Monday, December 15, 2008

ಸ್ವತಂತ್ರ ತಂತ್ರಾಂಶ ಚಳುವಳಿಯ ನೇತಾರ ಎಬೆನ್ ಮಾತಿನ ಮೋಡಿಗೆ ಬೆರಗಾದ ಪರಿ


೧೩ನೇ ಡಿಸೆಂಬರ್ ಶನಿವಾರದ ಸಂಜೆ ಕ್ವೀನ್ಸ್ ರಸ್ತೆಯ IAT ಸಭಾಂಗಣದಲ್ಲಿ ನಿಜಕ್ಕೂ ಹಬ್ಬದ ವಾತಾವರಣದ ಕಳೆ ಮೂಡಿಸಿತ್ತು. ಗಂಟೆ ಐದಾಗುತ್ತಿದ್ದಂತೆ ಬೆಂಗಳೂರಿನ ಮೂಲೆ ಮೂಲೆಯಿಂದ ಕನ್ನಡದ ಬ್ಲಾಗ್ಗರುಗಳು ಅಲ್ಲಿ ನೆರೆಯತೊಡಗಿದರು. ಸ್ವತಂತ್ರ ತಂತ್ರಾಂಶದ ಕುರಿತು ಹೆಚ್ಚೆಚ್ಚು ತಿಳಿದುಕೊಳ್ಳುವ, ಸ್ವತಂತ್ರ ತಂತ್ರಾಂಶ ಚಳುವಳಿಯ ನೇತಾರರಲ್ಲೊಬ್ಬರಾದ ಎಬೆನ್ ಮೊಗ್ಲೆನ್ ರವರ ಮಾತು ಕೇಳಲು ಅವರು ಹಣಿಯಾಗಿ ಬಂದಿದ್ದರು.

ಸುಮಾರು ೮೦ ಜನ ಪ್ರೇಕ್ಷಕರಲ್ಲಿ ಶಾಲಾ ಕಾಲೇಜುಗಳಿಂದ ಬಂದಿದ್ದ ಶಿಕ್ಷಕರು ಮತ್ತು ವಿದ್ಯಾರ್ಥಿಗಳಿದ್ದರು, ಹಲವು ಸಾಫ್ಟ್ವೇರ್ ಕಂಪನಿಗಳಲ್ಲಿ ಕೆಲಸ ಮಾಡುವ ಸಾಫ್ಟ್ವೇರ್ ತಂತ್ರಜ್ಞರು, ಡಾ: ಬಿ. ಅರ್. ಅಂಬೇಡ್ಕರ್ ಸಮುದಾಯ ಗಣಕ ತರಬೇತಿ ಕೇಂದ್ರದ ಕಾರ್ಯಕರ್ತರು, ಪತ್ರಿಕಾ ಮತ್ತು ಟಿ. ವಿ. ಮಾಧ್ಯಮದ ಮಿತ್ರರು ಎಲ್ಲರೂ ನೆರೆದಿದ್ದರು. ಇಂಗ್ಲಿಷ್ ಬಾರದವರು, ಕನ್ನಡ ಬಾರದವರು ಎಲ್ಲರೂ ಅಲ್ಲಿದ್ದರು.

ಸ್ವತಂತ್ರ ತಂತ್ರಾಂಶ ಎಂದರೇನು? ಅದರ ಉಪಯೋಗಗಳು ಏನು? ಡಿಜಿಟಲ್ ತಂತ್ರಜ್ಞಾನ ಯಾರ ಒಡೆತನದಲ್ಲಿದೆ? ತಂತ್ರಾಂಶಗಳಿಗೆ ಮಾಲೀಕರು ಕಂಪನಿಗಳೋ ಅಥವಾ ಸಮುದಾಯವೋ? ಹೀಗೆ ಹತ್ತಲವು ಪ್ರಶ್ನೆ ಹೊತ್ತು ಅಲ್ಲಿಗೆ ಬಂದಿದ್ದರು.

ಮತ್ತೊಬ್ಬ ಅತಿಥಿಗಳಾದ ಸಂಪದ.ನೆಟ್ ಸ್ಥಾಪಕರಾದ ಹರಿ ಪ್ರಸಾದ್ ನಾಡಿಗ್ ಬಂದಿದ್ದರು.

ಸುಮಾರು ಒಂದೂವರೆ ಗಂಟೆ ಕಾಲ ಮಾತಾಡಿದ ಎಬೆನ್, ಅರ್ಧ ತಾಸು ಪ್ರಶ್ನೆಗಳಿಗೆ ಉತ್ತರ ನೀಡಿದರು. ಕಾರ್ಯಕ್ರಮ ಮುಗಿದ ಕೂಡಲೇ ಅರ್ಧ ತಾಸಾದರೂ ಅಲ್ಲಿಂದ ಯಾರು ಕದಲದೆ ಅಲ್ಲಲ್ಲಿ ಗುಂಪು ಗುಂಪಾಗಿ ಚರ್ಚೆಯಲ್ಲಿ ಮುಳುಗಿದ್ದು ಆಕರ್ಷಣೀಯವಾಗಿತ್ತು.

ಎಬೆನ್ ಮಾತಿನ ಮೋಡಿಗೆ ಬೆರಗಾದವರು ಖುಷಿ ಪಟ್ಟರು, ಜಾಗತಿಕ ಡಿಜಿಟಲ್ ತಂತ್ರಜ್ಞಾನ ಲೋಕದ ರಾಜಕೀಯವನ್ನು ಹಲವರು ಆಸ್ವಾದಿಸಿದರು. ಏನೂ ಅರ್ಥವಾಗದ ಕೆಲ ಮಂದಿ ಕೆಲ ಕಾಲ ಎಬೆನ್ ಕಡೆಗೆ, ಅವರ ಹಾವಭಾವ ರಸಾಸ್ವಾದಿಸಿ ಕೊನೆಗೆ ಆಕಳಿಸಿದರು.

ಕಾರ್ಯಕ್ರಮದ ಚಿತ್ರಗಳು ಮತ್ತು ಎಬೆನ್ನರ ಪೂರ್ಣ ಭಾಷಣವನ್ನು ಸದ್ಯದಲ್ಲೇ ಪ್ರಕಟಿಸಲಾಗುವುದು.

No comments: