Friday, January 2, 2009

ಎಬೆನ್ ಮೊಗ್ಲೆನ್ ಭಾಷಣದ ಆಯ್ದ ತುಣುಕುಗಳು:


ಮೊದಲಿಗೆ ಫ್ರೀ ಸಾಫ್ಟ್ವೇರ್ ಎಂದರೆ ಏನೆಂದು ಶುರು ಮಾಡೋಣ. ಫ್ರೀ ಸಾಫ್ಟ್ವೇರ್ ಎಂದರೆ, ನಕಲು ಮಾಡುವ, ಮೂಲ ತಂತ್ರಾಂಶದೊಂದಿಗೆ ವಿತರಿಸುವ, ಮಾರ್ಪಡಿಸುವ ಮತ್ತು ಹೊಸ ಕ್ಷೇತ್ರಕ್ಕೆ ಅನ್ವಯಿಸುವ ಎಲ್ಲ ಸ್ವಾತಂತ್ರ್ಯಗಳನ್ನು ಅದು ಬಳಕೆದಾರರಿಗೆ ನೀಡುತ್ತದೆ. ಆದರೆ, ಮಾಲೀಕತ್ವದ ಸಾಫ್ಟ್ ವೇರ್ ಮೂಲ ತಂತ್ರಾಂಶವನ್ನು (Proprietary software) ಬಳಕೆದಾರರಿಗೆ ನಿರಾಕರಿಸುವ ಮೂಲಕ ಎಲ್ಲ ಸ್ವಾತಂತ್ರ್ಯಗಳನ್ನು ಹತ್ತಿಕ್ಕುತ್ತವೆ.
ಒಂದೇ ಒಂದು ಮಾರ್ಗ ಮುಖಿ ಯಾಗಿದ್ದ ಸಾಂಪ್ರದಾಯಿಕ ಮಾಧ್ಯಮ ದ ಪ್ರಾಮುಖ್ಯತೆಯನ್ನು ಸ್ವತಂತ್ರ ತಂತ್ರಾಂಶ ಮತ್ತು ಒಡಮೂಡುತ್ತಿರುವ ಹೊಸ ಮಾಧ್ಯಮಗಳು ಕಿರಿದುಗೊಳಿಸುತ್ತಿವೆ. ಜನರು ಒಂದಾಗಿ ಜ್ಞಾನವನ್ನು ಹಂಚಿಕೊಳಲು ವಿಕಿಪೀಡಿಯಾಗಳು ಅನುವುಮಾಡಿಕೊಡುತ್ತಿವೆ ಹಾಗೂ ಸಮುದಾಯಗಳ ನಡುವಿನ ಸಂವಹನ ಅಡೆತಡೆಗಳನ್ನು ನಿವಾರಿಸಿ ಚರ್ಚೆ ಮತ್ತು ನೇರ ಸಂವಹನವನ್ನು ಸುಲಭ ಸಾಧ್ಯವಾಗಿಸಿವೆ. ಇಂದು ವಿಕಿಪೀಡಿಯಾ ಗಳು ವಿದ್ಯಾರ್ಥಿಗಳಿಗೆ ಜ್ಞಾನದ ಆಕರಗಳಾಗಿ ಮಾರ್ಪಟ್ಟಿದ್ದು ವಿದ್ಯಾರ್ಥಿಗಳು ಮತ್ತು ಬೋಧಕರ ನಡುವಿನ ಕಲಿ - ಕಲಿಸುವಿಕೆಯನ್ನು ಹೆಚ್ಚಿಸುತ್ತಿದೆ. ಇದರಿಂದಾಗಿ ಇದು ಸಾಂಪ್ರದಾಯಿಕ ಪರೀಕ್ಷಾ ವ್ಯವಸ್ಥೆಗೆ ಪರ್ಯಾಯವಾಗಿ ಮೂಡಿಬರುತ್ತಿದೆ. ಇದಕ್ಕೊಂದು ಜ್ವಲಂತ ಉದಾಹರಣೆಯೆಂದರೆ; ಅಮೇರಿಕಾದ ಕೊಲಂಬಿಯಾ ವಿಶ್ವವಿದ್ಯಾನಿಲಯದ ವಿದ್ಯಾರ್ಥಿಗಳೊಂದಿಗೆ ತಾವಿದ್ದಲ್ಲಿಂದಲೇ ಯೂರೋಪಿನ ಸಂಶೋಧಕರು ಜೊತೆಗೂಡಿ ಸಂಶೋಧನೆ ನಡೆಸಲು ವಿಕಿಪೀಡಿಯಾ ಸಹಾಯ ಮಾಡಿತು.
ಸಾಂಪ್ರದಾಯಿಕ ಮಾಧ್ಯಮ ಮಾದರಿಯಲ್ಲಿ ಲೇಖನವನ್ನು ತಿದ್ದುಪಡಿ ಮಾಡಲು ಸಂಪಾದಕರಿಗೆ ಅತಿಸ್ವಾತಂತ್ರ್ಯವಿದೆ. ಆದರೆ ವಿಕಿಪೀಡಿಯಾ ಮಾದರಿಯಲ್ಲಿ ಲೇಖನ ವನ್ನು ಜನರೇ ಬರೆದು ಜ್ಞಾನವನ್ನು ಹಂಚಿಕೊಳ್ಳುವುದರಿಂದ ಅದನ್ನು ಇನ್ನಷ್ಟು ಅಭಿವೃದ್ಧಿ ಮಾಡಲು ಸಾಧ್ಯವಾಗುತ್ತದೆ. ಅಲ್ಲದೆ, ವಿಕಿಪೀಡಿಯಾ ಮಾದರಿಯಲ್ಲಿ, ಲೇಖನಗಳ ನಿಖರತೆಯನ್ನು ಅಳೆಯಲು ಜನತೆಯು ಸದಾ ಕಾವಲುನಾಯಿಯಂತೆ ಸಾಮೂಹಿಕವಾಗಿ ಕೆಲಸ ಮಾಡುತ್ತವೆ. ಹಾಗೆಯೇ ಬ್ಲಾಗ್ ಗಳು ಬಳಕೆದಾರರಿಗೆ ಒಂದು ಸುಲಭಸಾಧ್ಯ ವೇದಿಕೆ ಒದಗಿಸುತ್ತವೆ ಮತ್ತು ಅನಿಸಿಕೆ ವ್ಯಕ್ತಪಡಿಸಲು ಪೂರ್ಣ ಸ್ವಾತಂತ್ರ್ಯ ನೀಡುತ್ತವೆ. ವಿಶಾಲ ಓದು ಮತ್ತು ಸಂಶೋಧನೆಗಳ ಮೂಲಕ ಬ್ಲಾಗರುಗಳು ತಮ್ಮ ಬ್ಲಾಗುಗಳ ಮೂಲಕ ಜ್ಞಾನವನ್ನು ವ್ಯಕ್ತಪಡಿಸಿ ಹಂಚಿಕೊಳ್ಳುವುದರಿಂದ ಸಮಾಜವು ಮಹತ್ತರ ರೀತಿಯಲ್ಲಿ ಲಾಭಪಡೆಯುತ್ತದೆ.
ಡಬ್ಲ್ಯೂ ೩ ಒಕ್ಕೂಟ ಎಂಬ ಸಮೂಹವು ಆಡಿಯೋ ಮತ್ತು ವೀಡಿಯೋ ಕಡತಗಳನ್ನು ಹೆಚ್ ಟಿ ಎಮ್ ಎಲ್ ೫.೦ ರಲ್ಲಿ ಅಳವಡಿಸಲು ಕೆಲಸ ಮಾಡುತ್ತಿದ್ದು ಇದರಿಂದ ಯಾವುದೇ ಪ್ಲಗ್ ಇನ್ ಗಳನ್ನು ಡೌನ್ ಲೋಡ್ ಮಾಡಿಕೊಳ್ಳದೆ ಅವುಗಳನ್ನು ಬ್ರೌಸರ್ ಗಳಲ್ಲಿ ಬಳಸಬಹುದು. ಹಾಗೆಯೇ ಹೆಚ್ ಟಿ ಎಮ್ ಎಲ್ ನಲ್ಲಿ ಮಲ್ಟಿಮೀಡಿಯಾ ಫೈಲ್ ಗಳನ್ನು ಬಳಸಬಹುದು. ಆದರೆ, ಇಂಥಹದಕ್ಕೆ ಪ್ರಧಾನವಾಗಿ ತಡೆಗೋಡೆ ಎಂದರೆ ಬಳಕೆ ಮಾಡಲಾಗದಿರುವುದು ಅಥವಾ ತಂತ್ರಜ್ಞಾನ ಅಭಿವೃದ್ದಿಯಾಗದಿರುವುದು ಕಾರಣವಲ್ಲ, ಆದರೆ, ಪೇಟೆಂಟ್ ಗಳು ಮತ್ತು ಕಾಪಿರೈಟ್ ಗಳು ಹೊಸ ತಂತ್ರಜ್ಣಾನಗಳನ್ನು ಜನಸಾಮಾನ್ಯರು ಬಳಸಲು ತಡೆ ಒಡ್ದುತ್ತಿರುವುದು ಕಾರಣ.
ಒಂದು ಪ್ರಧಾನ ಅಡೆತಡೆಯೆಂದರೆ ಮಲ್ಟಿಮೀಡಿಯಾ ಕೊಡೆಕ್ ಗಳನ್ನು ಮಾಲೀಕತ್ವ ಆಧಾರದ ಮೇಲೆ ಬಳಸುತ್ತಿರುವುದಾಗಿದೆ. ಕೊಡೆಕ್ ಗಳು ಸ್ವತಂತ್ರವಾಗಿ ಲಭ್ಯವಾಗುವಂತಾದಲ್ಲಿ ವೆಬ್ ಮೂಲಕ ವೀಡಿಯೋ ಪ್ರಸಾರವಾಗುವ ವಿಧಾನವೇ ಕ್ರಾಂತಿಕಾರಕವಾಗಿ ಬದಲಾಗುವುದು. ಆಗ ನಮಗೆ ದೂರದರ್ಶನಗಳೇ ಬೇಕಿರುವುದಿಲ್ಲ. ಏಕೆಂದರೆ, ಯಾವುದೇ ಪ್ಲಗ್ ಇನ್ ಗಳಿಲ್ಲದೆ ಎಲ್ಲರೂ ಮಲ್ಟಿಮೀಡಿಯಾ ಮೂಲಕ ತಮ್ಮದನ್ನು ಪ್ರಕಟಿಸಿಕೊಳ್ಳುತ್ತಾರೆ ಮತ್ತು ಕೇಳುತ್ತಾರೆ. ಸ್ವತಂತ್ರ ತಂತ್ರಾಂಶ ಮತ್ತು ಹೊಸ ಮಾಧ್ಯಮವು ಕೇವಲ ನೋಡುಗರಾಗಿದ್ದ ಅಥವಾ ಬಳಕೆದಾರರಾಗಿದ್ದ ಪ್ರತಿಯೊಬ್ಬರನ್ನು ಡ್ರೈವರ್ ಜಾಗದಲ್ಲಿ ಕೂರಿಸುತ್ತದೆ.
ಲಾಭ ಗಳಿಸುವುದು ಮಾತ್ರವೇ ಮಾನವನ ಸಹಜ ಗುಣವಲ್ಲ, ಮಾನವ ಸಮುದಾಯವು ಒಂದು ಸಮಾಜವಾಗಿ ಮೂಡಿಬರಲು ಹಂಚಿಕೊಳ್ಳುವುದು ಮತ್ತು ಸಹಕರಿಸುವುದು ಕೂಡ ಅವನ ಗುಣಗಳಾಗಿವೆ. ಸಹಾಯ ಮಾಡುವ ಗುಣವು ಮಾನವನ ಮೂಲಗುಣಗಲ್ಲೊಂದು. ದೈನಂದಿನ ಜೀವನದ ಪ್ರತಿದಿನ, ಯಾವುದೇ ನಿರೀಕ್ಷೆಯಿಲ್ಲದೆ ನಾವು ಯಾರಿಗಾದರೂ ನೆರವು ನೀಡುತ್ತಿದ್ದೇವೆ. ಸ್ವತಂತ್ರ ತಂತ್ರಾಂಶವು ಉತ್ತಮ ಸಮಾಜ ನಿರ್ಮಾಣಕ್ಕಾಗಿ ನಮಗೆ ಸಹಕಾರಿಯಾಗುತ್ತ್ತದೆ.
ಸ್ವತಂತ್ರ ತಂತ್ರಾಂಶದ ಶಕ್ತಿ: ಭಾರತದಂಥಹ ಅಭಿವೃದ್ಧಿಶೀಲ ರಾಷ್ಟ್ರಗಳಲ್ಲಿ, ತಲಾದಾಯವು ಅತಿ ಕಮ್ಮಿ ಇದೆ. ಆಪರೇಟಿಂಗ್ ಸಿಸ್ಟಮ್ ಮತ್ತು ಬಳಕೆ ಮಾಡಬೇಕಾದ ಸಾಫ್ಟ್ ವೇರ್ ಗಳಿಗೆ ಅಷ್ಟು ವೆಚ್ಚ ತಗುಲಿದರೆ, ಭಾರತದ ಬಹುಸಂಖ್ಯಾತ ಜನರಿಗೆ ಈ ತಂತ್ರಜ್ಞಾನವನ್ನು ಪಡೆದುಕೊಳ್ಳಲು ಅಸಾಧ್ಯವಾಗುವುದು. ತಲಾದಾಯವು ಸುಮಾರು 30 ಸಾವಿರ ಡಾಲರ್ ಗಳಿರುವ ಅಮೇರಿಕಾದಂಥಹ ರಾಷ್ಟ್ರಗಳಲ್ಲಿ ಅದನ್ನು ಪಡೆದುಕೊಳ್ಳಲು ಸಾಧ್ಯವಿರುವುದಷ್ಟೆ. ಆದ್ದರಿಂದ ಭಾರತಕ್ಕೆ ಬೇಕಾಗಿರುವುದು ಅತಿ ಕಡಿಮೆ ಬೆಳೆಯ ಅಥವಾ ಉಚಿತವಾಗಿ ದೊರೆಯುವ ಸಾಫ್ಟ್ವೇರ್ ಹೊರತು ಡಾಲರ್ ಗಳಲ್ಲಿರುವುದಲ್ಲ. ಗ್ನೂ/ಲಿನಕ್ಸ್ ಉಚಿತವಾಗಿ ಲಭ್ಯವಿರುವುದರಿಂದ ಆ ಅವಶ್ಯಕತೆಯನ್ನು ಪೂರೈಸುತ್ತದೆ. ಅಲ್ಲದೆ ಭಾರತದ ಜನತೆಯಲ್ಲಿ ಕೇವಲ ಶೇ. 5 ಮಂದಿ ಮಾತನಾಡುವ ಇಂಗ್ಲೀಷ್ ಭಾಷೆಯಲ್ಲಿ ಮಾತ್ರವೇ ಸಾಫ್ಟ್ ವೇರ್ ಗಳನ್ನು ಉತ್ಪಾದಿಸುತ್ತಿದ್ದು ಅದಕ್ಕೆ ಉತ್ತಮ ಪರ್ಯಾಯವೆಂದರೆ ಗ್ನೂ/ಲಿನಕ್ಸ್ ನಿಂದ ಪ್ರಾದೇಶಿಕ ಭಾಷೆಯಲ್ಲಿ ಸಾಫ್ಟ್ ವೇರ್ ಗಳನ್ನು ಉತ್ಪಾದಿಸುವುದು ಮಾತ್ರ.

No comments: