Thursday, June 23, 2011
ಶನಿ ಗ್ರಹಕ್ಕೆ ಕಾಟ ಕೊಡುತ್ತಿರುವ ಭೀಕರ ಸುಂಟರಗಾಳಿ!
ರಾಜಾ ವಿಕ್ರಮ ಮತ್ತು ಶನಿ ದೃಷ್ಟಿ:
ಇಡೀ ದೇವರುಗಳಲ್ಲೆಲ್ಲ ಶನಿ ದೇವರನ್ನು ಕಂಡರೆ ಹಲವರಿಗೆ ಭಯ, ಅದರಿಂದಾಗಿ ಜಾಸ್ತಿ ಭಕಿಯ್ತೂ ಎನ್ನಬಹುದು. ಶನಿ ದೃಷ್ಟಿ ಬಿದ್ದವರ ಮೇಲಂತೂ ಶನಿಯು ಉಗ್ರ ಪ್ರತಾಪಿಯಂತೆ ಉಪಟಳ ಕೊಟ್ಟು ಭೀಕರ ಶಿಕ್ಷೆ ನೀಡುತ್ತಾನೆಂದು ಹಲವು ಭಕ್ತರು ಭಾರಿ ಎಚ್ಚರಿಕೆ ಮತ್ತು ಭಯ-ಭಕ್ತಿಯಿಂದ ಅವನಿಗೆ ಪೂಜೆ ಸಲ್ಲಿಸುತ್ತಾರೆ. ಇದಕ್ಕೆ ಉದಾಹರಣೆಯಾಗಿ ಪುರಾಣ ಕಾಲದಲ್ಲಿ ರಾಜಾ ವಿಕ್ರಮ ಎಂಬುವನು ಅತ್ಯುತ್ತಮವಾಗಿ ಆಳುತ್ತಿದ್ದರೂ, ಶನಿ ದೇವರಿಗೆ ಪೂಜೆ ಸಲ್ಲಿಸದೇ ನಿರ್ಲಕ್ಷ್ಯ ವಹಿಸಿದ್ದರ ಫಲವಾಗಿ ಶನಿ ಅವನ ಮೇಲೆ ಉಗ್ರ ದೃಷ್ಟಿ ಬೀರಿ ರಾಜಾ ವಿಕ್ರಮ ತನ್ನ ರಾಜ್ಯವನ್ನೇ ಕಳೆದುಕೊಂಡು ದಯನೀಯವಾಗಿ ಬದುಕುವಂತೆ ಮಾಡುವ ಕಥೆ ಎಲ್ಲಿರಿಗೂ ಚಿರಪರಿಚಿತ.
ಆದರೆ ವಾಸ್ತವವೆಂದರೆ ನಮ್ಮ ಖಗೋಳ ಭೌತಶಾಸ್ತ್ರ ಮತ್ತು ಅದಕ್ಕೆ ಪೂರಕವಾಗಿ ನಮ್ಮ ಭೂಮಿಯಿಂದ ದೂರದಲ್ಲಿರುವ ಇತರೆ ಗ್ರಹಗಳ ನಮ್ಮ ಜ್ಞಾನ, ಆ ಗ್ರಹಗಳ ಬಳಿಗೆ ಕಣ್ಣು ಹಾಯಿಸುವ ಪರಿಣಾಮಕಾರಿ ದೂರದರ್ಶಕಗಳು, ಆಕಾಶಯಾನಗಳು ಹೆಚ್ಚಿದಂತೆಲ್ಲ ಸೂರ್ಯನ ಸುತ್ತಲಿರುವ ಗ್ರಹ ಪರಿವಾರಗಳ ಕುರಿತು ನಮಗೆ ಹೆಚ್ಚಿನ ತಿಳುವಳಿಕೆ ಲಭಿಸಿದೆ. ಇದರಿಂದ ಜ್ಯೋತಿಷಿಗಳು ಮತ್ತು ಕಂದಾಚಾರಿಗಳ ಪುರಾಣ, ಭವಿಷ್ಯತ್-ನುಡಿಗಳೆಲ್ಲವೂ ಕಾಗೆ-ಗೂಬಕ್ಕನ ಕಥೆಗಳೆಂಬುದನ್ನು ಜನಸಾಮಾನ್ಯರು ತಿಳಿದುಕೊಳ್ಳುವ ಸ್ಥಿತಿಯಿದೆ.
ಶನಿ ಗ್ರಹದ ಮೇಲೆರಗಿರುವ ಸುಂಟರಗಾಳಿ:
ಶನಿ ಗ್ರಹದ ಉತ್ತರ ಧ್ರುವದಲ್ಲಿ ಭೀಕರ ಸ್ವರೂಪಿ ಸುಂಟರಗಾಳಿ ಎದ್ದಿದ್ದು, ಅದು ಇಡೀ ಶನಿ ಗ್ರಹದ ತುಂಬೆಲ್ಲ ಹರಡಿಕೊಂಡಿದೆ ಎಂದು ಅಮೇರಿಕಾದ ಕ್ಯಾಸಿನಿ ಗಗನನೌಕೆ ಮತ್ತು ಯೂರೋಪ್ ಗಗನ ವೀಕ್ಷಣಕೇಂದ್ರವು ಭೂಮಿಯಲ್ಲಿ ಅಳವಡಿಸಿರುವ ದೂರದರ್ಶಕಗಳೆರಡೂ ವರದಿ ಮಾಡಿವೆ. ಅಮೇರಿಕಾದ ಬಾಹ್ಯಾಕಾಶ ಸಂಶೋಧನಾ ಸಂಸ್ಥೆಯಾದ ನಾಸಾವು ಈ ಕ್ಯಾಸಿನಿ ಗಗನನೌಕೆಯನ್ನು ಅಂತರಿಕ್ಷಕ್ಕೆ ಕಳುಹಿಸಿಕೊಟ್ಟಿತ್ತು. ಈ ಸುಂಟರಗಾಳಿ ಅದೆಷ್ಟು ಬಲಯುತವಾಗಿದೆಯೆಂದರೆ ಅದು ಇಡೀ ಶನಿ ಗ್ರಹದ ವಾತಾವರಣದ ತುಂಬೆಲ್ಲ ಅನಿಲಭರಿತ ಧೂಳನ್ನು ಹರಡುತ್ತಿದೆ. ಕ್ಯಾಸಿನಿ ಗಗನನೌಕೆಯಲ್ಲಿದ್ದ ರೇಡಿಯೋ ಮತ್ತು ಪ್ಲಾಸ್ಮಾ ತರಂಗಾಂತರ ಉಪಕರಣಗಳು ಮೊದಲಿಗೆ ಸುಂಟರಗಾಳಿಯನ್ನು ಗಮನಿಸಿದವು. ಕ್ಯಾಸಿನಿ ಗಗನನೌಕೆಯ ಅತಿ ನೇರಳೆ ಮ್ಯಾಪಿಂಗ್ ಸ್ಪೆಕ್ಟ್ರೋಮೀಟರ್ ಎಂಬ ಉಪಕರಣವು ಈ ಸುಂಟರಗಾಳಿಯು ಹಿಂಸಾತ್ಮಕ ರೂಪ ತಳೆದು ಅಮೋನಿಯಾ ಅನಿಲವನ್ನು ಎಲ್ಲೆಡೆ ಹರಡುತ್ತಿದೆ ಎಂದು ದಾಖಲಿಸಿದೆ. ಈ ದೊಡ್ಡ ಸುಂಟರಗಾಳಿಯ ಅಗಲ ಸುಮಾರು 5,000 ಕಿಲೋ ಮೀಟರ್ ಇದೆ. ಈ ಸುಂಟರಗಾಳಿಯಿಂದ ಶನಿ ಗ್ರಹದ ವಾತಾವರಣದ ಗಾಳಿಯ ಚಲನೆಯು ತೀವ್ರತರದಲ್ಲಿ ಮಾರ್ಪಾಟಾಗಿದ್ದು ಅಲ್ಲಿನ ಶಕ್ತಿ ಮತ್ತು ವಸ್ತುಗಳನ್ನು ದೂರ ಪ್ರದೇಶಗಳಿಗೆ ದಿಕ್ಕಾಪಾಲಾಗಿ ಚೆಲ್ಲಾ ಪಿಲ್ಲಿಯಾಗಿಸಿದೆ.
ನಮ್ಮ ಭೂಮಿಯಿಂದ ಸುಮಾರು 51 ಕಿಲೋ ಮೀಟರ್ ವರೆಗೆ ಚಾಚಿರುವ ಸ್ಟ್ರ್ಯಾಟೋಸ್ಪಿಯರ್ ಎಂದು ಕರೆಯಲಾಗುವ ವಾತಾವರಣದ ಗಡಿಯ ಕೆಳ ಹಂತದಲ್ಲಿ ಸಾಮಾನ್ಯವಾಗಿ ವಿಮಾನಯಾನ ಮಾಡುವುದನ್ನು ತಪ್ಪಿಸಿ ಇದರ ಮೇಲ್-ಹಂತದಲ್ಲಿ ಯಾನ ಮಾಡಲಾಗುತ್ತದೆ. ಏಕೆಂದರೆ ಈ ಕೆಳ ಹಂತದಲ್ಲಿ ವಾತಾವರಣದಲ್ಲಿನ ವಾಯು ವೇಗ, ಒತ್ತಡ, ಉಷ್ಣತೆ ಇತ್ಯಾದಿಗಳ ಏರಿಳಿತಗಳು ಹೆಚ್ಚಿರುತ್ತವೆ. ಆದರೆ ಶನಿ ಗ್ರಹದ ಸ್ಟ್ರ್ಯಾಟೋಸ್ಪಿಯರ್ ಮೇಲ್-ಹಂತದ ಎತ್ತರದಲ್ಲಿಯೂ ಕೂಡ ಸುಂಟರಗಾಳಿಯ ಪ್ರವಾಹ ಚಿಮ್ಮುತ್ತಿದೆ ಎನ್ನಲಾಗಿದೆ.
ಶನಿ ಗ್ರಹದ ವಾತಾವರಣ ಮತ್ತು ಉಪಗ್ರಹಗಳು:
ಶನಿ ಗ್ರಹವು ಸೂರ್ಯ ಪರಿವಾರದಲ್ಲಿ ಜ್ಯೂಪಿಟರ್ ನಂತರ ಎರಡನೇ ಅತಿ ದೊಡ್ಡ ಗ್ರಹವೆನಿಸಿದೆ. ಆದರೆ ಸೂರ್ಯನಿಂದ ದೂರವಿರುವ 6ನೇ ಗ್ರಹವಾಗಿದೆ. ಇದು ಭೂಮಿಯಿಂದ ಸುಮಾರು 1,20,000 ಕೋಟಿ ಕಿಲೋಮೀಟರ್ ದೂರದಲ್ಲಿದೆ. ಶನಿ ಗ್ರಹದ ತೂಕ ನಮ್ಮ ಭೂಮಿಯ ಒಟ್ಟಾರೆ ತೂಕದ ಮುಕ್ಕಾಲು ಪ್ರಮಾನದ ತೂಕ ಮಾತ್ರವಿದ್ದರೂ ಆಕಾರದಲ್ಲಿ ಭೂಮಿಯ 95 ಪಟ್ಟು ದೊಡ್ಡದಿದೆ. ಶನಿ ಗ್ರಹವು ತನ್ನ ಸುತ್ತ ಆವರಿಸಿರುವ ಒಂಬತ್ತು ಬಳೆಗಳನ್ನು ಹೊಂದಿದ್ದು, ಈ ಬಳೆಗಳು ಮಂಜುಗಡ್ಡೆಯ ಕಣಗಳು, ಬಂಡೆಯ ಚೂರುಗಳು ಮತ್ತು ಧೂಳಿನಿಂದ ಮಾಡಲ್ಪಟ್ಟಿವೆ. ಶನಿ ಗ್ರಹವು ಸುಮಾರು ನಮ್ಮ ಚಂದ್ರನಂತಹ 62 ಉಪಗ್ರಹಗಳನ್ನು ಹೊಂದಿದ್ದು, ಅದರಲ್ಲಿ ಟೈಟಾನ್ ಎಂಬ ಉಪಗ್ರಹವೇ ದೊಡ್ಡದು.
ಗಗನನೌಕೆಗಳಿಂದ ಶನಿ ಗ್ರಹ ಸರ್ವೇಕ್ಷಣೆ:
ಶನಿ ಗ್ರಹದ ವೀಕ್ಷಣೆಯನ್ನು ಮೊದಲು ಬರಿಗಣ್ಣಿಂದ ನೋಡಲಾಗುತ್ತಿತ್ತು. 17ನೇ ಶತಮಾನದಲ್ಲಿ ಬಲು ಪರಿಣಾಮಕಾರಿಯಾದ ದೂರದರ್ಶಕಗಳನ್ನು ಅಭಿವೃದ್ಧಿಪಡಿಸಿ ವೀಕ್ಷಿಸಲಾಗುತ್ತಿತ್ತು. ಇಪ್ಪತ್ತೊಂದನೇ ಶತಮಾನದಲ್ಲಿ ಪಯನಿಯರ್, ವಾಯೇಜರ್ ನೌಕೆಗಳನ್ನು ಕಳುಹಿಸಲಾಯಿತು. 2004ರಲ್ಲಿ ಕ್ಯಾಸಿನಿ-ಹ್ಯೂಜೆನ್ಸ್ ಎಂಬ ಗಗನನೌಕೆಗಳು ಶನಿ ಗ್ರಹ ಪ್ರಯಾಣ ಮಾಡಿ ಆ ಗ್ರಹದ ಸುತ್ತು ಹಾಕಿ, ಗ್ರಹ ಪ್ರದೇಶಕ್ಕಿಳಿದು ಪೋಟೋ ತೆಗೆದುಕೊಂಡವು ಹಾಗೆಯೇ ಅದರ ಉಪಗ್ರಹ ಟೈಟಾನ್ ಮೇಲೆ ಓಡಾಡಿ ಸರ್ವೇಕ್ಷಣೆ ನಡೆಸಿತು. ಟೈಟಾನ್ ನಲ್ಲಿ ದೊಡ್ಡ ಸರೋವರಗಳಿರುವುದು, ಬೆಟ್ಟ ಗುಡ್ಡಗಳು, ದ್ವೀಪಗಳಿರುವ ಚಿತ್ರಗಳನ್ನು ನಮಗೆ ನೀಡಿದೆ.
*******
Subscribe to:
Post Comments (Atom)
2 comments:
ಮಾನ್ಯರೇ, ಇದು ಒಳ್ಳೆಯ ಮಾಹಿತಿ.ನಿಮಗೆ ಧನ್ಯವಾದಗಳು ಶನಿ ಗ್ರಹ ಮತ್ತು ಅದರ ಉಪ ಗ್ರಹಗಳ ಬಗ್ಗೆ ವಿವರವಾಗಿ ತಿಳಿಸಿರುತ್ತೀರಿ. ಅದೇ ರೀತಿ ಬೇರೆ ಗ್ರಹಗಳ ಬಗ್ಗೆ ಸಹ ತಿಳಿಸಲು ಕೋರುತ್ತೇನೆ ಹಾಗೆಯೇ ಇತ್ತೀಚಿಗೆ ಕಳುಹಿಸಿರುವ ಕ್ಯುರಿಯಾಸಿಟಿ ಉಪಗ್ರಹ ನೀಡಿರುವ ಹೊಸ ಮಾಹಿತಿಯ ಬಗ್ಗೆ ಮಾಹಿತಿ ತಿಳಿಸಲು ಕೋರುತ್ತೇನೆ. ನನಗೆ ಸೂರ್ಯನ ಬಗ್ಗೆ ತಿಳಿದುಕೊಳ್ಳಲು ಉತ್ಸುಕನಾಗಿದ್ದೇನೆ.ವಂದನೆಗಲೊಡನೆ.
ನಮಸ್ಕಾರ. ನಿಮ್ಮನ್ನು ಸಂಪರ್ಕಿಸಲು ಪ್ರಯತ್ನಿಸುತ್ತಿದ್ದೇನೆ. ನಿಮ್ಮ ಇಮೇಲ್ ವಿಳಾಸ / ಫೋನ್ ನಂಬರ್ ಕಳುಹಿಸಿಕೊಡಲು ಸಾಧ್ಯವೆ? srimysore@gmail.comಗೆ ಇಮೇಲ್ ಮಾಡಿ.
ಟಿ. ಜಿ. ಶ್ರೀನಿಧಿ
ಇಜ್ಞಾನ ಡಾಟ್ ಕಾಮ್
Post a Comment