Monday, June 11, 2007

ನ್ಯೂಕ್ಲಿಯರ್ (ಅಣು) ಶಕ್ತಿಯಿಂದ ವಿದ್ಯುತ್ ತಯಾರಿಸುವುದು ಹೇಗೆ?

ನ್ಯೂಕ್ಲಿಯರ್ (ಅಣು) ಶಕ್ತಿಯಿಂದ ವಿದ್ಯುತ್ ತಯಾರಿಸುವುದು ಹೇಗೆ? ಉಷ್ಣ (ಥರ್ಮಲ್) ವಿದ್ಯುತ್ ಘಟಕಗಳಲ್ಲಿ ಸಾಮಾನ್ಯವಾಗಿ ಕಲ್ಲಿದ್ದಲು, ಪೆಟ್ರೋಲಿಯಂ ಉತ್ಪನ್ನ, ಇತ್ಯಾದಿಗಳನ್ನು ಉರುವಲಾಗಿ ಬಳಸಿ ಅದರಿಂದ ವಿದ್ಯುತ್ನ್ನು ಉತ್ಪಾದಿಸಲಾಗುತ್ತದೆ. ಉದಾಹರಣೆಗೆ: ರಾಯಚೂರು ಉಷ್ಣ ವಿದ್ಯುತ್ ಘಟಕ, ಇತ್ಯಾದಿ. ಆದರೆ ಅಣು ವಿದ್ಯುತ್ ಸ್ಥಾವರ ಘಟಕಗಳಲ್ಲಿ ಯುರೋನಿಯಂನ್ನು ಇಂಧನವಾಗಿ ಬಳಸಲಾಗುತ್ತದೆ. ಉದಾ: ಕೈಗಾ ಅಣು ಶಕ್ತಿ ವಿದ್ಯುತ್ ಘಟಕ, ಇತ್ಯಾದಿ. ವಿಶ್ವದಾದ್ಯಂತ, ಭೂಗರ್ಭದ ಶಿಲೆಗಳಲ್ಲಿ ಯುರೋನಿಯಂ ದೊರೆಯುತ್ತದೆ. ಫ್ರಾನ್ಸ್ನಲ್ಲಿ ದೇಶದ ಶೇ. 75ರಷ್ಟು ಅಣು ವಿದ್ಯುತ್ ಉತ್ಪಾದಿಸಿದರೆ, ಅಮೇರಿಕಾದಲ್ಲಿ ಶೇ. 15ರಷ್ಟು, ಮತ್ತು ಭಾರತದಲ್ಲಿ ಕೇವಲ ಶೇ. 3ರಷ್ಟು ಅಣುವಿದ್ಯುತ್ನ್ನು ಉತ್ಪಾದಿಸಲಾಗುತ್ತಿದೆ. ಅಣು ವಿದ್ಯುತ್:ವಸ್ತುವು ಮೂಲತ: ಮೂಲವಸ್ತುಗಳಿಂದ ರಚನೆಯಾಗಿರುತ್ತದೆ. ಮೂಲವಸ್ತುವಿನಲ್ಲಿ ಅತಿ ಸಣ್ಣ ಕಣಗಳಾದ ಪರಮಾಣುಗಳು ಒಂದಕ್ಕೊಂದು ಅಂಟಿಕೊಂಡಂತೆ ಒಂದು ನಿದರ್ಿಷ್ಟ ಆಕಾರದಲ್ಲಿ ಬಂಧಿಸಲ್ಪಟ್ಟಿರುತ್ತವೆ. ಅವುಗಳನ್ನು ಹಿಡಿದಿಟ್ಟಿರುವ ಬಂಧಕ್ಕೆ ಅಗಾಧ ಶಕ್ತಿಯಿದೆ. ಪ್ರತಿಯೊಂದು ಪರಮಾಣುವಿನ ಕೇಂದ್ರದಲ್ಲಿ ನ್ಯೂಕ್ಲಿಯಸ್ ಇದ್ದು ಅದರ ಸುತ್ತಲೂ ಎಲೆಕ್ಟ್ರಾನ್ಗಳು ಸುತ್ತುತ್ತಿರುತ್ತವೆ. ಒಂದು ಭಾರ ಪರಮಾಣುವಿನ ನ್ಯೂಕ್ಲಿಯಸ್ (ಉದಾಹರಣೆಗೆ: ಯುರೇನಿಯಂ)ನ್ನು ಎರಡು ಲಘು ಪರಮಾಣುಗಳಾಗಿ ವಿಭಜಿಸಿದಾಗ ಈ ಬೈಜಿಕ ಕ್ರಿಯೆಯಲ್ಲಿ ಅತೀವ ಪ್ರಮಾಣದ ಶಕ್ತಿಯು ಬಿಡುಗಡೆಯಾಗುತ್ತದೆ. ಇದನ್ನು ಬೈಜಿಕ ವಿದಲನ (ನ್ಯೂಕ್ಲಿಯರ್ ಫಿಜ:ನ್) ಕ್ರಿಯೆ ಎಂದು ಕರೆಯಲಾಗುತ್ತದೆ. ಹಾಗೆಯೇ, ಎರಡು ಲಘು ಪರಮಾಣುಗಳನ್ನು ಒಟ್ಟಿಗೆ ಸೇರಿಸಿದಾಗ ದೊಡ್ಡದೊಂದು ಪರಮಾಣು ರೂಪುಗೊಂಡು ಈ ಕ್ರಿಯೆಯಲ್ಲೂ ಅತೀವ ಪ್ರಮಾಣದ ಶಕ್ತಿಯು ಬಿಡುಗಡೆಯಾಗುತ್ತದೆ. ಇದನ್ನು ಬೈಜಿಕ ಸಂಲಯನ (ನ್ಯೂಕ್ಲಿಯರ್ ಫ್ಯೂಸನ್) ಎಂದು ಕರೆಯಲಾಗುತ್ತದೆ. ಹೀಗೆ ಬೈಜಿಕ ವಿದಲನ ಅಥವಾ ಬೈಜಿಕ ಸಂಲಯನ ಕ್ರಿಯೆಗಳಿಂದ ಬಿಡುಗಡೆಯಾಗುವ ಅಪಾರ ಪ್ರಮಾಣದ ಉಷ್ಣಶಕ್ತಿಯನ್ನೇ ಬಳಸಿ ವಿದ್ಯುತ್ ತಯಾರಿಸಲಾಗುತ್ತದೆ. ಯುರೋನಿಯಂನ್ನು ಗಣಿಗಳಿಂದ ಹೊರತೆಗೆದು ಸಂಸ್ಕರಿಸಿ ಸಣ್ಣ ಸಣ್ಣ ಪೆಲೆಟ್ಗಳ ರೂಪಕ್ಕೆ ತರಲಾಗುತ್ತದೆ. ಯುರೋನಿಯಂನಲ್ಲಿ ವಿಕಿರಣವನ್ನು ಹೊರಸೂಸುವ ಗುಣವಿದ್ದು ಈ ವಿಕಿರಣವು ವಾತಾವರಣಕ್ಕೆ ಹೊರಸೂಸದಂತೆ ಎಚ್ಚರವಹಿಸಲಾಗುತ್ತದೆ. ಇಲ್ಲದಿದ್ದಲ್ಲಿ ನ್ಯೂಕ್ಲಿಯರ್ ವಿಷವು ಸುತ್ತಲಿನ ವಾತಾವರಣದ ಮೇಲೆ ನಿಯಂತ್ರಿಸಲಾಗದ ಅಪಾಯಕಾರಿ ದುಷ್ಪರಿಣಾಮಗಳನ್ನು ಬೀರುತ್ತದೆ. ಅಣು ವಿದ್ಯುತ್ ಸ್ಥಾವರಗಳಲ್ಲಿ ಯುರೋನಿಯಂನ್ನು ವಿಭಜನೆಗೊಳಿಸಿದಾಗ ಅದರಿಂದ ಉಂಟಾಗುವ ಶಾಖದಿಂದ ನೀರನ್ನು ಕುದಿಸಿ ಹಬೆಯಾಗಿಸಲಾಗುತ್ತದೆ. ಈ ರೀತಿ ಉಂಟಾದ ಹಬೆಯಿಂದ ಟಬರ್ೈನ್-ಜನರೇಟರ್ಗಳನ್ನು ತಿರುಗಿಸಿ ವಿದ್ಯುತ್ನ್ನು ಉತ್ಪಾದಿಸಲಾಗುತ್ತದೆ. ಈ ಪ್ರಕ್ರಿಯೆಯಲ್ಲಿ ನ್ಯೂಕ್ಲಿಯರ್ ತ್ಯಾಜ್ಯ ವಸ್ತುವು ಬಿಡುಗಡೆಯಾಗುತ್ತದೆ. ಈ ತ್ಯಾಜ್ಯ ವಸ್ತುವನ್ನು ಪರಿಸರಕ್ಕೆ ಹಾನಿಯಾಗದಂತೆ ವಿಲೇವಾರಿ ಮಾಡುವುದೇ ಅತಿ ದೊಡ್ಡ ಸಮಸ್ಯೆಯಾಗಿದೆ. ಜೊತೆಗೆ ಅಣು ಸ್ಥಾವರ ವಿದ್ಯುತ್ ಘಟಕಗಳ ಸುರಕ್ಷತೆಯು ಮತ್ತೊಂದು ಸವಾಲಿನ ವಿಷಯವೆನಿಸಿದೆ. ಅಣು ವಿದ್ಯುತ್ ಸ್ಥಾವರದಿಂದ ಬಿಡುಗಡೆಯಾಗುವ ನ್ಯೂಕ್ಲಿಯರ್ ತ್ಯಾಜ್ಯ ವಸ್ತುವನ್ನು ಪುನರ್-ಸಂಸ್ಕರಿಸಿ ಶೇ. 95ರಷ್ಟು ಯುರೋನಿಯಂನ್ನು ಮತ್ತೆ ಪಡೆಯಬಹುದಾದರೂ ಅದಕ್ಕೆ ತಗಲುವ ವೆಚ್ಚ ಅಧಿಕ ಮತ್ತು ತಂತ್ರಜ್ಞಾನ ಆಧುನಿಕವಾದದ್ದು. ಇದರಿಂದ ತ್ಯಾಜ್ಯವಸ್ತುವಿನಲ್ಲಿ ಅಪಾಯಕಾರಿ ವಿಕಿರಣ ವಸ್ತುವಿನ ಪಾಲನ್ನು ಕಡಿಮೆ ಮಾಡಬಹುದು.
ಏನಿದು ಭಾರತ-ಅಮೇರಿಕಾ 123 ಒಪ್ಪಂದ?: 123 ಒಪ್ಪಂದವೆಂದೇ ಜನಪ್ರಿಯವಾಗಿರುವ ಅಮೇರಿಕಾ ಅಣುಶಕ್ತಿ ಕಾಯಿದೆ 1954ರ ಸೆಕ್ಷನ್ 123 ರ ಭಾರತ-ಅಮೇರಿಕಾ ಅಣ್ವಸ್ತ್ರ ಒಪ್ಪಂದ ಇನ್ನೂ ನೆನೆಗುದಿಯಲ್ಲೇ ಇದೆ. ಈ ಒಪ್ಪಂದದ ಮೂಲಕ ಭಾರತವನ್ನು ಅಣ್ವಸ್ತ್ರ ನಿಷೇಧ ಒಪ್ಪಂದದ ಬಲೆಯೊಳಗೆ ತರುವುದು, ಚೀನಾ ಮತ್ತು ಉತ್ತರ ಕೊರಿಯಾಗಳಿಗೆ ಪಯರ್ಾಯ ಶಕ್ತಿಯಾಗಿ ಭಾರತವನ್ನು ಛೂ ಬಿಡುವುದು, ಮಧ್ಯ ಏಷ್ಯಾದಲ್ಲಿ ತನ್ನ ರಾಜಕೀಯ ಬೇಳೆ ಬೇಯಿಸಿಕೊಳ್ಳಲು ಭಾರತದ ಸಹಾಯ ಪಡೆಯುವುದು ಮತ್ತು ಭಾರತದ 14 ನಾಗರೀಕ ಅಣುಸ್ಥಾವರ ಘಟಕಗಳನ್ನು ತಪಾಸಣೆ ಮಾಡಲು ಅವಕಾಶ ಪಡೆಯುವುದು - ಇವು ಅಮೇರಿಕಾದ ಮನದಾಳದ ಆಸೆಗಳು. ಆದರೆ, ಭಾರತವು ನಾಗರೀಕ ಮತ್ತು ಮಿಲಿಟರಿ ಅಣುಸ್ಥಾವರಗಳ ನಡುವೆ ಸ್ಪಷ್ಟವಾಗಿ ಇನ್ನೂ ಗೆರೆ ಎಳೆದುಕೊಂಡಿಲ್ಲದ ಕಾರಣ, ಈ ಒಪ್ಪಂದಕ್ಕೆ ತಿದ್ದುಪಡಿ ತರದೆ ಭಾರತವೇನಾದರೂ ಸಹಿ ಹಾಕಿದಲ್ಲಿ ಭಾರತದ ಮಿಲಿಟರಿ ಕ್ಷೇತ್ರಕ್ಕೆ ಅಮೇರಿಕಾವನ್ನು ಕರೆತಂದಾಗುತ್ತದೆ. ಇನ್ನೊಂದೆಡೆ, ಭಾರತದಲ್ಲಿ ಯುರೋನಿಯಂ ಕಡಿಮೆ ಪ್ರಮಾಣದಲ್ಲಿರುವುದರಿಂದ ಭಾರತವು ತನ್ನ ಅಣು ವಿದ್ಯುತ್ ಸ್ಥಾವರ ಘಟಕಗಳಿಗೆ ಅಮೇರಿಕಾದಿಂದ ಯುರೋನಿಯಂ ಪಡೆದು ತನ್ನ ಆಂತರಿಕ ಯುರೋನಿಯಂ ನ್ನು ಮತ್ತಷ್ಟು ನ್ಯೂಕ್ಲಿಯರ್ ಬಾಂಬುಗಳನ್ನು ತಯಾರಿಕೆಗಾಗಿ ಬಳಸಿಕೊಳ್ಳಲು ಹವಣಿಸುತ್ತಿದೆಯೆಂಬುದು ಪಾಕಿಸ್ತಾನದ ವಿಶ್ಲೇಷಣೆ. ನ್ಯೂಕ್ಲಿಯರ್ ತ್ಯಾಜ್ಯ ವಸ್ತುವನ್ನು ತಾನು ಪುನರ್-ಸಂಸ್ಕರಿಸಲು ಅನುಮತಿ ನೀಡಬೇಕೆಂಬುದು ಭಾರತದ ಬೇಡಿಕೆಯಾಗಿದೆ. ಇಲ್ಲದಿದ್ದಲ್ಲಿ ಪುನರ್-ಸಂಸ್ಕರಣೆಯನ್ನೇ ದೊಡ್ಡ ವ್ಯಾಪಾರವನ್ನಾಗಿ ಮಾಡಿಕೊಂಡಿರುವ ಜಿ-5 ರಾಷ್ಟ್ರಗಳ ಹಿಂದೆ ಭಾರತ ತನ್ನ ನ್ಯೂಕ್ಲಿಯರ್ ತ್ಯಾಜ್ಯ ವಸ್ತು ಪುನರ್-ಸಂಸ್ಕರಣೆಗಾಗಿ ಹಣ ವ್ಯಯಿಸುತ್ತಾ ಪಾಡು ಪಡಬೇಕಾಗುತ್ತದೆ

No comments: