Thursday, June 23, 2011

ಮತ್ತೊಂದು ವಿಶ್ವ ಪರಿಸರ ದಿನಾಚರಣೆ: ಹೆಚ್ಚಳವಾಗಲಿರುವ ಕರ್ನಾಟಕದ ತಾಪಮಾನರಾಜಸ್ತಾನದ ನಂತರ ವೈಪರೀತ್ಯ ಭೀತಿ ಕಾಣುವ ಕರ್ನಾಟಕ :
ವಿಶ್ವದೆಲ್ಲೆಡೆ ಕಾರ್ಪೋರೇಟ್ ಕಂಪನಿಗಳಾದಿಯಾಗಿ ಎಲ್ಲ ಸರ್ಕಾರಗಳು ಮತ್ತು ಸರ್ಕಾರೇತರ ಸಂಸ್ಥೆಗಳು ಜೂನ್ 6ರಂದು ಮತ್ತೊಂದು ವಿಶ್ವ ಪರಿಸರ ದಿನಾಚರಣೆ ಆಚರಿಸಲು ಸಿದ್ದವಾಗುತ್ತಿವೆ. ಇದೇ ಸಮಯದಲ್ಲಿ ಕರ್ನಾಟಕ ಸರ್ಕಾರ ರಚಿಸಿದ್ದ ಬೆಂಗಳೂರು ಹವಾಮಾನ ಬದಲಾವಣೆ ಇನಿಷಿಯೇಟಿವ್ - ಕರ್ನಾಟಕ ಎಂಬ ಸಮಿತಿಯು ಸಲ್ಲಿಸಿರುವ ವರದಿ ನಮ್ಮ ರಾಜ್ಯದ ಮೇಲೆ ಉಂಟಾಗುವ ಹವಾಮಾನ್ ವೈಪರೀತ್ಯಗಳ ಅಪಾಯಗಳ ಕುರಿತು ಕರೆಗಂಟೆ ಒತ್ತಿದೆ ಎನ್ನಬಹುದು. ಪರಿಸರ ಸಂರಕ್ಷಣೆ ಮಾಡದೇ ಹೀಗೆ ಸುಮ್ಮನಿದ್ದಲ್ಲಿ 2030 ರ ವೇಳೆಗೆ ನಮ್ಮ ರಾಜ್ಯದ ಶೇ. 38ರಷ್ಟು ಅರಣ್ಯ ನಾಶವಾಗುತ್ತದೆಂದು ಮತ್ತು ರಾಜ್ಯದ ಬಹುತೇಕ ಪ್ರದೇಶಗಳ ಉಷ್ಣಾಂಶ 1.8 ಡಿಗ್ರಿಯಿಂದ 2.2 ಡಿಗ್ರಿವರೆಗೆ ಹೆಚ್ಚಳವಾಗುತ್ತದೆಂದು ಇದು ತಿಳಿಸಿದೆ. ಇಡೀ ದೇಶದಲ್ಲಿ ರಾಜಸ್ತಾನದ ನಂತರ ಹವಾಮಾನ ವೈಪರೀತ್ಯಗಳಿಂದ ಸಂಕಷ್ಟಕ್ಕೀಡಾಗುವ ಎರಡನೇ ರಾಜ್ಯ ಕರ್ನಾಟಕ.


ಋತುಚಕ್ರಗಳ ಅವಧಿಯಲ್ಲಿ ಬದಲಾವಣೆ:
ಮೂರು ಕಾಲಗಳ (ಬೇಸಿಗೆ, ಮಳೆ ಮತ್ತು ಚಳಿಗಾಲ) ಬದಲಾವಣೆ ಮತ್ತು ಈ ಋತುಮಾನಗಳ ಅವಧಿಯಲ್ಲಿ ಉಂಟಾಗುವ ಏರುಪೇರು ಹವಾಮಾನ ಬದಲಾವಣೆಯ ಸೂಚ್ಯಂಕ ಎನ್ನಬಹುದು. ಜಾಗತಿಕ ಪರಿಸರದಲ್ಲಿ ಶಕ್ತಿ ಚಕ್ರದ (ಶಕ್ತಿ ಚಕ್ರವು ಸೌರಶಕ್ತಿ, ವಾಯು, ಒತ್ತಡ, ಉಷ್ಣಾಂಶ ಇವೆಲ್ಲವನ್ನು ಒಳಗೊಂಡಿರುತ್ತದೆ) ಮೇಲೆ ಉಂಟಾಗುವ ಎಲ್ಲ ರೀತಿಯ ಏರುಪೇರುಗಳನ್ನು ಋತುಮಾನದ ಏರುಪೇರುಗಳು ನಮಗೆ ತೋರಿಸಿಕೊಡುತ್ತವೆ. ಹೀಗೆ ಉಂಟಾಗುವ ಏರುಪೇರು ನಮ್ಮ ಜೀವವ್ಯವಸ್ಥೆಯಲ್ಲಿ ಜೀವ ಸಮತೋಲನದ ಮೇಲೆ ದೊಡ್ಡ ಪರಿಣಾಮ ಬೀರುತ್ತವೆ ಮತ್ತು ಕೃಷಿ ಹಾಗೂ ಜಲ ಚಕ್ರದ ಮೇಲೆ ಅಡ್ಡ ಪರಿಣಾಮ ಬೀರುತ್ತದೆ. ಹಲವು ವೈಜ್ಞಾನಿಕ ವಿಧಾನಗಳನ್ನು ಬಳಸಿಕೊಂಡು ಮುಂದಿನ 25 ಅಥವಾ 50 ವರ್ಷಗಳಲ್ಲಿ ಭೂಮಿಯ ಮೇಲೆ ಯಾವ ತಾಪಮಾನ, ಮಳೆ ಪ್ರಮಾಣ ಇರುತ್ತದೆ ಎಂದು ಅಂದಾಜು ಮಾಡಲು ಸಾಧ್ಯ.


ಈ ವರದಿಯು ಏರುತ್ತಿರುವ ಭೂಮಿಯ ತಾಪಮಾನದಿಂದ ಹವಾಮಾನ ವೈಪರೀತ್ಯ, ಬದಲಾಗಲಿರುವ ಹವಾಮಾನ ಸೂಚ್ಯಂಕಗಳು, ಅರಣ್ಯ, ಜಲ ಸಂಪನ್ಮೂಲ ಮತ್ತು ಕೃಷಿ ವಲಯದ ಮೇಲುಂಟಾಗುವ ಅಪಾಯ, ಇದರಿಂದುಂಟಾಗುವ ಸಾಮಾಜಿಕ-ಆರ್ಥಿಕ ಹೊಡೆತಗಳು ಮತ್ತು ಇಂಧನ ಕ್ಷೇತ್ರದಲ್ಲಿ ನಾವು ಮಾಲಿನ್ಯ ತಡೆಗಟ್ಟಲು ಇರುವ ವಿಧಾನಗಳು, ಇತ್ಯಾದಿ ಕುರಿತು ವಿವರಗಳನ್ನು ಒಳಗೊಂಡಿದೆ. ಉದಾಹರಣೆಗೆ, ಸಸ್ಯಜೀವಿಗಳಲ್ಲಿ ಕಂಡುಬರುವ ರೋಗಗಳ ಮೇಲೆ ಹವಾಮಾನ ವೈಪರೀತ್ಯವು ಉಂಟುಮಾಡುವ ದುಷ್ಪರಿಣಾಮವೆಂದರೆ: ಸಸ್ಯ ರೋಗಗಳಿಂದ ನಷ್ಟದ ಮತ್ತಷ್ಟು ಹೆಚ್ಚಳ, ರೋಗ ನಿರ್ವಹಣಾ ತಂತ್ರಗಳಿಗೆ ಮತ್ತಷ್ಟು ವ್ಯಯ, ಸಸ್ಯರೋಗಗಳು ಹೊಸ ಹೊಸ ಭೂಭಾಗಗಳಿಗೆ ಹರಡುವುದು,ಇತ್ಯಾದಿ.

ಉಷ್ಙಾಂಶ ಮತ್ತು ಮಳೆ ಪ್ರಮಾಣದಲ್ಲಿ ಏರುಪೇರು:

2001-07 ರವರೆಗಿನ ಅವಧಿಯಲ್ಲಿ ರಾಜ್ಯದ ಅರಣ್ಯ ಪ್ರದೇಶ ಕಡಿಮೆಯಾಗುತ್ತಾ ಬರುತ್ತಿದ್ದು, ದಟ್ಟ ಅರಣ್ಯ ಪ್ರದೇಶವಂತೂ ಶೇ. 8ರಷ್ಟು ಕಡಿಮೆಯಾಗಿದೆ. ಅಂದರೆ ಕೇವಲ 7 ವರ್ಷಗಳ ಅವಧಿಯಲ್ಲಿ ಸುಮಾರು 2,500 ಚದುರ ಕಿಲೋಮೀಟರ್ ನಷ್ಟು ಅರಣ್ಯ ಪ್ರದೇಶ ನಾಶವಾಗಿದೆ. ಇದಕ್ಕೆ ಹೋಲಿಸಿದರೆ, ಬೆಂಗಳೂರು ನಗರದ ವಿಸ್ತೀರ್ಣ 741 ಚದುರ ಕಿ.ಮೀ ಇದ್ದು, ಬೆಂಗಳೂರು ನಗರದ ವಿಸ್ತೀರ್ಣಕ್ಕಿಂತ 3 ಪಟ್ಟು ಹೆಚ್ಚು ಅರಣ್ಯ ನಾಶವಾಗಿದೆ ಎನ್ನಬಹುದು. 1954ರಿಂದ 2004 ರ 50 ವರ್ಷಗಳ ಅವಧಿಯಲ್ಲಿ ಶೇ. 6 ರಷ್ಟು ಮಳೆ ಬೀಳುವ ಪ್ರಮಾಣ ಕಡಿಮೆಯಾಗಿರುವುದು ಕಳವಳಕಾರಿಯಾದ ಅಂಶ. ಮಳೆ ಏರುಪೇರು ಉಂಟಾಗುವ ಪ್ರದೇಶಗಳೆಂದರೆ: ಚಿಕ್ಕಬಳ್ಳಾಪುರ, ಚಿತ್ರದುರ್ಗ, ಗದಗ, ಕೋಲಾರ, ಮಂಡ್ಯ ಮತ್ತು ತುಮಕೂರು. ಉಷ್ಣಾಂಶ ಹೆಚ್ಚಳ ಕಂಡುಬರುವ ಜಿಲ್ಲೆಗಳು: ರಾಯಚೂರು, ಬಿಜಾಪುರ, ಗುಲ್ಬರ್ಗ ಮತ್ತು ಯಾದಗಿರಿ ಎಂದು ವರದಿ ದಾಖಲಿಸಿದೆ. ಕೃಷ್ಣ ಜಲಾನಯನ ಪ್ರದೇಶದ 6 ಜಿಲ್ಲೆಗಳಲ್ಲಿ ಮಳೆ ಪ್ರಮಾಣದ ಕೊರತೆಯಿಂದ ಆಗಾಗ್ಗೆ ಬರ ಉಂಟಾಗುತ್ತದೆ. ರಾಜ್ಯದ ಎಲ್ಲೆಡೆ ನೀರಿಗಾಗಿ ಆಹಾಕಾರ ಉಂಟಾಗುತ್ತದೆ ಎಂದು ವರದಿ ತಿಳಿಸಿದೆ.

No comments: