ್ಯಯನ ಮಾಡುತ್ತಿದ್ದಾರೆ.
ಪೆನ್ಸಿಲ್ ನಿಂದ ನಾವು ಬರೆಯಲಾರಂಭಿಸಿದರೆ ಸಾಕು ನೋಡನೋಡುತ್ತಿದ್ದಂತೆ ನಮಗೆ ಗ್ರಾಫೈಟ್ ಕಪ್ಪು ಪುಡಿ ಉದುರಲಾರಂಭಿಸುತ್ತದೆ. ಇಂಥಹ ಅತಿ ಸಣ್ಣ ಕಣಗಳನ್ನು ಮತ್ತಷ್ಟು ಸಣ್ಣ ಹಾಳೆಗಳಂತೆ ಬೇರ್ಪಡಿಸಿ ಅಂತಿಮವಾಗಿ ಪಡೆಯುವುದೇ ಗ್ರಾಫೀನ್.
ಗ್ರಾಫೈಟ್ ನಿಂದ ಸಣ್ಣಾತಿಸಣ್ಣ ತೆಳು ಹಾಳೆಗಳಂತೆ ಬೇರ್ಪಡೆಯಾದ ಗ್ರಾಫೀನ್, ಪಾರದರ್ಶಕವಾಗಿ ಬೆಳಕನ್ನು ತನ್ಮೂಲಕ ಹಾದುಹೋಗಲು ಬಿಡುತ್ತದೆ, ಆದರೆ ನೀರು ಮತ್ತು ಗಾಳಿಗೆ ತಡೆಯೊಡ್ಡುತ್ತದೆ. ಹೀಲಿಯಂನಷ್ಟು ಅತಿ ಸಣ್ಣ ಅಣುವೂ ಕೂಡ ಇದನ್ನು ತೂರಿ ಹೋಗಲಾರದು. ರಬ್ಬರ್ ಹಿಗ್ಗಿ ಕುಗ್ಗುವಂತೆ ಇದನ್ನೂ ಸಹ ಜಗ್ಗಾಡಬಹುದು. ಅಲ್ಲದೆ ನೂರಾರು ವಿಶಿಷ್ಟ ಉಪಯುಕ್ತ ಗುಣಲಕ್ಷಣಗಳ ವೈವಿಧ್ಯತೆಯನ್ನೇ ಹೊಂದಿರುವ ಈ ಗ್ರಾಫೀನ್, ತಾಮ್ರದಂತೆ ತನ್ಮೂಲಕ ವಿದ್ಯುತ್ ನ್ನು ಒಂದು ಕಡೆಯಿಂದ ಮತ್ತೊಂದು ಕಡೆಗೆ ಸಾಗಿಸಬಲ್ಲುದು. ಇದು ಈವರೆಗೆ ಬಳಕೆಯಲ್ಲಿರುವ ವಾಹಕಗಳೆಲ್ಲೆಲ್ಲ ಅತ್ಯುತ್ತಮ ವಿದ್ಯುತ್ ವಾಹಕವೂ ಹೌದು. ಮತ್ತೂ ವಿಚಿತ್ರವೆಂದರೆ ಇದು ವಜ್ರದಂತೆ ಕಠಿಣವೂ ಹೌದು. ಉಕ್ಕಿಗಿಂತ ನೂರು ಪಟ್ಟು ಬಲಿಷ್ಟ.
ಗ್ರಾಫೀನ್ ನ್ನು ಕಂಪ್ಯೂಟರ್ ಚಿಪ್ ಗಳಲ್ಲಿ , ಸೋಲಾರ್ ಕೋಶಗಳಲ್ಲಿ, ಟ್ರಾನ್ಸಿಸ್ಟರ್ ಗಳು, ಹಗುರ ವಿಮಾನ, ವಾಹನಗಳ ಇಂಜಿನ್, ಬುಲೆಟ್ ಗಳು, ಇತ್ಯಾದಿಗಳಲ್ಲಿ ಬಳಸಬಹುದು. ಮುಂದಿನ ವರ್ಷಗಳಲ್ಲಿ ಈ ಅದ್ಭುತ ವಸ್ತು ಹತ್ತಲವು ಉಪಯುಕ್ತತೆಗಳಿಗೆ ಕಾರಣವಾಗಲಿದೆ ಎನ್ನಲಾಗುತ್ತಿದೆ.
*******
Thursday, June 10, 2010
ತೈಲ ಸೋರಿಕೆ ಕುರಿತ ಕಾರ್ಟೂನುಗಳು
ಅಮೇರಿಕಾದ ಕಂಪನಿಗಳ ದುಷ್ಕೃತ್ಯ ಮತ್ತು ಪರಿಸರ ದುರಂತ
ಅಮೇರಿಕಾದ ಬಹುರಾಷ್ಟ್ರೀಯ ಕಂಪನಿಗಳು ವಿಶ್ವದಾದ್ಯಂತ ನಿಸರ್ಗ ಸಂಪತ್ತನ್ನು ಕೊಳ್ಳೆಹೊಡೆಯುತ್ತಾ ಉಂಟುಮಾಡುತ್ತಿರುವ ಪರಿಸರ ದುರ್ಘಟನೆಗಳಿಗೆ ಲೆಕ್ಕವೇ ಇಲ್ಲ. ಅದಕ್ಕೆ ಮತ್ತೊಂದು ಸೇರ್ಪಡೆ ಎಂದರೆ ಇತ್ತೀಚೆಗೆ ಅಮೇರಿಕಾದಲ್ಲಿ ಸಂಭವಿಸಿರುವ ಅತಿ ದೊಡ್ಡ ತೈಲ ದುರಂತ. ಮೆಕ್ಸಿಕೋ ಕೊಲ್ಲಿ ಪ್ರದೇಶದಲ್ಲಿ ಸಮುದ್ರ ಗರ್ಭದೊಳಗೆ ಸ್ಥಾಪಿಸಲಾಗಿದ್ದ ಪೆಟ್ರೋಲಿಯಂ ಬಾವಿಯು ಸ್ಫೋಟಗೊಂಡು ಭಾರೀ ಪರಿಸರ ನಷ್ಟ ಸಂಭವಿಸಿದೆ. ಈ ಪೆಟ್ರೋಲಿಯಂ ಬಾವಿಯು ಬ್ರಿಟಿಷ್ ಪೆಟ್ರೋಲಿಯಂ (ಬಿಪಿ) ಎಂಬ ದೈತ್ಯ ಕಂಪನಿಯ ಒಡೆತನಕ್ಕೆ ಸೇರಿದ್ದು, ಇದಕ್ಕೆ ಅವಶ್ಯವಿರುವ ಉಪಕರಣಗಳನ್ನು ಸರಬರಾಜು ಮಾಡಿದ್ದು ಹಲ್ಲಿಬರ್ಟನ್ ಎಂಬ ಮತ್ತೊಂದು ದೈತ್ಯ ಕಂಪನಿ. ಏಪ್ರಿಲ್ 20ರಂದು ಸಂಭವಿಸಿದ ಈ ದುರಂತದಲ್ಲಿ, ಎಣ್ಣೆ ಕೊಳವೆಗಳು ಸ್ಫೋಟಗೊಂಡು ಅಲ್ಲಿದ್ದ 126 ಮಂದಿ ಕೆಲಸಗಾರರಲ್ಲಿ 11 ಮಂದಿ ಸಾವನ್ನಪ್ಪಿದ್ದಾರೆ. ಸಾಗರ ಗರ್ಭದೊಳಗಿಂದ ಮೇಲ್ಮೈವರೆಗೂ ಸಂಪರ್ಕಿಸಲಾಗಿದ್ದ ಕೊಳವೆ ಮತ್ತು ಮೇಲ್ಮೈ ಮೇಲಿದ್ದ ಪ್ಲಾಟ್ಫಾರಂ ಎಲ್ಲವೂ ಸಮುದ್ರದೊಳಕ್ಕೆ ಸುಮಾರು 1.5 ಕಿ.ಮೀ ಆಳಕ್ಕೆ ಮುರಿದು ಬಿದ್ದಿವೆ. ಇದರಿಂದಾಗಿ ಪ್ರತಿ ದಿನ 8.0 ಲಕ್ಷ ಲೀಟರಿಗೂ ಹೆಚ್ಚು ಪೆಟ್ರೋಲಿಯಂ ಸಾಗರದೊಳಕ್ಕೆ ಪೆಟ್ರೋಲಿಯಂ ಬಾವಿಯಿಂದ ಚಿಮ್ಮುತ್ತಿದೆ. ಇದನ್ನು ತಡೆಗಟ್ಟುವ ಎಲ್ಲ ಕಾರ್ಯಗಳೂ ಇದುವರೆಗೂ ವಿಫಲವಾಗಿವೆ.
ಹೀಗೆ ಸಾಗರದೊಳಕ್ಕೆ ಚಿಮ್ಮುತ್ತಿರುವ ಪೆಟ್ರೋಲಿಯಮ್ನ್ನು ಮತ್ತೊಂದು ದೊಡ್ಡ ಬಾವಿ ಕೊರೆದು ಅದಕ್ಕೆ ತಿರುಗಿಸುವ ಕಾರ್ಯ ಜರುಗುತ್ತಿದ್ದು ಇದು ಪೂರ್ಣಗೊಳ್ಳಲು ಕನಿಷ್ಟ ಪಕ್ಷ 3 ತಿಂಗಳು ಬೇಕಾಗುತ್ತದೆ. ಅಷ್ಟೊಂದು ಸಾಗರದಾಳದಲ್ಲಿ ಬಾವಿ ಕೊರೆಯುವ ಕೆಲಸವನ್ನು ಕೇವಲ ರೋಬೋಟ್ ಚಾಲಿತ ಯಂತ್ರಗಳು ಮಾತ್ರವೇ ಮಾಡಬಹುದಾಗಿದೆ. ಪೆಟ್ರೋಲಿಯಂ ಸೋರಿಕೆಯಿಂದ ಮಲಿನಗೊಳ್ಳುತ್ತಿರುವ ಸಾಗರದಿಂದ ಲೂಸಿಯಾನ, ಅಲಬಾಮಾ ಮತ್ತು ಪ್ಲೋರಿಡಾದಂಥಹ ರಾಜ್ಯಗಳ ತೀರಪ್ರದೇಶಗಳು ಮತ್ತು ಜೀವ ವೈವಿಧ್ಯವು ಸಂಕಷ್ಟಕ್ಕೆ ಸಿಲುಕಿವೆ. ಈ ಭಾಗದಲ್ಲಿ ಪಕ್ಷಿ ಸಂಕುಲಗಳು, ಸಮುದ್ರ ಜೀವಿಗಳು, ಅಳಿದುಳಿದ ಜೀವಿಗಳು, ಇತ್ಯಾದಿ ಈಗಾಗಲೇ ಸಾವನ್ನಪ್ಪಿವೆ. ಸಾಗರದೊಳಕ್ಕೆ ಸೋರಿಕೆಯಾಗಿರುವ ಪೆಟ್ರೋಲಿಯಂ ತೈಲವು ಸಸ್ಯಗಳ ಮೂಲಕ ಮಾನವ ಮತ್ತು ಇತರೆ ಜೀವಿಗಳ ದೇಹವನ್ನು ಸೇರಿ ಹಲವು ಕಾಯಿಲೆಗಳಿಗೆ ಕಾರಣವಾಗಲಿರುವುದು.
ಬಿಪಿ ಕಂಪನಿಯ ಒಡೆತನದಲ್ಲಿರುವ ಪೆಟ್ರೋಲಿಯಂ ಕಂಪನಿಯು ಇಂಥಹ ದುರ್ಘಟನೆಗೀಡಾಗಿರುವುದು ಇದೇ ಮೊದಲೇನಲ್ಲ. 1989ರಲ್ಲಿ ತೈಲ ಸಂಗ್ರಹಾಗಾರವೊಂದು ಸಿಡಿದು 40.0 ಲಕ್ಷ ಲೀಟರ್ ಪೆಟ್ರೋಲಿಯಂ ಸಮುದ್ರದೊಳಕ್ಕೆ ಸೋರಿಕೆಯಾಗಿ ಸೇರಿಹೋಗಿತ್ತು. ಈ ಘಟನೆಯ ಪರಿವೀಕ್ಷಣೆಯ ನಂತರ ತಿಳಿದುಬಂದದ್ದೇನೆಂದರೆ ಈ ಕಂಪನಿಯು ದುರ್ಘಟನೆಯಾದ ಸಂದರ್ಭದಲ್ಲಿ ಸೋರಿಕೆಯಾಗುವ ಪೆಟ್ರೋಲಿಯಂನ್ನು ಸಂಗ್ರಹಿಸಲು ದೊಡ್ಡ ರಬ್ಬರ್ ಬಿರಡೆಗಳನ್ನಾಗಲಿ, ಅಥವಾ ಅವಶ್ಯ ತಂಡಗಳನ್ನಾಗಲೀ ಸಿದ್ದಪಡಿಸಿರಲಿಲ್ಲ ಎಂಬುದು. ಈಗಾಗಲೇ ಸುಮಾರು 9.0 ಲಕ್ಷ ಲೀಟರ್ ಪೆಟ್ರೋಲಿಯಂ ಸಮುದ್ರದೊಳಕ್ಕೆ ಸೇರಿಹೋಗಿದೆ. ಈ ದುರ್ಘಟನೆಯಲ್ಲಿ ಸಿಲುಕಿ ಬದುಕುಳಿದವರು ಒಬ್ಬೊಬ್ಬರಾಗಿ ಉಸಿರು ಹೊರಡಿಸುತ್ತಿದ್ದು ಕಂಪನಿಯ ವ್ಯವಸ್ಥಿತ ಲೋಪಗಳು (ಅಂದರೆ ಉದ್ದೇಶಪೂರ್ವಕವಾಗಿ ಹಣ ಉಳಿಸುವ ಸಲುವಾಗಿ ಲೋಪಗಳನ್ನು ಸರಿಪಡಿಸದೆ ಹಾಗೆಯೇ ಉಳಿಸಿಕೊಂಡಿರುವುದು) ಹೊರಬೀಳುತ್ತಿವೆ. ದುರ್ಘಟನೆ ನಡೆದಾಕ್ಷಣವೇ ಕಂಪನಿಯು ತಮಗೇ ಗೊತ್ತಿಲ್ಲದ ಹಲವು ಹೇಳಿಕೆಗಳಿಗೆ ಬಲವಂತವಾಗಿ ತಮ್ಮಿಂದ ಸಹಿ ಮಾಡಿಸಿಕೊಳ್ಳುತ್ತಿದೆಯೆಂದು ಅವರು ದೂರುತ್ತಿದ್ದಾರೆ.
ಅಮೇರಿಕಾ ಸರ್ಕಾರದಲ್ಲಿ ಉನ್ನತ ಹುದ್ದೆಗಳಲ್ಲಿ ಕೆಲಸ ಮಾಡುವ ಗಣ್ಯಾತಿಗಣ್ಯರಲ್ಲಿ ಹಲವರು ಈ ಹಿಂದೆ ಬಿಪಿ ಕಂಪನಿಯಂಥದೇ ಅತಿ ದೊಡ್ಡ ದೈತ್ಯ ಕಂಪನಿಗಳಲ್ಲಿ ಕೆಲಸ ಮಾಡಿಬಂದವರೇ ಆಗಿರುತ್ತಾರೆ. ಸರ್ಕಾರದ ಹುದ್ದೆಗೆ ಬಂದ ನಂತರ ಅಂಥಹ ಕಂಪನಿಗಳಿಗೆ ಅವಶ್ಯವಿರುವ ಕಂಪನಿ ಪರವಾದ ಕಾಯಿದೆ ಮತ್ತು ನಿಯಮಾವಳಿಗಳನ್ನು ರೂಪಿಸುವುದು ಸಾಮಾನ್ಯ. ಇದಕ್ಕೆ ಇತ್ತೀಚಿನ ಉದಾಹರಣೆಯೆಂದರೆ, ಅಮೇರಿಕಾದ ಉಪಾಧ್ಯಕ್ಷನಾಗಿದ್ದ ಡಿಕ್ ಚೆನಿ ಈ ಮೊದಲು ಹಲ್ಲಿಬರ್ಟನ್ ಕಂಪನಿಯಲ್ಲಿ ಹಿರಿಯ ಹುದ್ದೆಯಲ್ಲಿದ್ದವನು. ಅಮೇರಿಕಾದ ಉಪಾಧ್ಯಕ್ಷನಾಗಿದ್ದಾಗ ತೈಲ ಕಂಪನಿಗಳು ಅತಿ ದುಬಾರಿ ಬೆಲೆಯ ಸುರಕ್ಷತಾ ಉಪಕರಣಗಳನ್ನು ಬಳಸುವ ಅಗತ್ಯವಿಲ್ಲವೆಂದು ವಿನಾಯಿತಿ ನೀಡಿದ್ದ. ಇಂಥಹ ಅವಘಡಗಳು ಹೆಚ್ಚಾಗಿ ಅಮೇರಿಕಾದಲ್ಲಿ ಸಂಭವಿಸುತ್ತಿರುವುದು ತಮ್ಮನ್ನು ಕಂಪನಿಗಳಿಗೆ ಮಾರಿಕೊಂಡಿರುವ ರಿಪಬ್ಲಿಕನ್ ಪಕ್ಷ ಆಳುತ್ತಿರುವ ರಾಜ್ಯಗಳಲ್ಲಿ.
ಈ ದುರ್ಘಟನೆಯಿಂದ ಕೋಪಗೊಂಡಿರುವ ಅಮೇರಿಕಾದ ಪ್ರಜೆಗಳು ತೈಲ ಕಂಪನಿಗಳ ವಿರುದ್ದ ಕೂಗು ಹಾಕುತ್ತಿದ್ದು, ಸರ್ಕಾರ ಕಂಪನಿಯ ವಿರುದ್ದ ಕ್ರಮಕೈಗೊಳ್ಳಬೇಕೆಂದು ಒತ್ತಾಯಿಸುತ್ತಿದ್ದಾರೆ. ತೈಲ ಕಂಪನಿಗಳಿಗೆ ನೀಡಿದ್ದ ಇಂಥಹ ದೋಷಪೂರಿತ ವಿನಾಯಿತಿಗಳನ್ನು ತೆಗೆದುಹಾಕಲು ಒಬಾಮ ಸರ್ಕಾರ ಕ್ರಮ ಕೈಗೊಳ್ಳುತ್ತಿದೆ. ಇಂಥಹ ದುರ್ಘಟನೆಗಳು ಸಂಭವಿಸಿದಾಗ ತೈಲ ಕಂಪನಿಗಳು ತೆರಬೇಕಾದ ದಂಡವನ್ನು ಪ್ರಸ್ತುತ ರೂ. 338 ಕೋಟಿಯಿಂದ ರೂ. 45,000 ಕೋಟಿಗೆ ಏರಿಸಲು ಅಮೇರಿಕಾದ ಪಾರ್ಲಿಮೆಂಟ್ ಕ್ರಮಕೈಗೊಂಡಿದೆ. ಆದರೆ, ನಮ್ಮ ದೇಶದಲ್ಲಿ ಕಾಂಗ್ರೆಸ್ ನೇತೃತ್ವದ ಯುಪಿಎ-2 ಸರ್ಕಾರ ಅಮೇರಿಕಾದ ಬಹುರಾಷ್ಟ್ರೀಯ ಕಂಪನಿಗಳ ಹಿತಾಸಕ್ತಿಗಾಗಿ ಪರಮಾಣು ಸ್ಥಾವರ ಅಳವಡಿಸುವ ಕಂಪನಿಗಳು ಅವಘಡ ಸಂಭವಿಸಿದಲ್ಲಿ ಕೇವಲ ರೂ. 2000ಕೋಟಿ ಯಷ್ಟನ್ನು ನೀಡಿ ಪರಾರಿಯಾಗುವುದಕ್ಕೆ ಅವಕಾಶ ನೀಡುವ ಮಸೂದೆಯನ್ನು ಲೋಕಸಭೆಯಲ್ಲಿ ಅಂಗೀಕರಿಸಿದೆ.
***********
Subscribe to:
Posts (Atom)