Thursday, June 10, 2010

ಅಮೇರಿಕಾದ ಕಂಪನಿಗಳ ದುಷ್ಕೃತ್ಯ ಮತ್ತು ಪರಿಸರ ದುರಂತ




ಅಮೇರಿಕಾದ ಬಹುರಾಷ್ಟ್ರೀಯ ಕಂಪನಿಗಳು ವಿಶ್ವದಾದ್ಯಂತ ನಿಸರ್ಗ ಸಂಪತ್ತನ್ನು ಕೊಳ್ಳೆಹೊಡೆಯುತ್ತಾ ಉಂಟುಮಾಡುತ್ತಿರುವ ಪರಿಸರ ದುರ್ಘಟನೆಗಳಿಗೆ ಲೆಕ್ಕವೇ ಇಲ್ಲ. ಅದಕ್ಕೆ ಮತ್ತೊಂದು ಸೇರ್ಪಡೆ ಎಂದರೆ ಇತ್ತೀಚೆಗೆ ಅಮೇರಿಕಾದಲ್ಲಿ ಸಂಭವಿಸಿರುವ ಅತಿ ದೊಡ್ಡ ತೈಲ ದುರಂತ. ಮೆಕ್ಸಿಕೋ ಕೊಲ್ಲಿ ಪ್ರದೇಶದಲ್ಲಿ ಸಮುದ್ರ ಗರ್ಭದೊಳಗೆ ಸ್ಥಾಪಿಸಲಾಗಿದ್ದ ಪೆಟ್ರೋಲಿಯಂ ಬಾವಿಯು ಸ್ಫೋಟಗೊಂಡು ಭಾರೀ ಪರಿಸರ ನಷ್ಟ ಸಂಭವಿಸಿದೆ. ಈ ಪೆಟ್ರೋಲಿಯಂ ಬಾವಿಯು ಬ್ರಿಟಿಷ್ ಪೆಟ್ರೋಲಿಯಂ (ಬಿಪಿ) ಎಂಬ ದೈತ್ಯ ಕಂಪನಿಯ ಒಡೆತನಕ್ಕೆ ಸೇರಿದ್ದು, ಇದಕ್ಕೆ ಅವಶ್ಯವಿರುವ ಉಪಕರಣಗಳನ್ನು ಸರಬರಾಜು ಮಾಡಿದ್ದು ಹಲ್ಲಿಬರ್ಟನ್ ಎಂಬ ಮತ್ತೊಂದು ದೈತ್ಯ ಕಂಪನಿ. ಏಪ್ರಿಲ್ 20ರಂದು ಸಂಭವಿಸಿದ ಈ ದುರಂತದಲ್ಲಿ, ಎಣ್ಣೆ ಕೊಳವೆಗಳು ಸ್ಫೋಟಗೊಂಡು ಅಲ್ಲಿದ್ದ 126 ಮಂದಿ ಕೆಲಸಗಾರರಲ್ಲಿ 11 ಮಂದಿ ಸಾವನ್ನಪ್ಪಿದ್ದಾರೆ. ಸಾಗರ ಗರ್ಭದೊಳಗಿಂದ ಮೇಲ್ಮೈವರೆಗೂ ಸಂಪರ್ಕಿಸಲಾಗಿದ್ದ ಕೊಳವೆ ಮತ್ತು ಮೇಲ್ಮೈ ಮೇಲಿದ್ದ ಪ್ಲಾಟ್ಫಾರಂ ಎಲ್ಲವೂ ಸಮುದ್ರದೊಳಕ್ಕೆ ಸುಮಾರು 1.5 ಕಿ.ಮೀ ಆಳಕ್ಕೆ ಮುರಿದು ಬಿದ್ದಿವೆ. ಇದರಿಂದಾಗಿ ಪ್ರತಿ ದಿನ 8.0 ಲಕ್ಷ ಲೀಟರಿಗೂ ಹೆಚ್ಚು ಪೆಟ್ರೋಲಿಯಂ ಸಾಗರದೊಳಕ್ಕೆ ಪೆಟ್ರೋಲಿಯಂ ಬಾವಿಯಿಂದ ಚಿಮ್ಮುತ್ತಿದೆ. ಇದನ್ನು ತಡೆಗಟ್ಟುವ ಎಲ್ಲ ಕಾರ್ಯಗಳೂ ಇದುವರೆಗೂ ವಿಫಲವಾಗಿವೆ.




ಹೀಗೆ ಸಾಗರದೊಳಕ್ಕೆ ಚಿಮ್ಮುತ್ತಿರುವ ಪೆಟ್ರೋಲಿಯಮ್ನ್ನು ಮತ್ತೊಂದು ದೊಡ್ಡ ಬಾವಿ ಕೊರೆದು ಅದಕ್ಕೆ ತಿರುಗಿಸುವ ಕಾರ್ಯ ಜರುಗುತ್ತಿದ್ದು ಇದು ಪೂರ್ಣಗೊಳ್ಳಲು ಕನಿಷ್ಟ ಪಕ್ಷ 3 ತಿಂಗಳು ಬೇಕಾಗುತ್ತದೆ. ಅಷ್ಟೊಂದು ಸಾಗರದಾಳದಲ್ಲಿ ಬಾವಿ ಕೊರೆಯುವ ಕೆಲಸವನ್ನು ಕೇವಲ ರೋಬೋಟ್ ಚಾಲಿತ ಯಂತ್ರಗಳು ಮಾತ್ರವೇ ಮಾಡಬಹುದಾಗಿದೆ. ಪೆಟ್ರೋಲಿಯಂ ಸೋರಿಕೆಯಿಂದ ಮಲಿನಗೊಳ್ಳುತ್ತಿರುವ ಸಾಗರದಿಂದ ಲೂಸಿಯಾನ, ಅಲಬಾಮಾ ಮತ್ತು ಪ್ಲೋರಿಡಾದಂಥಹ ರಾಜ್ಯಗಳ ತೀರಪ್ರದೇಶಗಳು ಮತ್ತು ಜೀವ ವೈವಿಧ್ಯವು ಸಂಕಷ್ಟಕ್ಕೆ ಸಿಲುಕಿವೆ. ಈ ಭಾಗದಲ್ಲಿ ಪಕ್ಷಿ ಸಂಕುಲಗಳು, ಸಮುದ್ರ ಜೀವಿಗಳು, ಅಳಿದುಳಿದ ಜೀವಿಗಳು, ಇತ್ಯಾದಿ ಈಗಾಗಲೇ ಸಾವನ್ನಪ್ಪಿವೆ. ಸಾಗರದೊಳಕ್ಕೆ ಸೋರಿಕೆಯಾಗಿರುವ ಪೆಟ್ರೋಲಿಯಂ ತೈಲವು ಸಸ್ಯಗಳ ಮೂಲಕ ಮಾನವ ಮತ್ತು ಇತರೆ ಜೀವಿಗಳ ದೇಹವನ್ನು ಸೇರಿ ಹಲವು ಕಾಯಿಲೆಗಳಿಗೆ ಕಾರಣವಾಗಲಿರುವುದು.

ಬಿಪಿ ಕಂಪನಿಯ ಒಡೆತನದಲ್ಲಿರುವ ಪೆಟ್ರೋಲಿಯಂ ಕಂಪನಿಯು ಇಂಥಹ ದುರ್ಘಟನೆಗೀಡಾಗಿರುವುದು ಇದೇ ಮೊದಲೇನಲ್ಲ. 1989ರಲ್ಲಿ ತೈಲ ಸಂಗ್ರಹಾಗಾರವೊಂದು ಸಿಡಿದು 40.0 ಲಕ್ಷ ಲೀಟರ್ ಪೆಟ್ರೋಲಿಯಂ ಸಮುದ್ರದೊಳಕ್ಕೆ ಸೋರಿಕೆಯಾಗಿ ಸೇರಿಹೋಗಿತ್ತು. ಈ ಘಟನೆಯ ಪರಿವೀಕ್ಷಣೆಯ ನಂತರ ತಿಳಿದುಬಂದದ್ದೇನೆಂದರೆ ಈ ಕಂಪನಿಯು ದುರ್ಘಟನೆಯಾದ ಸಂದರ್ಭದಲ್ಲಿ ಸೋರಿಕೆಯಾಗುವ ಪೆಟ್ರೋಲಿಯಂನ್ನು ಸಂಗ್ರಹಿಸಲು ದೊಡ್ಡ ರಬ್ಬರ್ ಬಿರಡೆಗಳನ್ನಾಗಲಿ, ಅಥವಾ ಅವಶ್ಯ ತಂಡಗಳನ್ನಾಗಲೀ ಸಿದ್ದಪಡಿಸಿರಲಿಲ್ಲ ಎಂಬುದು. ಈಗಾಗಲೇ ಸುಮಾರು 9.0 ಲಕ್ಷ ಲೀಟರ್ ಪೆಟ್ರೋಲಿಯಂ ಸಮುದ್ರದೊಳಕ್ಕೆ ಸೇರಿಹೋಗಿದೆ. ಈ ದುರ್ಘಟನೆಯಲ್ಲಿ ಸಿಲುಕಿ ಬದುಕುಳಿದವರು ಒಬ್ಬೊಬ್ಬರಾಗಿ ಉಸಿರು ಹೊರಡಿಸುತ್ತಿದ್ದು ಕಂಪನಿಯ ವ್ಯವಸ್ಥಿತ ಲೋಪಗಳು (ಅಂದರೆ ಉದ್ದೇಶಪೂರ್ವಕವಾಗಿ ಹಣ ಉಳಿಸುವ ಸಲುವಾಗಿ ಲೋಪಗಳನ್ನು ಸರಿಪಡಿಸದೆ ಹಾಗೆಯೇ ಉಳಿಸಿಕೊಂಡಿರುವುದು) ಹೊರಬೀಳುತ್ತಿವೆ. ದುರ್ಘಟನೆ ನಡೆದಾಕ್ಷಣವೇ ಕಂಪನಿಯು ತಮಗೇ ಗೊತ್ತಿಲ್ಲದ ಹಲವು ಹೇಳಿಕೆಗಳಿಗೆ ಬಲವಂತವಾಗಿ ತಮ್ಮಿಂದ ಸಹಿ ಮಾಡಿಸಿಕೊಳ್ಳುತ್ತಿದೆಯೆಂದು ಅವರು ದೂರುತ್ತಿದ್ದಾರೆ.
ಅಮೇರಿಕಾ ಸರ್ಕಾರದಲ್ಲಿ ಉನ್ನತ ಹುದ್ದೆಗಳಲ್ಲಿ ಕೆಲಸ ಮಾಡುವ ಗಣ್ಯಾತಿಗಣ್ಯರಲ್ಲಿ ಹಲವರು ಈ ಹಿಂದೆ ಬಿಪಿ ಕಂಪನಿಯಂಥದೇ ಅತಿ ದೊಡ್ಡ ದೈತ್ಯ ಕಂಪನಿಗಳಲ್ಲಿ ಕೆಲಸ ಮಾಡಿಬಂದವರೇ ಆಗಿರುತ್ತಾರೆ. ಸರ್ಕಾರದ ಹುದ್ದೆಗೆ ಬಂದ ನಂತರ ಅಂಥಹ ಕಂಪನಿಗಳಿಗೆ ಅವಶ್ಯವಿರುವ ಕಂಪನಿ ಪರವಾದ ಕಾಯಿದೆ ಮತ್ತು ನಿಯಮಾವಳಿಗಳನ್ನು ರೂಪಿಸುವುದು ಸಾಮಾನ್ಯ. ಇದಕ್ಕೆ ಇತ್ತೀಚಿನ ಉದಾಹರಣೆಯೆಂದರೆ, ಅಮೇರಿಕಾದ ಉಪಾಧ್ಯಕ್ಷನಾಗಿದ್ದ ಡಿಕ್ ಚೆನಿ ಈ ಮೊದಲು ಹಲ್ಲಿಬರ್ಟನ್ ಕಂಪನಿಯಲ್ಲಿ ಹಿರಿಯ ಹುದ್ದೆಯಲ್ಲಿದ್ದವನು. ಅಮೇರಿಕಾದ ಉಪಾಧ್ಯಕ್ಷನಾಗಿದ್ದಾಗ ತೈಲ ಕಂಪನಿಗಳು ಅತಿ ದುಬಾರಿ ಬೆಲೆಯ ಸುರಕ್ಷತಾ ಉಪಕರಣಗಳನ್ನು ಬಳಸುವ ಅಗತ್ಯವಿಲ್ಲವೆಂದು ವಿನಾಯಿತಿ ನೀಡಿದ್ದ. ಇಂಥಹ ಅವಘಡಗಳು ಹೆಚ್ಚಾಗಿ ಅಮೇರಿಕಾದಲ್ಲಿ ಸಂಭವಿಸುತ್ತಿರುವುದು ತಮ್ಮನ್ನು ಕಂಪನಿಗಳಿಗೆ ಮಾರಿಕೊಂಡಿರುವ ರಿಪಬ್ಲಿಕನ್ ಪಕ್ಷ ಆಳುತ್ತಿರುವ ರಾಜ್ಯಗಳಲ್ಲಿ.




ಈ ದುರ್ಘಟನೆಯಿಂದ ಕೋಪಗೊಂಡಿರುವ ಅಮೇರಿಕಾದ ಪ್ರಜೆಗಳು ತೈಲ ಕಂಪನಿಗಳ ವಿರುದ್ದ ಕೂಗು ಹಾಕುತ್ತಿದ್ದು, ಸರ್ಕಾರ ಕಂಪನಿಯ ವಿರುದ್ದ ಕ್ರಮಕೈಗೊಳ್ಳಬೇಕೆಂದು ಒತ್ತಾಯಿಸುತ್ತಿದ್ದಾರೆ. ತೈಲ ಕಂಪನಿಗಳಿಗೆ ನೀಡಿದ್ದ ಇಂಥಹ ದೋಷಪೂರಿತ ವಿನಾಯಿತಿಗಳನ್ನು ತೆಗೆದುಹಾಕಲು ಒಬಾಮ ಸರ್ಕಾರ ಕ್ರಮ ಕೈಗೊಳ್ಳುತ್ತಿದೆ. ಇಂಥಹ ದುರ್ಘಟನೆಗಳು ಸಂಭವಿಸಿದಾಗ ತೈಲ ಕಂಪನಿಗಳು ತೆರಬೇಕಾದ ದಂಡವನ್ನು ಪ್ರಸ್ತುತ ರೂ. 338 ಕೋಟಿಯಿಂದ ರೂ. 45,000 ಕೋಟಿಗೆ ಏರಿಸಲು ಅಮೇರಿಕಾದ ಪಾರ್ಲಿಮೆಂಟ್ ಕ್ರಮಕೈಗೊಂಡಿದೆ. ಆದರೆ, ನಮ್ಮ ದೇಶದಲ್ಲಿ ಕಾಂಗ್ರೆಸ್ ನೇತೃತ್ವದ ಯುಪಿಎ-2 ಸರ್ಕಾರ ಅಮೇರಿಕಾದ ಬಹುರಾಷ್ಟ್ರೀಯ ಕಂಪನಿಗಳ ಹಿತಾಸಕ್ತಿಗಾಗಿ ಪರಮಾಣು ಸ್ಥಾವರ ಅಳವಡಿಸುವ ಕಂಪನಿಗಳು ಅವಘಡ ಸಂಭವಿಸಿದಲ್ಲಿ ಕೇವಲ ರೂ. 2000ಕೋಟಿ ಯಷ್ಟನ್ನು ನೀಡಿ ಪರಾರಿಯಾಗುವುದಕ್ಕೆ ಅವಕಾಶ ನೀಡುವ ಮಸೂದೆಯನ್ನು ಲೋಕಸಭೆಯಲ್ಲಿ ಅಂಗೀಕರಿಸಿದೆ.
***********

No comments: