Thursday, December 23, 2010
ಪೆನ್ಸಿಲ್ ನಲ್ಲಿರುವ ಕಪ್ಪು ಸೀಸದ ಕಡ್ಡಿ ಉಕ್ಕಿಗಿಂತ ಬಲಿಷ್ಟ!
ಪೆನ್ಸಿಲ್ ನಲ್ಲಿ ನಮಗೆ ಬರೆಯಲು ಸಾಧ್ಯವಾಗುವುದು ಅದರಲ್ಲಿರುವ ಗ್ರಾಫೈಟ್ ಎಂದು ಕರೆಯಲಾಗುವ ಕಪ್ಪು ಸೀಸದ ಕಡ್ಡಿಯಿಂದ. ಗ್ರಾಫೈಟ್ ನ್ನು ಅತಿ ಸಣ್ಣದಾಗಿ ಎಳೆ ಎಳೆಯಂತೆ ಕತ್ತರಿಸುತ್ತಾ ಹೋದಂತೆ, ಅದನ್ನು ಪರಮಾಣುವಿಗಿಂತ ಅತಿ ಸಣ್ಣ ಎಳೆಯಂತೆ ಬೇರ್ಪಡಿಸಿದಾಗ ಈ ಸಣ್ಣ ಹಾಳೆಗೆ ವಿಚಿತ್ರ ಗುಣಲಕ್ಷಣಗಳು ಮೂಡಿಬರುತ್ತವೆ. ಈ ಹಾಳೆಯನ್ನು ಗ್ರಾಫೀನ್ ಎಂದು ಕರೆಯುತ್ತಾರೆ. ಇದು ವಿಶ್ವದ ಮೊದಲ 2 ಆಯಾಮದ ವಸ್ತುವೂ ಆಗಿದೆ. ಈ ಗ್ರಾಫೈಟ್ ಹಾಳೆಯಲ್ಲಿ ಕೇವಲ ಇಂಗಾಲದ ಪರಮಾಣುಗಳು ಮಾತ್ರವಿರುತ್ತವೆ.
ಈ ರೀತಿ ಹಾಳೆಗಳಂತೆ ಗ್ರಾಫೈಟ್ ನ್ನು ಬೇರ್ಪಡಿಸುವ ವಿಧಾನವನ್ನು ಕಂಡುಹಿಡಿದ ಆಂಡ್ರೆ ಗ್ರೀಮ್ ಮತ್ತು ನೊವಸೆಲೆವ್ ಎಂಬ ವಿಜ್ಞಾನಿಗಳಿಗೆ ಈ ವರ್ಷದ ನೊಬೆಲ್ ಪಾರಿತೋಷಕವು ಭೌತಶಾಸ್ತ್ರ ಸಂಶೋಧನೆ ವಿಭಾಗದಲ್ಲಿ ಲಭಿಸಿದೆ. ಗ್ರಾಫೈಟ್ ಮತ್ತು ಇತರೆ ವಸ್ತುಗಳನ್ನು ಅವುಗಳ ಮೂಲವಸ್ತುಗಳ ರೂಪದಲ್ಲಿ, ಬೇರೆ ಬೇರೆ ವಿಧಾನಗಳಿಂದ ತೆಳುವಾಗಿ ಬೇರ್ಪಡಿಸಿ ಅವುಗಳ ಗುಣಲಕ್ಷಣಗಳನ್ನು ನಮ್ಮ ದೇಶದ ಪ್ರೊ. ಸಿ.ಎನ್.ಆರ್ ರಾವ್ ಒಳಗೊಂಡಂತೆ ಇತರೆ ವಿಜ್ಞಾನಿಗಳು ಅಧ್ಯಯನ ಮಾಡುತ್ತಿದ್ದಾರೆ.
ಪೆನ್ಸಿಲ್ ನಿಂದ ನಾವು ಬರೆಯಲಾರಂಭಿಸಿದರೆ ಸಾಕು ನೋಡನೋಡುತ್ತಿದ್ದಂತೆ ನಮಗೆ ಗ್ರಾಫೈಟ್ ಕಪ್ಪು ಪುಡಿ ಉದುರಲಾರಂಭಿಸುತ್ತದೆ. ಇಂಥಹ ಅತಿ ಸಣ್ಣ ಕಣಗಳನ್ನು ಮತ್ತಷ್ಟು ಸಣ್ಣ ಹಾಳೆಗಳಂತೆ ಬೇರ್ಪಡಿಸಿ ಅಂತಿಮವಾಗಿ ಪಡೆಯುವುದೇ ಗ್ರಾಫೀನ್.
ಗ್ರಾಫೈಟ್ ನಿಂದ ಸಣ್ಣಾತಿಸಣ್ಣ ತೆಳು ಹಾಳೆಗಳಂತೆ ಬೇರ್ಪಡೆಯಾದ ಗ್ರಾಫೀನ್, ಪಾರದರ್ಶಕವಾಗಿ ಬೆಳಕನ್ನು ತನ್ಮೂಲಕ ಹಾದುಹೋಗಲು ಬಿಡುತ್ತದೆ, ಆದರೆ ನೀರು ಮತ್ತು ಗಾಳಿಗೆ ತಡೆಯೊಡ್ಡುತ್ತದೆ. ಹೀಲಿಯಂನಷ್ಟು ಅತಿ ಸಣ್ಣ ಅಣುವೂ ಕೂಡ ಇದನ್ನು ತೂರಿ ಹೋಗಲಾರದು. ರಬ್ಬರ್ ಹಿಗ್ಗಿ ಕುಗ್ಗುವಂತೆ ಇದನ್ನೂ ಸಹ ಜಗ್ಗಾಡಬಹುದು. ಅಲ್ಲದೆ ನೂರಾರು ವಿಶಿಷ್ಟ ಉಪಯುಕ್ತ ಗುಣಲಕ್ಷಣಗಳ ವೈವಿಧ್ಯತೆಯನ್ನೇ ಹೊಂದಿರುವ ಈ ಗ್ರಾಫೀನ್, ತಾಮ್ರದಂತೆ ತನ್ಮೂಲಕ ವಿದ್ಯುತ್ ನ್ನು ಒಂದು ಕಡೆಯಿಂದ ಮತ್ತೊಂದು ಕಡೆಗೆ ಸಾಗಿಸಬಲ್ಲುದು. ಇದು ಈವರೆಗೆ ಬಳಕೆಯಲ್ಲಿರುವ ವಾಹಕಗಳೆಲ್ಲೆಲ್ಲ ಅತ್ಯುತ್ತಮ ವಿದ್ಯುತ್ ವಾಹಕವೂ ಹೌದು. ಮತ್ತೂ ವಿಚಿತ್ರವೆಂದರೆ ಇದು ವಜ್ರದಂತೆ ಕಠಿಣವೂ ಹೌದು. ಉಕ್ಕಿಗಿಂತ ನೂರು ಪಟ್ಟು ಬಲಿಷ್ಟ.
ಗ್ರಾಫೀನ್ ನ್ನು ಕಂಪ್ಯೂಟರ್ ಚಿಪ್ ಗಳಲ್ಲಿ , ಸೋಲಾರ್ ಕೋಶಗಳಲ್ಲಿ, ಟ್ರಾನ್ಸಿಸ್ಟರ್ ಗಳು, ಹಗುರ ವಿಮಾನ, ವಾಹನಗಳ ಇಂಜಿನ್, ಬುಲೆಟ್ ಗಳು, ಇತ್ಯಾದಿಗಳಲ್ಲಿ ಬಳಸಬಹುದು. ಮುಂದಿನ ವರ್ಷಗಳಲ್ಲಿ ಈ ಅದ್ಭುತ ವಸ್ತು ಹತ್ತಲವು ಉಪಯುಕ್ತತೆಗಳಿಗೆ ಕಾರಣವಾಗಲಿದೆ ಎನ್ನಲಾಗುತ್ತಿದೆ.
*******
Subscribe to:
Post Comments (Atom)
No comments:
Post a Comment