Monday, December 8, 2008

ಫ್ರೀ ಸಾಫ್ಟ್ ವೇರ್ , ಹೊಸ ಮಾಧ್ಯಮ ಮತ್ತು ಪ್ರಾದೇಶಿಕ ಭಾಷೆಗಳು

ಫ್ರೀ ಸಾಫ್ಟ್ವೇರ್ ಎಂದರೆ, ನಕಲು ಮಾಡುವ, ಮೂಲ ತಂತ್ರಾಂಶದೊಂದಿಗೆ ವಿತರಿಸುವ, ಮಾರ್ಪಡಿಸುವ ಮತ್ತು ಹೊಸ ಕ್ಷೇತ್ರಕ್ಕೆ ಅನ್ವಯಿಸುವ ಎಲ್ಲ ಸ್ವಾತಂತ್ರ್ಯಗಳನ್ನು ಅದು ಬಳಕೆದಾರರಿಗೆ ನೀಡುತ್ತದೆ. ಆದರೆ, ಮಾಲೀಕತ್ವದ ಸಾಫ್ಟ್ ವೇರ್ ಮೂಲ ತಂತ್ರಾಂಶವನ್ನು (Proprietary software) ಬಳಕೆದಾರರಿಗೆ ನಿರಾಕರಿಸುವ ಮೂಲಕ ಎಲ್ಲ ಸ್ವಾತಂತ್ರ್ಯಗಳನ್ನು ಹತ್ತಿಕ್ಕುತ್ತವೆ.
ನಾವಿಂದು ಡಿಜಿಟಲ್ ಯುಗದಲ್ಲಿದ್ದೇವೆ ಮತ್ತು ಡಿಜಿಟಲ್ ಯುಗದಲ್ಲಿ ಅತ್ಯಂತ ಮೂಲ ತಳಪಾಯವೆಂದರೆ ಆಪರೇಟಿಂಗ್ ಸಿಸ್ಟಮ್. ಆದ್ದರಿಂದ, ಯಾವುದೇ ರಾಷ್ಟ್ರವು ಈ ತಳಪಾಯವನ್ನು ನಿಯಂತ್ರಿಸಲು ಸೂಕ್ತ ಶ್ರಮವಹಿಸಬೇಕು. ತನ್ನ ಪಾರದರ್ಶಕತೆಯಿಂದಾಗಿ, ಭಾರತಕ್ಕೆ ಗ್ನೂ/ಲಿನಕ್ಸ್ ಅಂತದೊಂದು ಆಕರ್ಷಕ ತಳಪಾಯವೆನಿಸಿದೆ. ಡಿಜಿಟಲ್ ತಂತ್ರಜ್ಞಾನವು ಹೊಸ ಸಾಧ್ಯತೆಗಳನ್ನು ಸೃಷ್ಟಿಸಿದೆ. ವಸ್ತುವೊಂದನ್ನು (ಚಲನಚಿತ್ರಗಳು, ಲೇಖನಗಳು, ಹಾಡುಗಳು) ಒಂದು ಬಾರಿ ಸೃಷ್ಟಿಸಲು ತಗಲುವ ವೆಚ್ಚದಲ್ಲೇ ವಿಶ್ವದಾದ್ಯಂತ ವಿತರಿಸುವ ಸಂಸ್ಕೃತಿಯನ್ನು ಅದು ಸಾಧ್ಯಗೊಳಿಸಿದೆ. ಡಿಜಿಟಲ್ ತಂತ್ರಜ್ಞಾನದ ಲಾಭವನ್ನು ಎಲ್ಲ ಜನ ಸಮುದಾಯಕ್ಕೆ ತಲುಪಿಸಲು ಗ್ನೂ/ಲಿನಕ್ಸ್ (ಜಿಎನ್ಯು) ಒಂದು ಅತ್ಯುತ್ತಮ ಅವಕಾಶಗಳಲ್ಲೊಂದಾಗಿದೆ.
ಸಾಂಸ್ಕೃತಿಕ, ರಾಜಕೀಯ ಮತ್ತು ಆರ್ಥಿಕ ಸ್ವಾತಂತ್ರ್ಯದ ನೆಲೆಗಟ್ಟಿನಲ್ಲಿ ಹೇಳುವುದಾದಲ್ಲಿ, ಡಿಜಿಟಲ್ ಕಾಲಯುಗದಲ್ಲಿ ಭಾರತದ ಭವಿಷ್ಯಕ್ಕೆ ಗ್ನೂ/ಲಿನಕ್ಸ್ ಏಕೆ ಸಂದರ್ಭೋಚಿತವಾಗಿದೆ ಎನ್ನುವುದಕ್ಕೆ ಹತ್ತಲವು ಕಾರಣಗಳಿವೆ. ಬಹುತೇಕ ಎಲ್ಲ ಸಾಫ್ಟ್ ವೇರ್ ಗಳು ಮತ್ತು ಆಪರೇಟಿಂಗ್ ಸಿಸ್ಟಂ ಗಳು ಭಾರತದಲ್ಲಿ ಕೇವಲ ಶೇಕಡಾ 5 ರಷ್ಟು ಜನರಷ್ಟೇ ಮಾತನಾಡುವ ಇಂಗ್ಲೀಷ್ ಭಾಷೆಯಲ್ಲಿವೆ. ಪ್ರಾದೇಶಿಕ ಭಾಷೆಯಲ್ಲಿ ಕಂಪ್ಯೂಟರ್ ಲಭ್ಯವಿರಬೇಕಾದಲ್ಲಿ, ಗ್ನೂ/ಲಿನಕ್ಸ್ ಆಯ್ಕೆ ಮಾತ್ರವೇ ನಮ್ಮ ಮುಂದಿರುವುದು, ಏಕೆಂದರೆ ಮಾಲೀಕತ್ವದ ಆಪರೇಟಿಂಗ್ ಸಿಸ್ಟಮ್ಸ್ ಗಳನ್ನೂ ನಾವು ಮಾರ್ಪಡಿಸಲು ಸಾಧ್ಯವಿಲ್ಲ.
ಗ್ನೂ/ಲಿನಕ್ಸ್ ಆಪರೇಟಿಂಗ್ ಸಿಸ್ಟಮ್ಸ್ ಸ್ವಾಭಾವಿಕ ಆಯ್ಕೆಯಾಗಿರುವುದೇಕೆಂದರೆ, ಯಾವುದೇ ಭಾಷೆಯೊಂದರೊಡನೆ ಅನುಸಂಧಾನ ನಡೆಸಲು ಅದು ಸ್ವಾತಂತ್ರ್ಯ ನೀಡುತ್ತದೆ. ಭಾರತದಂಥಹ ಅಭಿವೃದ್ಧಿಶೀಲ ರಾಷ್ಟ್ರಗಳಲ್ಲಿ, ತಲಾದಾಯವು 410 ಡಾಲರ್ ಗಳಷ್ಟಿದೆ. ಆಪರೇಟಿಂಗ್ ಸಿಸ್ಟಮ್ ಮತ್ತು ಬಳಕೆ ಮಾಡಬೇಕಾದ ಸಾಫ್ಟ್ ವೇರ್ ಗಳಿಗೆ ಅಷ್ಟು ವೆಚ್ಚ ತಗುಲಿದರೆ, ಭಾರತದ ಬಹುಸಂಖ್ಯಾತ ಜನರಿಗೆ ಈ ತಂತ್ರಜ್ಞಾನವನ್ನು ಪಡೆದುಕೊಳ್ಳಲು ಅಸಾಧ್ಯವಾಗುವುದು.
ತಲಾದಾಯವು ಸುಮಾರು 30 ಸಾವಿರ ಡಾಲರ್ ಗಳಿರುವ ಅಮೇರಿಕಾದಂಥಹ ರಾಷ್ಟ್ರಗಳಲ್ಲಿ ಅದನ್ನು ಪಡೆದುಕೊಳ್ಳಲು ಸಾಧ್ಯವಿರುವುದಷ್ಟೆ. ಆದ್ದರಿಂದ ಭಾರತಕ್ಕೆ ಬೇಕಾಗಿರುವುದು ರೂಪಾಯಿಗಳಲ್ಲಿರುವ ಸಾಫ್ಟ್ವೇರ್ ಹೊರತು ಡಾಲರ್ ಗಳಲ್ಲಿರುವುದಲ್ಲ ಮತ್ತು ಉಚಿತವಾಗಿ ಲಭ್ಯವಿರುವುದರಿಂದ ಗ್ನೂ/ಲಿನಕ್ಸ್ ಆ ಅವಶ್ಯಕತೆಯನ್ನು ಪೂರೈಸುತ್ತದೆ.
ಯೂ ಟ್ಯೂಬ್, ವಿಕಿಪೀಡಿಯಾ, ಗ್ನೋಮ್ ಇತ್ಯಾದಿ ಯಂಥಹ ಬಳಕೆದಾರರೇ ಸೃಷ್ಟಿಕಾರರೂ ಆಗಬಲ್ಲ, ಜನಸಮುದಾಯವೇ ಮಾಲೀಕರಾಗಬಲ್ಲ ಹೊಸ ಮಾಧ್ಯಮ ಲೋಕವನ್ನು ಸ್ವತಂತ್ರ ಮತ್ತು ಮುಕ್ತ ಸಾಫ್ಟ್ ವೇರ್ ತಂತ್ರಜ್ಞಾನವು ಅಭಿವೃದ್ಧಿಪಡಿಸಿರುವುದು ಆಶ್ಚರ್ಯವಾಗೇನೂ ಉಳಿದಿಲ್ಲ. ಇಂಟರ್ನೆಟ್ ಅನ್ನು ಅಭಿವೃದ್ಧಿ ಪಡಿಸಿರುವುದು ಮಾಹಿತಿಯನ್ನು ಹಂಚಿಕೊಳ್ಳುವ ಸಲುವಾಗಿ… ಆದರೆ, ಅದನ್ನು ಹಂಚಿಕೊಳ್ಳಲಾಗದು, ಲೈಸನ್ಸ್ ಪಡೆದುಕೊಳ್ಳಿ ಎಂದು ಕಂಪನಿಗಳು ತಾಕೀತು ಮಾಡುತ್ತಿವೆ.
ಇದರ ಹಿಂದೆಯೇ, ಡಿಜಿಟಲ್ ವಲಯದಲ್ಲಿ ಜ್ಞಾನವನ್ನು ಪ್ರಜಾಸತ್ತೆಗೊಳಿಸಲು ಪ್ರಶ್ನೆಗಳನ್ನು ಎತ್ತಲಾಗುತ್ತಿದೆ. ಇಂಥಹ ಪ್ರಶ್ನೆಗಳು ಅಂದು ಮುದ್ರಣ ಮಾಧ್ಯಮದ ಅಸ್ತಿತ್ವದೊಡನೆ ಬಂದ ಪ್ರಶ್ನೆಗಳಷ್ಟೆ ಮಹತ್ವವುಳ್ಳವು. ಇದರಿಂದಾಗಿಯೇ ನಾವು ಐ ಪಾಡ್ ಗಳನ್ನು ಕಾಣುತ್ತಿದ್ದೇವೆ. . . ಇದರಿಂದಾಗಿಯೇ ಎಂ.ಜಿ ರಸ್ತೆಯಲ್ಲಿ ಪೈರೇಟ್ ಮಾಡಿರುವ ವಿಸಿಡಿ ಗಳನ್ನು ಕಾಣುತ್ತಿದ್ದೇವೆ. . . ಇದರಿಂದಾಗಿಯೇ ಸೋನಿ ಕಂಪನಿಯು ವಿತರಿಸುವುದಕ್ಕಿಂತಲೂ ಹೆಚ್ಚಿನ ಸಂಖ್ಯೆಯ ಸಂಗೀತವನ್ನು ಇಂದಿನ ಮಕ್ಕಳು ವಿತರಿಸುವ ಕೆಲಸ ಮಾಡುತ್ತಿದ್ದಾರೆ. .
ಕಾರ್ಪೋರೆಟ್ ವಿಶ್ವವು ಅಕ್ಷಯಪಾತ್ರೆಯನ್ನು ಅದರಲ್ಲೂ ಡಿಜಿಟಲ್ ಅಕ್ಷಯಪಾತ್ರೆಯನ್ನು ಉತ್ಪಾದಿಸುವ ಬಯಕೆ ಹೊಂದಿದೆ ಎನ್ನಲಾಗುತ್ತಿದೆ. . ಆದರೆ ಅದು ನಿಜಕ್ಕೂ ಕಲಿಕೆ ಮತ್ತು ಹಂಚುವ ನೈಜ ಬಯಕೆಯನ್ನು ಹೊಂದಿದೆಯೇ? ಮಾಧ್ಯಮ, ಪತ್ರಿಕೋದ್ಯಮ, ಮತ್ತು ಸ್ಥಳೀಯ ಭಾಷೆಗಳು ಇನ್ನೂ ಏಕಸ್ವಾಮ್ಯ ಕಂಪನಿಗಳ ಸರಪಳಿಯಲ್ಲಿ ಬಂಧಿಯಾಗಿಯೇ ಉಳಿದಿವೆ. ಇದರಿಂದಾಗಿ ಲೈಸೆನ್ಸ್ ಹೆಸರಿನಲ್ಲಿ ಕಲಿಕೆಯನ್ನೇ ನಿಷೇಧಿಸಲಾಗುತ್ತಿದೆ.
ಒಂದು ಪರ್ಯಾಯ ಆಪರೇಟಿಂಗ್ ಸಿಸ್ಟಂ ಆಗಿ ಗ್ನೂ/ಲಿನಕ್ಸಿನ ಪ್ರವೇಶವು ಹಲವು ಬದಲಾವಣೆಗಳನ್ನು ತರುವುದರ ಜೊತೆಗೆ ಪ್ರೋಗ್ರ್ಯಾಮಿಂಗ್ ಮತ್ತು ಕಂಪ್ಯೂಟರ್ ಸಾಫ್ಟ್ವೇರ್ ಕ್ಷೇತ್ರದಲ್ಲಿ ಪ್ರಮುಖ ತಾತ್ವಿಕ ಪ್ರಶ್ನೆಗಳನ್ನು ಎತ್ತುತ್ತಿದೆ. ಇಂದು ಪುಸ್ತಕಗಳು ಹಕ್ಕು ಸ್ವಾಮ್ಯಕ್ಕೆ ಒಳಪಡುವುದಕ್ಕೆ ವಿರುದ್ದವಾಗಿ ಹಕ್ಕುಸ್ವಾಮ್ಯರಹಿತ ಗೊಳ್ಳುತ್ತಿವೆ. ಕ್ರಿಯೇಟಿವ್ ಕಾಮನ್ಸ್, ನಾಲೆಡ್ಜ್ ಕಾಮನ್ಸ್ ಎಂಬ ಹೊಸ ದೃಷ್ಟಿಕೋನಗಳು ವಿಶ್ವದೊಳಗೆ ಪಸರಿಸತೊಡಗಿವೆ. .
ಇದು ಭಾರತದ ಸಂದರ್ಭದಲ್ಲಿ ಸ್ವಾವಲಂಬನೆ ಕುರಿತಂತೆ ಪ್ರಮುಖ ಪ್ರಶ್ನೆಗಳನ್ನು ಎತ್ತುತ್ತಿವೆ. ಡಿಜಿಟಲ್ ವಿಶ್ವದಲ್ಲಿ, ಡಿಜಿಟಲ್ ಜ್ಞಾನದ ಕೀಲಿಕೈ ಮಾಲೀಕರಾರು. . . ಅದು ಜನಸಮುದಾಯವೇ ಅಥವಾ ಹೊಸ ಈಸ್ಟ್ ಇಂಡಿಯಾ ಕಂಪನಿಯೇ? ನಾವು ಬಳಸುವ ಕಂಪ್ಯೂಟರ್ ಗೆ ನಾವು ಮಾಲೀಕರೆ ಅಥವಾ ಮೈಕ್ರೋಸಾಫ್ಟ್ ಕಂಪನಿಯೇ ಎಂಬ ಪ್ರಶ್ನೆಗಳು ಬಳಕೆದಾರರನ್ನು ಬಡಿದೆಬ್ಬಿಸುತ್ತವೆ.
ಭಾರತದ ಜನತೆಯಲ್ಲಿ ಕೇವಲ ಶೇ. 5 ಮಂದಿ ಮಾತನಾಡುವ ಇಂಗ್ಲೀಷ್ ಭಾಷೆಯಲ್ಲಿ ಮಾತ್ರವೇ ನಾವು ಸಾಫ್ಟ್ ವೇರ್ ಗಳನ್ನು ಉತ್ಪಾದಿಸುತ್ತಿದ್ದೇವೇಕೆ?

No comments: