Wednesday, June 22, 2011

ಸೋವಿಯತ್ ಒಕ್ಕೂಟದ ಐತಿಹಾಸಿಕ ಗಗನಯಾನ: ಯೂರಿ ಗಗಾರಿನ್ ಗಗನಯಾನಕ್ಕೆ 50 ವರ್ಷಗಳ ಸಂಭ್ರಮಾಚರಣೆ




1961ರ ಏಪ್ರಿಲ್ 12 ರಂದು ಇಡೀ ವಿಶ್ವದ ಜನತೆಯನ್ನು ದಿಘ್ಮೂಡರನ್ನಾಗಿಸಿದಂತ ಘಟನೆಗೆ ಮನುಕುಲ ಸಾಕ್ಷಿಯಾಯಿತು. ಮರಗೆಲಸಗಾರನ ಮಗನಾಗಿದ್ದ ಗಗನಯಾನಿ ಯೂರಿ ಗಗಾರಿನ್ ರನ್ನು ಹೊತ್ತ ವೊಸ್ತಕ್ ಎಂಬ ಗಗನನೌಕೆಯು ಕಜಕ್ಸ್ತಾನದ ನಿಲ್ದಾಣದಿಂದ ರಾಕೆಟ್ ವೇಗದಲ್ಲಿ ಗಗನಕ್ಕೆ ಹಾರಿ ಭೂಮಿಯ ಸುತ್ತ 79 ನಿಮಿಷಗಳ ಕಾಲ ಪ್ರದಕ್ಷಿಣೆ ಹಾಕಿ ವಾಪಸಾಯಿತು. ಆದರೆ ವಾಪಸಾಗುವಾಗ ಕೆಲವು ತಾಂತ್ರಿಕ ತೊಂದರೆಗಳಿಂದ ಎಲ್ಲರೂ ಆತಂಕಗೊಂಡ ಕ್ಷಣವದು. ಅಂತಿಮವಾಗಿ ಗಗಾರಿನ್ ವೋಲ್ಗಾ ನದಿಯ ಬಳಿ ಪ್ಯಾರಾಚೂಟ್ನಿಂದ ಜಿಗಿದು ಬಂದರು. ಅಷ್ಟರಲ್ಲಿಯೇ ಯೂರಿ ಗಗಾರಿನ್ ಸೋವಿಯತ್ ಒಕ್ಕೂಟದ ರಾಷ್ಟ್ರೀಯ ಹೀರೋ ಮಾತ್ರ ಆಗಿದ್ದಲ್ಲದೇ ಇಡೀ ವಿಶ್ವದ ಜನತೆಯ ನಾಲಗೆಯ ಮೇಲೆ ಅವರ ಹೆಸರು ಕುಣಿದಾಡಿತು.



ಮನುಕುಲದ ಇತಿಹಾಸದಲ್ಲಿಯೇ ಮೊದಲ ಬಾರಿಗೆ ಮನುಷ್ಯ ಗಗನಯಾನ ಮಾಡಿದ್ದು ವಿಶ್ವದ ತುಂಬೆಲ್ಲ ರೋಮಾಂಚನವುಂಟು ಮಾಡಿದರೆ ಸಮಾಜವಾದಿ ಸೋವಿಯತ್ ಒಕ್ಕೂಟದ ಕಡುವೈರಿಯಾಗಿದ್ದ ಸಾಮ್ರಾಜ್ಯಶಾಹಿ ಅಮೇರಿಕಾಗೆ ಒಳಗೊಳಗೆ ನಡುಕ ಉಂಟಾಗಿತ್ತು. ಏಕೆಂದರೆ ಗಗನಯಾನ ತಂತ್ರಜ್ಞಾನದಲ್ಲಿ ಈ ಘಟನೆ ಸೋವಿಯತ್ ರಷ್ಯಾ ಒಕ್ಕೂಟದ ಮೇಲುಗೈ ಹೊಂದಿರುವುದಕ್ಕೆ ಸಾಕ್ಷಿಯಾಗಿತ್ತು. ಇದಾದ ನಾಲ್ಕು ತಿಂಗಳಿಗೆ ಮತ್ತೆ ಘೆರ್ಮನ್ ಟೈಟವ್ ಎಂಬ ಗಗನಯಾನಿಯನ್ನು ಹೊತ್ತು ಮತ್ತೊಂದು ಗಗನನೌಕೆ ಭೂಮಿಯನ್ನು 25 ಘಂಟೆ ಕಾಲ 17 ಬಾರಿ ಪ್ರದಕ್ಷಿಣೆ ಹಾಕಿತು. ಸೋವಿಯತ್ ಒಕ್ಕೂಟದ ರಾಕೆಟ್ ತಂತ್ರಜ್ಞಾನದ ಜನಕ ಎಂದೇ ಹೆಸರಾಗಿರುವ ಸೇಗರ್ ಕೊರೊಲ್ಯೊವ್ ರವರು ಈ ತಂತ್ರಜ್ಞಾನದ ಅಭಿವೃದ್ಧಿಗೆ ನೀಡಿರುವ ಕೊಡುಗೆ ಅಪಾರ. ಈ ಘಟನೆ 1917ರ ಅಕ್ಟೋಬರ್ ಕ್ರಾಂತಿಯಂತೆಯೇ ವಿಜ್ಞಾನ ಮತ್ತು ತಂತ್ರಜ್ಞಾನ ಕ್ಷೇತ್ರದಲ್ಲಿ ಸೋವಿಯತ್ ಒಕ್ಕೂಟ ಹೊಂದಿರುವ ಕ್ರಾಂತಿಕಾರಿ ಬೆಳವಣಿಗೆಗೆ ಸಾಕ್ಷಿಯಾಗಿದೆ.


ಇದರಿಂದ ವಿಚಲಿತಗೊಂಡ ಅಮೇರಿಕಾ 1961ರ ಮೇ ತಿಂಗಳಲ್ಲಿ ಒಂದು ಗಗನನೌಕೆಯನ್ನು ಹಾರಿಬಿಟ್ಟಿತಾದರೂ ಅದು ಕೇವಲ 15 ನಿಮಿಷ ಮಾತ್ರವೇ ಹಾರಾಡಿತು. 1962ರಲ್ಲಿಯೂ ಮತ್ತೊಂದು ಅಮೇರಿಕಾದ ಗಗನನೌಕೆ ಕೇವಲ 3 ಪ್ರದಕ್ಷಿಣೆ ಹಾಕಿ ಹಿಂದಿರುಗಿತು. ಯೂರಿಗಗಾರಿನ್ ಗಗನಯಾನ ಮಾಡಿದ್ದು ಅಮೇರಿಕಾದ ಮೇಲೆ ಅದೆಷ್ಟು ಒತ್ತಡ ಉಂಟು ಮಾಡಿತೆಂದರೆ, ಗಗಾರಿನ್ ಯಾನದ ಒಂದು ತಿಂಗಳ ನಂತರ ಅಮೇರಿಕಾದ ಅಧ್ಯಕ್ಷ ಜಾನ್ ಎಫ್ ಕೆನಡಿಯವರು ಒಂದು ಅಧಿಕೃತ ಘೋಷಣೆ ಹೊರಡಿಸಿ ಆ ದಶಕದೊಳಗೆ ಅಮೇರಿಕಾ ಚಂದ್ರನ ಬಳಿಗೆ ಮಾನವನನ್ನು ಒತ್ತೊಯ್ಯಲಿದೆ ಎಂದರು. ಕೊನೆಗೆ ಅದು ನನಸಾಗಿದ್ದು 1969ರಲ್ಲಿ ನೀಲ್ ಆರ್ಮ್ ಸ್ಟ್ರಾಂಗ್ ಮತ್ತು ಎಡ್ವಿನ್ ಚಂದ್ರ ಗ್ರಹದಲ್ಲಿ ಪಾದಾರ್ಪಣೆ ಮಾಡಿದಾಗಲೇ.

ಅಮೇರಿಕಾ ಕೊಲಂಬಿಯಾ, ಛಾಲೆಂಜರ್, ಡಿಸ್ಕವರಿ, ಅಟ್ಲಾಂಟಿಸ್, ಮತ್ತು ಎಂಡೇವರ್ ಎಂಬ ಗಗನನೌಕೆಗಳನ್ನು ಒಂದಾದ ನಂತರ ಮತ್ತೊಂದರಂತೆ ಕಳುಹಿಸಿತು. ಸೋವಿಯತ್ ಒಕ್ಕೂಟ ಛಿದ್ರಗೊಂಡ ನಂತರ ಅಮೇರಿಕಾ ಗಗನಯಾನ ತಂತ್ರಜ್ಞಾನದಲ್ಲಿ ಮೇಲುಗೈ ಸಾಧಿಸಿತು. ಇತ್ತೀಚೆಗೆ 16 ರಾಷ್ಟ್ರಗಳು ಒಗ್ಗೂಡಿ ಗಗನದಲ್ಲಿ ನಿರ್ಮಿಸಿರುವ ಅಂತರಾಷ್ಟ್ರೀಯ ಗಗನ ನಿಲ್ದಾಣ, ಅಮೇರಿಕಾ ಮತ್ತು ಯೂರೋಪಿಯನ್ ಒಕ್ಕೂಟದ ಹಬಲ್ ಗಗನ ದೂರದರ್ಶಕ ಮತ್ತು ಚೀನಾ ಮತ್ತು ಭಾರತ ದೇಶಗಳು ಚಂದ್ರಯಾನದಂಥಹ ಯೋಜನೆಗಳನ್ನು ಹಮ್ಮಿಕೊಂಡಿರುವುದು ಗಗನ ಶೋಧನೆಯ ಹೆಜ್ಜೆಗಳನ್ನು ತೀವ್ರಗೊಳಿಸಿವೆ.


ಸೋವಿಯತ್ ಒಕ್ಕೂಟದ ಪತನದ ನಂತರ ಹಿಂದಿನ ಅವಧಿಯಲ್ಲಿ ಆ ದೇಶ ಅಭಿವೃದ್ಧಿ ಪಡಿಸಿದ್ದ ಇಂತಹ ಹಲವಾರು ಅತ್ಯದ್ಭುತ ತಂತ್ರಜ್ಞಾನಗಳನ್ನು ಜೋಪಾನದಿಂದ ಕಾಪಾಡಿ ಮತ್ತಷ್ಟು ಅಭಿವೃದ್ಧಿಪಡಿಸಿ ಮುಂದೊಯ್ಯಲಾಗದೇ ಅಲ್ಲಿನ ಸಕರ್ಾರಗಳು ಅವನ್ನು ಹಾಳು ಮಾಡಿವೆಯೆಂದು ಹಲವಾರು ವಿಜ್ಞಾನಿಗಳು ಇಂದಿಗೂ ದೂರುತ್ತಾರೆ.

ಯೂರಿ ಗಗಾರಿನ್ ಆಕಾಶಯಾನ ಮಾಡಿದ ದಿನವೆಂದು ಪ್ರತಿ ವರ್ಷ ಏಪ್ರಿಲ್ 12ರಂದು ರಷ್ಯಾದಲ್ಲಿ "ಕಾಸ್ಮೋನಾಟ್ ದಿನ" ಎಂದು ಆಚರಿಸುತ್ತಿದ್ದರು. ಈ ವರ್ಷದಿಂದ ವಿಶ್ವಸಂಸ್ಥೆಯು ಈ ದಿನವನ್ನು "ಅಂತರಾಷ್ಟ್ರೀಯ ಮಾನವ ಆಕಾಶಯಾನದ ದಿನ" ಎಂದು ಘೋಷಿಸಿದೆ.
**********

No comments: